ಕೊಪ್ಪಳ: ಬೇಸಿಗೆಯಿಂದ ದಿನೇ ದಿನೇ ಸಮಸ್ಯೆಯಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಬೇಕು. ಹಾಗೊಂದು ವೇಳೆ ಸಮಸ್ಯೆಯಾದರೆ ಅಧಿಕಾರಿಗಳನ್ನೇ ಹೊಣೆಯನ್ನಾಗಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಸಮಸ್ಯೆ ಕುರಿತು ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಬಗ್ಗೆ ಪ್ರತಿ ತಾಲೂಕಿನಲ್ಲಿ ತಹಸೀಲ್ದರ್, ಇಒ, ಗ್ರಾಪಂ ಪಿಡಿಒ ಜತೆಗೆ ಆಯಾ ಭಾಗದ ಎಇ, ಜೆಇಗಳು ನಿಗಾ ವಹಿಸಬೇಕು. ಸಮಸ್ಯಾತ್ಮಕ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡದಿದ್ದರೆ ನೋಟಿಸ್ ಜಾರಿಗೊಳಿಸಲಾಗುವುದು ಎಂದರು.ಎಇಇ, ಜೆಇ ಬೇಜವಾಬ್ದಾರಿ ಸಹಿಸಲ್ಲ, ಪಿಡಿಒ ಕಚೇರಿ ಬಿಟ್ಟು ಹಳ್ಳಿಗಳ ಸಮಸ್ಯೆ ಆಲಿಸಬೇಕು. ಬಿಸಿಲು ಇದೆ ಎಂದು ಕುಳಿತುಕೊಳ್ಳುವುದಲ್ಲ, ಬೆಳಗಿನ ಅವಧಿಗೆ ಸಮಸ್ಯೆ ಇರುವ ಗ್ರಾಮಕ್ಕೆ ತೆರಳಿ ಜನರ ಸಮಸ್ಯೆ ಆಲಿಸಿ, ನಗರ ಹಂತದಲ್ಲಿ ಪೌರಾಯುಕ್ತರು ನಿಗಾ ವಹಿಸಬೇಕು. ಗ್ರಾಮೀಣ ವ್ಯಾಪ್ತಿಯಲ್ಲಿ ಇಒ ಹಾಗೂ ತಹಸೀಲ್ದಾರರ ಜವಾಬ್ದಾರಿ ಹೆಚ್ಚಿದೆ. ಇವರಿಬ್ಬರೂ ಹೆಚ್ಚು ಕಾಳಜಿ ವಹಿಸಬೇಕು. ಕೇವಲ ಮಾಧ್ಯಮದಲ್ಲಿ ಬಂದ ಮೇಲೆ ಹಳ್ಳಿಗೆ ಭೇಟಿ ನೀಡುವುದಲ್ಲ, ಮಾಧ್ಯಮಕ್ಕೂ ಮೊದಲು ನೀವು ಅಲ್ಲಿ ಹಾಜರಿರಬೇಕು ಎಂದರು.
ಕೊಪ್ಪಳ ತಾಲೂಕಿನಲ್ಲಿ ೩೬ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪಟ್ಟಿ ಮಾಡಿದ್ದು, ಸದ್ಯ ೮ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ ಎಂದಿದ್ದೀರಿ, ತಾಲೂಕಿನ ಗುಡಗೇರಿಯಲ್ಲಿ ಸಮಸ್ಯೆ ಇಲ್ಲ ಎನ್ನುತ್ತೀದ್ದೀರಿ, ಅಲ್ಲಿನ ಜನತೆ ಕೆರೆ ನೀರು ಕುಡಿಯುತ್ತಿದ್ದಾರೆ. ನಾನು ಸಹ ಅಧಿಕಾರಿಗಳ ಜತೆ ಮಾತನಾಡಿದ್ದೇನೆ ಎಂದು ಸಂಸದರು ಸಭೆಯಲ್ಲಿ ಪ್ರಸ್ತಾಪಿಸಿದರು.ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸಹಾಯವಾಣಿ ಆರಂಭ ಮಾಡಿದ್ದೇವೆ. ಇಒ ಹಾಗೂ ತಹಸೀಲ್ದಾರ್ ದಿನಕ್ಕೊಂದು ಗ್ರಾಪಂಗೆ ಭೇಟಿ ನೀಡಬೇಕು ಎಂದು ಸಚಿವ ಶಿವರಾಜ ತಂಗಡಗಿ ತಾಕೀತು ಮಾಡಿದರು.
ಕುಡಿಯುವ ನೀರಿನ ಸಮಸ್ಯೆ ಕುರಿತು ತಾಲೂಕಿಗೊಂದು ವಾಟ್ಸ್‌ಆ್ಯಪ್ ಗ್ರೂಪ್ ಮಾಡಬೇಕು. ಡಿಸಿ ಹಾಗೂ ಇಒಗಳನ್ನು ಅಡ್ಮಿನ್ ಮಾಡಿ, ಸಮಸ್ಯೆ ಕುರಿತು ತಕ್ಷಣ ಮಾಹಿತಿ ಹಾಕಬೇಕು. ಕುಷ್ಟಗಿ ವ್ಯಾಪ್ತಿಯಲ್ಲಿ ಡಿಬಿಒಟಿಯಡಿ ಎಲ್ ಆ್ಯಂಡ್ ಟಿ ಕಂಪನಿ ಕೆಲಸ ಮಾಡುತ್ತಿದೆ. ಅವರು ಯಾರ ನಿಯಂತ್ರಣಕ್ಕೂ ಬರುತ್ತಿಲ್ಲ. ಅಲ್ಲಿನ ಹಳ್ಳಿಗಳಿಗೆ ಐದು ದಿನ ನೀರು ಪೂರೈಕೆಯಾಗಿಲ್ಲ. ಹಾಗಾದರೆ ಜನ ಹೇಗೆ ಇರಬೇಕು? ಎಲ್ ಆ್ಯಂಡ್ ಟಿ ಕಂಪನಿ ನಿರ್ಲಕ್ಷ್ಯ ಸಹಿಸಲ್ಲ. ಪೈಪ್ ಲಿಕೇಜ್ ಆದರೂ ನೀರು ಇಲ್ಲದಿದ್ದರೆ ಏನು ಮಾಡಬೇಕು ಎಂದು ಕಂಪನಿಯವರನ್ನು ತರಾಟೆ ತಗೆದುಕೊಂಡರು.
ರಾಜೀವ ಗಾಂಧಿ ಯೋಜನೆ ಸರಿಯಾಗಿ ಕೆಲಸ ಮಾಡಿದರೆ ಇಷ್ಟು ಸಮಸ್ಯೆ ಆಗಲ್ಲ, ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ನೋಡಲ್ ಅಧಿಕಾರಿ ನೇಮಕ ಮಾಡಿ, ಏ. ೨೮ರಂದೇ ಅಧಿಕಾರಿಗಳ ಸಭೆ ಆಗಬೇಕು, ಪಿಡಿಒ, ಪಪಂ ಹಾಗೂ ನಗರಸಭೆ ಅಧಿಕಾರಿಗಳೊಂದಿಗೆ ಸಭೆ ಆಗಬೇಕು, ಮೂರು ದಿನದ ಬಳಿಕ ಶಾಸಕರ ಟಾಸ್ಕ್‌ಫೋರ್ಸ್ ಸಭೆ ನಡೆಸಬೇಕು, ತಾಲೂಕು, ಸ್ಥಳೀಯ ಸಂಸ್ಥೆಗಳ ಕುರಿತಂತೆ ಸಹಾಯವಾಣಿ ಪ್ರಕಟಿಸಬೇಕು ಎಂದರು.
ಸಭೆಯಲ್ಲಿ ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಡಿಸಿ ಡಾ. ಸುರೇಶ ಇಟ್ನಾಳ, ಎಡಿಸಿ ಸಿದ್ರಾಮೇಶ್ವರ, ಜಿಪಂ ಸಿಇಒ ವರ್ಣಿತ್ ನೇಗಿ, ಎಸಿ ಕ್ಯಾ. ಮಹೇಶ ಮಾಲಗಿತ್ತಿ ಉಪಸ್ಥಿತರಿದ್ದರು.ಪ್ರತಿಧ್ವನಿಸಿದ ಕನ್ನಡಪ್ರಭ ವರದಿ: ಕೊಪ್ಪಳ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಕನ್ನಡಪ್ರಭದಲ್ಲಿ ಸರಣಿ ಸುದ್ದಿಯಾಗಿ ಪ್ರಕಟಿಸಿದೆ. ಅದರಲ್ಲಿ ಜಿಲ್ಲೆಯ ಅನೇಕ ಸಮಸ್ಯೆಗಳ ಕುರಿತು ವರದಿಯಾಗಿದ. ಗುಡಿಗೇರಿ, ಕವಲೂರು ಸಮಸ್ಯೆಯ ವರದಿ ಮಾಡಿದ ಮೇಲೆ ಸ್ಪಂದನೆ ಮಾಡಲಾಯಿತು. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಮಸ್ಯೆ ಕುರಿತು ನಮ್ಮನ್ನು ಕೇಳಿದರು. ಮಾಧ್ಯಮದಲ್ಲಿ ಬಂದ ಮೇಲೆ ಕ್ರಮವಹಿಸುವುದಲ್ಲ, ಅದಕ್ಕೂ ಮೊದಲೇ ಸ್ಪಂದಿಸಬೇಕು. ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನಚ್ಚರಿಕೆ ವಹಿಸಿ ಎಂದು ಖಡಕ್ ಆಗಿ ಸಚಿವ ಶಿವರಾಜ ತಂಗಡಗಿ ಎಚ್ಚರಿಕೆ ನೀಡಿದರು.