ಕನ್ನಡಪ್ರಭ ವಾರ್ತೆ ಸಂಕೇಶ್ವರ

ಮಗನ ಪ್ರಾಣ ಉಳಿಸಲು ಹೋದ ತಾಯಿ, ಕೊನೆಗೆ ಮಗನೊಂದಿಗೆ ತಾನೂ ನೀರುಪಾಲಾದ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ. ಸಂಕೇಶ್ವರದ ಶಂಕಲಿಂಗ ದೇವಸ್ಥಾನದ ಹಿಂಭಾಗದ ಹಿರಣ್ಯಕೇಶಿ ನದಿಯಲ್ಲಿ ಮಂಗಳವಾರ ಈ ದುರ್ಘಟನೆ ಸಂಭವಿಸಿದೆ. ಲಕ್ಷ್ಮೀ ಕುಠೋಳಿ (27) ಹಾಗೂ ಆಕೆಯ ಮಗ ಸುಪ್ರೀತ್ ಕುಠೋಳಿ (10) ಮೃತ ದುರ್ದೈವಿಗಳು.

ಮಂಗಳವಾರ ಸಂಜೆ 10 ವರ್ಷದ ಸುಪ್ರೀತ್ ಹಿರಣ್ಯಕೇಶಿ ನದಿಗೆ ಇಳಿದಿದ್ದ. ನೀರಿನ ಸೆಳೆತಕ್ಕೆ ಸಿಲುಕಿ ಮುಳುಗುತ್ತಿದ್ದ ಮಗನನ್ನು ಕಂಡ ತಾಯಿ ಲಕ್ಷ್ಮೀ ಮಗನನ್ನು ರಕ್ಷಿಸಲು ಕ್ಷಣವೂ ಯೋಚಿಸದೆ ನೀರಿಗೆ ಹಾರಿದ್ದಾರೆ. ಆದರೆ, ದುರಂತವೆಂದರೆ ಇಬ್ಬರೂ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮಂಗಳವಾರ ರಾತ್ರಿಯೇ ತಾಯಿ ಲಕ್ಷ್ಮೀಯವರ ಮೃತದೇಹವನ್ನು ಹೊರ ತೆಗೆದಿದ್ದಾರೆ. ಆದರೆ, ಮಗ ಸುಪ್ರೀತ್‌ನ ಮೃತದೇಹ ಮಾತ್ರ ಬುಧವಾರ ಸಂಜೆಯವರೆಗೂ ಪತ್ತೆಯಾಗಿಲ್ಲ. ಈ ಬಗ್ಗೆ ಸಂಕೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದುವರಿದ ಶೋಧ:

ಬುಧವಾರ ಬೆಳಗ್ಗೆಯಿಂದಲೇ ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ಮೂಲಕ ಹಿರಣ್ಯಕೇಶಿ ನದಿಯಲ್ಲಿ ಸುಪ್ರೀತ್‌ನ ಮೃತದೇಹಕ್ಕಾಗಿ ತೀವ್ರ ಶೋಧ ಕಾರ್ಯ ಮುಂದುವರಿಸಿದ್ದು, ಸುಪ್ರೀತ್‌ ಮೃತದೇಹ ಪತ್ತೆಯಾಗಿಲ್ಲ. ತಾಯಿ-ಮಗ ನೀರುಪಾಲಾದ ಘಟನೆಯಿಂದ ಸಂಕೇಶ್ವರ ಪಟ್ಟಣದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.


ಘಟನೆಗೆ ಸಂಬಂಧಿಸಿದಂತೆ ಮೃತಳ ಪತಿ ಸುಧಾಕರ ಕುಟೋಳಿ ಮಾತನಾಡಿ, ನಾವು 11 ವರ್ಷಗಳಿಂದ ಸುಖ ಜೀವನ ನಡೆಸಿದ್ದು, ಕಳೆದ ಎರಡು ತಿಂಗಳಿನಿಂದ ಪತ್ನಿಗೆ ಆರೋಗ್ಯ ಸಮಸ್ಯೆಗಳಿದ್ದರೂ, ಕುಟುಂಬದಲ್ಲಿ ಯಾವುದೇ ಕಲಹಗಳಿರಲಿಲ್ಲ. ಪತ್ನಿ ಹಾಗೂ ಮಗನ ಸಾವು ನಮ್ಮ ಕುಟುಂಬಕ್ಕೆ ಭಾರೀ ಆಘಾತ ತಂದಿದೆ ಎಂದು ದುಃಖ ವ್ಯಕ್ತಪಡಿಸಿದರು.