ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ದೇಶ ಹಾಗೂ ರಾಜ್ಯ ಸೇರಿದಂತೆ ಸ್ಥಳೀಯ ಮಟ್ಟದಲ್ಲಿಯೂ ಕಾಂಗ್ರೆಸ್‌ ಮಹಿಳೆಯರಿಗೆ ನಾಯಕತ್ವದ ಅವಕಾಶ ನೀಡುವಲ್ಲಿ ಮುಂಚೂಣಿಯಲ್ಲಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿಗೆ ವಿರೋಧಿಯಲ್ಲ ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಪ್ರಧಾನ ಕಾರ್ಯದರ್ಶಿ ಪಲ್ಲವಿ ನಾಡಗೌಡ ಹೇಳಿದರು.

ಈ ಕುರಿತು ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿ ಇಂದಿರಾ ಗಾಂಧಿ ಅವರನ್ನು ನೀಡಿದ ಪಕ್ಷ ಕಾಂಗ್ರೆಸ್. ಇದೇ ರೀತಿ ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಪ್ರತಿಭಾ ಪಾಟೀಲರನ್ನು ಆಯ್ಕೆ ಮಾಡಿದ ಹೆಗ್ಗಳಿಕೆಯೂ ಕಾಂಗ್ರೆಸ್‌ಗೆ ಸಲ್ಲುತ್ತದೆ. ಹೀಗಾಗಿ ಕಾಂಗ್ರೆಸ್‌ ಪಕ್ಷವು ಮಹಿಳಾ ವಿರೋಧಿಯಾಗಿದ್ದರೆ ಇಂತಹ ಸ್ಥಾನಮಾನ ಏಕೆ ನೀಡುತ್ತಿತ್ತು? ಈ ಕುರಿತು ಬಿಜೆಪಿ ಜನರಲ್ಲಿ ತಪ್ಪು ನಂಬಿಕೆ ಮೂಡಿಸುತ್ತಿದೆ ಎಂದು ದೂರಿದರು.

ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವುದು ಕಾಂಗ್ರೆಸ್ ಪಕ್ಷದ ಮೂಲ ತತ್ವವಾಗಿದೆ. ಇದು ಕೇವಲ ಮಾತಿನಲ್ಲಿ ಅಲ್ಲ, ಕಾರ್ಯರೂಪದಲ್ಲಿಯೂ ಸಾಬೀತಾಗಿದೆ. 1992ರಲ್ಲಿ ಜಾರಿಯಾದ 73ನೇ ಮತ್ತು 74ನೇ ಸಂವಿಧಾನ ತಿದ್ದುಪಡಿ ಮೂಲಕ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇ.33 ಮಹಿಳಾ ಮೀಸಲಾತಿಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿತು. ಇದರಿಂದ ಲಕ್ಷಾಂತರ ಮಹಿಳೆಯರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಮೇಯರ್‌ಗಳಾಗಿ ಹೊರಹೊಮ್ಮಿದರು. ನಂತರ ಹಲವು ರಾಜ್ಯಗಳಲ್ಲಿ ಇದನ್ನು ಶೇ.50 ವಿಸ್ತರಿಸಲಾಗಿದೆ ಎಂದು ತಿಳಿಸಿದರು.

ಕ್ಷೇತ್ರ ವಿಂಗಡನೆಗೆ ವಿರೋಧ:


ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ 2023ರಲ್ಲಿಯೇ ಅಂಗೀಕಾರವಾಗಿದೆ. ಪ್ರಸ್ತುತ ಕ್ಷೇತ್ರ ಮರುವಿಂಗಡನೆಯನ್ನು ಸೇರಿಸಿ ಮಂಡಿಸಿದ್ದಾರೆ. ಇದಕ್ಕೆ ಮಾತ್ರ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಕ್ಷೇತ್ರ ಮರುವಿಂಗಡನೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ದಕ್ಷಿಣದಲ್ಲಿ ಶೇ.50 ಮಾಡಿದರೆ ಉತ್ತರ ಪ್ರದೇಶದಲ್ಲಿ 80 ಸ್ಥಾನಗಳಿವೆ. ಅಲ್ಲಿಗೆ 120 ಸ್ಥಾನಗಳಾಗುತ್ತವೆ. ಕರ್ನಾಟಕದಲ್ಲಿ 42 ಸ್ಥಾನಗಳಾಗುತ್ತವೆ. ಉತ್ತರ ಭಾರತದಲ್ಲಿ ಸ್ಥಾನಗಳು ಹೆಚ್ಚಾಗುವುದರ ಬಗ್ಗೆ ನಮ್ಮ ವಿರೋಧವೇ ಹೊರತು ಮಹಿಳಾ ಮೀಸಲಾತಿಗೆ ವಿರೋಧವಿಲ್ಲ. ನಾವು ಮಹಿಳಾ ಮೀಸಲಾತಿ ಪರವಾಗಿದ್ದೇವೆ. ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿಯೊಂದನ್ನೇ ಮಂಡಿಸಿದ್ದರೆ ಕಾಂಗ್ರೆಸ್‌ ಅದಕ್ಕೆ ಸ್ಪಂದಿಸುತ್ತಿತ್ತು ಎಂದರು.

ಮಹಿಳೆಯರ ಪರ ಕಾಂಗ್ರೆಸ್:

ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸ್ವಸಹಾಯ ಸಂಘಗಳ ಚಳವಳಿಗೆ ಕಾಂಗ್ರೆಸ್ ಮಹತ್ವ ನೀಡಿದೆ. ಮಹಿಳಾ ಬ್ಯಾಂಕ್ ಸ್ಥಾಪನೆ, ಮಹಿಳಾ ಉದ್ಯಮಿಗಳಿಗೆ ಸಾಲ ಸೌಲಭ್ಯ, ಇಂದಿರಾ ಗಾಂಧಿ ಮಾತೃತ್ವ ಸಹಾಯ ಯೋಜನೆ ಮೂಲಕ ಗರ್ಭಿಣಿಯರಿಗೆ ಆರ್ಥಿಕ ನೆರವು ನೀಡಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಧ್ಯಾಹ್ನ ಊಟ ಯೋಜನೆಗಳ ಮೂಲಕ ಬಾಲಕಿಯರ ಶಾಲಾ ಹಾಜರಾತಿ ಹೆಚ್ಚಿಸುವಲ್ಲಿ ಕಾಂಗ್ರೆಸ್ ಪಾತ್ರ ಪ್ರಮುಖವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಜನನಿ ಸುರಕ್ಷಾ ಯೋಜನೆಯಿಂದ ಗ್ರಾಮೀಣ ಮಹಿಳೆಯರಿಗೆ ಸುರಕ್ಷಿತ ಹೆರಿಗೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಇನ್ನೂ ಮಹಿಳೆಯರ ಹಕ್ಕುಗಳ ರಕ್ಷಣೆಯಲ್ಲಿಯೂ ಕಾಂಗ್ರೆಸ್ ಸರ್ಕಾರ ಹಲವು ಕಾನೂನುಗಳನ್ನು ತಂದಿದೆ. ಗೃಹ ಹಿಂಸೆ ವಿರುದ್ಧದ ಕಾಯ್ದೆ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆ ಮುಂತಾದವು ಮಹಿಳೆಯರಿಗೆ ಭದ್ರತೆ ಒದಗಿಸುವಲ್ಲಿ ಮಹತ್ವದ್ದಾಗಿದೆ. ಹೀಗಿರುವಾಗ ಕಾಂಗ್ರೆಸ್ ಅದ್ಹೇಗೆ ಮಹಿಳಾ ಮೀಸಲು ವಿರೋಧಿಯಾಗುತ್ತದೆ. ಮಹಿಳಾ ಸಮುದಾಯವನ್ನು ಕಾಂಗ್ರೆಸ್ ವಿರುದ್ಧ ಎತ್ತಿ ಕಟ್ಟುವ ಸಂಚನ್ನು ಬಿಜೆಪಿ ಮಾಡುತ್ತಿದೆ. ಮಹಿಳಾ ಸಮುದಾಯ ಎಚ್ಚರದಿಂದ ಇರಬೇಕು ಎಂದು ತಿಳಿಸಿದರು.

ಮಹಿಳೆಯರ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಕಾಂಗ್ರೆಸ್ ಸದಾ ಕಾರ್ಯನಿರ್ವಹಿಸಿದ್ದು, ಮಹಿಳಾ ಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿಗೆ ತರಲು ಪಕ್ಷ ಕಟ್ಟುನಿಟ್ಟಾಗಿ ಬದ್ಧವಾಗಿದೆ. ಕ್ಷೇತ್ರ ವಿಂಗಡನೆಗೆ ವಿರೋಧವಿದೆ ಎಂದು ಪಲ್ಲವಿ ನಾಡಗೌಡ ತಿಳಿಸಿದರು.

ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವುದು ಕಾಂಗ್ರೆಸ್ ಪಕ್ಷದ ಮೂಲ ತತ್ವವಾಗಿದೆ. ಇದು ಕೇವಲ ಮಾತಿನಲ್ಲಿ ಅಲ್ಲ, ಕಾರ್ಯರೂಪದಲ್ಲಿಯೂ ಸಾಬೀತಾಗಿದೆ. ಮಹಿಳೆಯರ ಹಕ್ಕುಗಳ ರಕ್ಷಣೆಯಲ್ಲಿಯೂ ಕಾಂಗ್ರೆಸ್ ಸರ್ಕಾರ ಹಲವು ಕಾನೂನುಗಳನ್ನು ತಂದಿದೆ. ಹೀಗಿರುವಾಗ ಕಾಂಗ್ರೆಸ್‌ ಏಕೆ ಮಹಿಳಾ ವಿರೋಧಿಯಾಗುತ್ತದೆ?

-ಪಲ್ಲವಿ ನಾಡಗೌಡ, ರಾಜ್ಯ ಕಾಂಗ್ರೆಸ್ ಮಹಿಳಾ ಪ್ರಧಾನ ಕಾರ್ಯದರ್ಶಿ