ಯಲಬುರ್ಗಾ: ಮಹಿಳಾ ದಿನ ಕೇವಲ ಆಚರಣೆಗೆ ಸೀಮಿತವಾಗದೆ, ಮಹಿಳೆಯರು ಸಮಾಜದಲ್ಲಿ ಸ್ವಾವಲಂಬನೆಯಿಂದ ಬದುಕು ಸಾಗಿಸಿದಾಗ ಮಾತ್ರ ಆಚರಣೆಗೆ ಅರ್ಥ ಬರುತ್ತದೆ ಎಂದು ಪಂಚಮಸಾಲಿ ಸಮಾಜದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಮಂಗಲಾ ಹಂಚಿನಾಳ ಹೇಳಿದರು.
ಪಟ್ಟಣದ ಶಿಕ್ಷಕರ ಪತ್ತಿನ ಸಹಕಾರ ಸಂಘದ ಗುರುಭವನದಲ್ಲಿ ಗುರುವಾರ ತಾಲೂಕು ವೀರಶೈವ ಲಿಂಗಾಯತ ಮಹಿಳಾ ಪಂಚಮಸಾಲಿ ಸಮಾಜದ ಮಹಿಳಾ ಘಟಕದಿಂದ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜದಲ್ಲಿ ಮಹಿಳೆಯರು ಪುರುಷರಿಗೆ ಸಮಾನರಾಗಿ ಎಲ್ಲ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಯಾರಿಗೇನೂ ಕಮ್ಮಿ ಇಲ್ಲವೆಂಬಂತೆ ಕೆಲಸ ಮಾಡುತ್ತಾರೆ. ಬಹುತೇಕ ಮಹಿಳೆಯರ ಹೋರಾಟದ ಫಲದಿಂದ 1975ರಲ್ಲಿ ವಿಶ್ವ ಮಹಿಳಾ ದಿನಾಚರಣೆ ಮಾಡುವುದಕ್ಕೆ ವಿಶ್ವಸಂಸ್ಥೆಯಲ್ಲಿ ಒಪ್ಪಿಗೆ ನೀಡಿದ್ದರಿಂದ ಎಲ್ಲ ರಾಷ್ಟ್ರಗಳಲ್ಲಿ ಆಚರಣೆ ಮಾಡಲಾಗುತ್ತಿದೆ. ಈ ಆಚರಣೆ ಪ್ರತಿನಿತ್ಯವೂ ಆಗಬೇಕಾದರೆ ಮಹಿಳೆಯರು ಶಿಕ್ಷಣವಂತರಾಗಿ ಸಮಾಜದ ಉನ್ನತ ಹುದ್ದೆಯಲ್ಲಿ ಇರಬೇಕು. ಅಂದಾಗ ಮಾತ್ರ ನಾವು ಪ್ರಗತಿಯಾಗಲು ಸಾಧ್ಯವಿದೆ. ಲಿಂಗ ತಾರತಮ್ಯ, ದೌರ್ಜನ್ಯ, ಹಿಂಸೆ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಮುಖ್ಯವಾಗಿ ಶಿಕ್ಷಣಕ್ಕೆ ನಾವು ಪ್ರಾಮುಖ್ಯ ಕೊಡಬೇಕು. ದೇಶ-ವಿದೇಶಗಳಲ್ಲಿ ಮಹಿಳೆಯರು ತಮ್ಮದೇ ಕೊಡುಗೆ ನೀಡಿದ್ದಾರೆ. ಅವರ ಆದರ್ಶ ಅಳವಡಿಸಿಕೊಳ್ಳಬೇಕು ಎಂದರು.ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ರಾಜಶೇಖರ ನಿಂಗೋಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆ ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣ ಅವಶ್ಯವಿದೆ. ನಾವು ಸಬಲೀಕರಣವಾದರೆ ಮಾತ್ರ ದೇಶ ಅಭಿವೃದ್ಧಿಗೊಳಲು ಸಾಧ್ಯವಿದೆ. ಎಲ್ಲ ರಂಗದಲ್ಲಿ ಮಹಿಳೆಯರು ಸಾಧನೆ ದೊಡ್ಡದಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನ ಮಹಿಳೆಯರು ಹೋರಾಟ ಮೂಲಕ ತಮ್ಮ ಹಕ್ಕು ಪಡೆಯಬೇಕು. ಪ್ರತಿಯೊಬ್ಬ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಸೇರಿದಂತೆ ಸಾಕಷ್ಟು ಮಹಿಳೆಯರು ಸಾಧನೆಗೆ ನಮಗೆ ಪ್ರೇರಣೆಯಾಗಬೇಕು. ಮಹಿಳಾ ಘಟಕದಿಂದ ಆಚರಣೆ ಮೂಲ ಉದ್ದೇಶ ಮಹಿಳೆಯರ ಜಾಗ್ರತರಾಗಬೇಕು ಎಂದರು.
ಉಪನ್ಯಾಸಕಿ ಶ್ರೀದೇವಿ ಮುಕ್ತಿಹಾಳ, ಶಿಕ್ಷಕಿಯರಾದ ಗಂಗಮ್ಮ ಸೂಬಗಿನ, ಸುನೀತಾ ಪಂತಗರಾಯ ಮಾತನಾಡಿದರು. ಸಂಘದ ಪದಾಧಿಕಾರಿಗಳಾದ ಸುಮಂಗಲಾ ತೊಂಡಿಹಾಳ, ಭೀಮವ್ವ ಗೋಡೆಕರ್, ಶಾಂತಾ ಬಸನಗೌಡ ತೊಂಡಿಹಾಳ, ರಾಜೇಶ್ವರಿ ಪಾಟೀಲ್, ಚೆನ್ನಮ್ಮ ಪಾಟೀಲ, ಲತಾ ಕಲ್ಯಾಣಿ, ಜ್ಯೋತಿ ಪಲ್ಲೇದ್, ಪ್ರೇಮಾ ಹುಬ್ಬಳ್ಳಿ, ಹೇಮಾ ದೊಡ್ಡಬಸಪ್ಪ ಹಕಾರಿ, ದೇವಕ್ಕ ಗೋಣಿ ಹಾಗೂ ಮಹಿಳೆಯರು ಇದ್ದರು.