ಗಜೇಂದ್ರಗಡ: ತಾಲೂಕಿನ ಬಗರ್‌ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ಹಾಗೂ ಸಾಗುವಳಿದಾರರ ಚೀಟಿ ವಿತರಿಸಲು ಆಗ್ರಹಿಸಿ ಸ್ಥಳೀಯ ತಹಸೀಲ್ದಾರ್ ಕಚೇರಿಯಲ್ಲಿ ರೈತರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದ ಹಿನ್ನೆಲೆ ಹೋರಾಟ ಮೂರನೇ ದಿನಕ್ಕೆ ಮುಂದುವರಿಯಿತು.

ಇಲ್ಲಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಹೋರಾಟ ಸ್ಥಳಕ್ಕೆ ರೋಣ ತಹಸೀಲ್ದಾರ್‌ ನಾಗರಾಜ ಆಗಮಿಸಿದ್ದರು. ಬಗರ್ ಹುಕ್ಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ, ಸಾಗುವಳಿ ಚೀಟಿ ವಿತರಣೆ ಮಾಡಬೇಕು ಎಂದು ಸಾಕಷ್ಟು ಬಾರಿ ಹೋರಾಟ ಮಾಡಿ ಮನವಿ ಸಲ್ಲಿಸಲಾಗಿದೆ. ಆದರೆ ಬಗರ್ ಹುಕ್ಕುಂ ಸಮಿತಿ ಅರ್ಜಿ ಸಲ್ಲಿಸಿದ ರೈತರಿಗೆ ನ್ಯಾಯ ಒದಗಿಸಿಲ್ಲ. ಹೀಗಾಗಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ ಎಂದು ರೈತರು ಹೇಳಿದರು.

ರೈತರ ಅಹವಾಲು ಆಲಿಸಿದ ರೋಣ ತಹಸೀಲಾರ್ ನಾಗರಾಜ ಅವರು, ಪ್ರತಿಭಟನಾನಿರತರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಬಂದು, ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವ ವರೆಗೆ ಹೋರಾಟ ಹಿಂದಕ್ಕೆ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ರೋಣ ತಹಸೀಲ್ದಾರ್ ನಡೆಸಿದ ಸಂಧಾನ ವಿಫಲವಾಯಿತು. ಹೋರಾಟದ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ, ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ ಹೋರಾಟದ ಸ್ವರೂಪ ಬದಲಾಯಿಸುತ್ತೇವೆ ಎಂದು ಪ್ರತಿಭಟನಾನಿರತ ರೈತರು ಎಚ್ಚರಿಸಿದರು.

ಈ ವೇಳೆ ರೂಪೇಶ ಮಾಳೋತ್ತರ, ಪೀರು ರಾಠೋಡ, ಚಂದ್ರು ರಾಠೋಡ, ಚನ್ನಪ್ಪ ಗೂಗಲೋತ್ತರ, ಗಣೇಶ ರಾಠೋಡ, ಮೆಹಬೂಬ ಹವಾಲ್ದಾರ, ಗಂಗಮ್ಮ, ಶಾರವ್ವ ಲಮಾಣಿ, ಆನಂದ ರಾಠೋಡ, ಕನಕರಾಯ ಹಾದಿಮನಿ, ಅಭಿಲಾಷ ರಾಠೋಡ, ಗುರು ಶಾಂತಗೌಡರ, ಅನಿಲ್ ಆರ್., ಬಾಲು ರಾಠೋಡ, ಶಿವಪ್ಪ ಮಾಳೋತ್ತರ, ಲೋಕಪ್ಪ ರಾಠೋಡ, ವೀರಭದ್ರಪ್ಪ ಮಾಳೋತ್ತರ ಇದ್ದರು.