ಕೊಪ್ಪಳ: ಇಲ್ಲಿ ನಗರಕ್ಕೆ, ಗ್ರಾಮಕ್ಕೆ ಹೊಂದಿಕೊಂಡ ಬೃಹತ್ ಕೈಗಾರಿಕೆಗಳಿಂದ ಮಕ್ಕಳ, ಮಹಿಳೆಯರ, ವೃದ್ಧರ ಆರೋಗ್ಯಕ್ಕೆ ತೊಂದರೆ ಕೊಡುತ್ತಿವೆ. ಇಲ್ಲಿನ ವಾತಾವರಣ ಕೆಡಿಸಿ, ತಮ್ಮ ಲಾಭ ಒಂದೇ ಅನ್ನುವುದಾದರೆ ಜನರೇಕೆ ಅದನ್ನು ಸಹಿಸಿಕೊಳ್ಳಬೇಕು ಎಂದು ಪಂಜಾಬ್‌ನ ನಿವೃತ್ತ ಸೈನಿಕ ಅಮರಸಿಂಗ್ ಪ್ರಶ್ನಿಸಿದ್ದಾರೆ.
ಬಲ್ಡೋಟಾ ಸ್ಥಾಪನೆ ವಿರೋಧಿಸಿ ಜಿಲ್ಲಾ ಬಚಾವೋ ಆಂದೋಲನ ಸಮಿತಿಯ ಜಂಟಿ ಕ್ರಿಯಾ ವೇದಿಕೆ ನಗರದ ನಗರಸಭೆ ಬಳಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಪಂಜಾಬ್‌ನಿಂದ ಆಗಮಿಸಿ ಪಾಲ್ಗೊಂಡು ಮಾತನಾಡಿದ ಅಮರಸಿಂಗ್ ಅವರು, ನಮ್ಮ ಸಿಖ್ ಧರ್ಮದಲ್ಲಿ ಪ್ರಕೃತಿಗೆ ಮೊದಲ ಆದ್ಯತೆ ಇದೆ. ಪ್ರಕೃತಿ ಹಾಳು ಮಾಡಲು ಯಾರಿಗೂ ಅಧಿಕಾರವಿಲ್ಲ. ಪಂಜಾಬ ರಾಜ್ಯ ಸಣ್ಣ ಮತ್ತು ಗುಡಿ ಕೈಗಾರಿಕೆಗಳ ಮೇಲೆ ಆಧಾರವಾಗಿದೆ. ನಮ್ಮಲ್ಲಿ ಕೃಷಿ, ಕೈಗಾರಿಕೆ ಸಮತೋಲನವಾಗಿದೆ. ನಮ್ಮಲ್ಲಿ ಬಿಸಿಲು ಹೆಚ್ಚು. ಈ ನಾಡು ತಂಪಾದ ಹವಾಗುಣವೆಂದು ಓದಿದ್ದೇವೆ. ಆದರೆ ಈಗ ಇಂತಹ ಮಾಲಿನ್ಯದ ಕಾರಣಕ್ಕೆ ಧಗೆ ಇಲ್ಲಿಯೂ ಹೆಚ್ಚಾಗಿದೆ. ನೀರು, ಗಾಳಿ ಮಾಲಿನ್ಯ ಮಾಡದೆ ಕಾಪಾಡಿಕೊಂಡರಷ್ಟೇ ಮುಂದಿನ ಮಕ್ಕಳ ಭವಿಷ್ಯ ಉಳಿಯುತ್ತದೆ ಎಂದರು.ಸಾಮಾಜಿಕ ಹೋರಾಟಗಾರ ಕಳಕಪ್ಪ ಟಿ. ಬೆಟಗೇರಿ ಮಾತನಾಡಿ, ಕೊಪ್ಪಳ, ಭಾಗ್ಯನಗರದ ಒಂದೂವರೆ ಲಕ್ಷ ಜನರ ಆರೋಗ್ಯ ಅಪಾಯದಲ್ಲಿದೆ ಎಂಬ ಅರಿವು ಶಾಸಕರಿಗೆ ಇರಬೇಕು. ಇಲ್ಲದಿದ್ದರೆ ಅದರ ಪರಿಣಾಮವನ್ನು ಜನರು ತಮ್ಮ ಪ್ರತಿಕ್ರಿಯೆ ರೂಪದಲ್ಲಿ ಹೋರಾಡಿ ತೋರಿಸುತ್ತಾರೆ ಎಂದರು.
ಧರಣಿಯಲ್ಲಿ ಮಾನವ ಬಂಧುತ್ವ ವೇದಿಕೆ ಮುಖಂಡ ಟಿ. ರತ್ನಾಕರ, ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಪ್ರಕಾಶಕ ಡಿ.ಎಂ. ಬಡಿಗೇರ, ಮಾಲಾ ಬಡಿಗೇರ, ಭೀಮಸೇನ ಕಲಕೇರಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಶರಣು ಶೆಟ್ಟರ್, ನಾಗಪ್ಪ ಅಬ್ಬಿಗೇರಿ, ಮಹಾದೇವಪ್ಪ ಮಾವಿನಮಡು, ಈಶ್ವರಪ್ಪ ಕೂಕನಪಳ್ಳಿ, ರಾಜಶೇಖರ ಏಳುಭಾವಿ, ವೈ. ಸತ್ಯನಾರಾಯಣ, ಯಮನೂರಪ್ಪ ಹಾಲಳ್ಳಿ, ನಾಗರಾಜ ಕುಷ್ಟಗಿ, ಬಿ.ಜಿ. ಕರಿಗಾರ, ಬಸವರಾಜಪ್ಪ ಶೆಟ್ಟರ್, ಶಿವಪ್ಪ ಹಲಗೇರಿ, ಈಶ್ವರಪ್ಪ, ದುರುಗೇಶ ಹಳ್ಳಿ ಇದ್ದರು.