ಕೊಪ್ಪಳ: ತಾಲೂಕಿನ ಹಿರೇಬಗನಾಳ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ನೂತನ ಕಂಚಿನ ಮೂರ್ತಿ ಅನಾವರಣ ಹಾಗೂ 135ನೇ ಜಯಂತಿ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

ಸಮಾರಂಭವನ್ನು ಉದ್ಘಾಟಿಸಿದ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆಯೂ ನೆಮ್ಮದಿಯ ಬದುಕು ಸಾಗಿಸಲು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ನೀಡಿದರು. ಶೋಷಿತರು, ದಲಿತರು, ಹಿಂದುಳಿದವರ ಕಲ್ಯಾಣಕ್ಕಾಗಿ ದೊಡ್ಡ ಅವಕಾಶಗಳನ್ನು ನೀಡಿದರು. ಸಮಾನತೆಯನ್ನು ತಂದರು. ಅಂಥ ಮಹಾನ್ ನಾಯಕರ ಪ್ರತಿಮೆಯನ್ನು ಸ್ಥಾಪಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಡಾ. ಬಸವರಾಜ್ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣವನ್ನು ಸಮಾಜದ ಉದ್ಧಾರಕ್ಕೆ ಮತ್ತು ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಇರುವ ಅತ್ಯಂತ ಶಕ್ತಿಶಾಲಿ ಅಸ್ತ್ರವೆಂದು ಪರಿಗಣಿಸಿದ್ದರು. ಶಿಕ್ಷಿತರಾಗಿ, ಸಂಘಟಿತರಾಗಿ, ಹೋರಾಡಿ ಇದು ಅವರ ಅತ್ಯಂತ ಪ್ರಸಿದ್ಧ ಕರೆ. ಶಿಕ್ಷಣವು ಸಾಮಾಜಿಕ ಬದಲಾವಣೆಯ ಮತ್ತು ಅನ್ಯಾಯದ ವಿರುದ್ಧ ಹೋರಾಡುವ ಮೊದಲ ಹೆಜ್ಜೆಯಾಗಿದೆ ಎಂದು ಅವರು ನಂಬಿದ್ದರು ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್ ಮಾತನಾಡಿ, ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ನಮ್ಮೆಲ್ಲರ ಬೆಳವಣಿಗೆಯ ಶಿಲ್ಪಿ, ನಾವೆಲ್ಲರೂ ಅವರ ಹಾದಿಯಲ್ಲಿ ನಡೆದು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬದುಕನ್ನು ಕಟ್ಟಿಕೊಂಡು ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಬೇಕು ಎಂದು ಕರೆ ನೀಡಿದರು.

ಶ್ರೀ ಪೂರ್ಣಾನಂದ ಭಾರತಿ ಸ್ವಾಮೀಜಿ, ಶ್ರೀ ಗದ್ದಿಗೆಪ್ಪ ಅಜ್ಜನವರು ಸಾನ್ನಿಧ್ಯ ವಹಿಸಿದ್ದರು. ಸಂಸದ ರಾಜಶೇಖರ್ ಹಿಟ್ನಾಳ್, ವೆಂಕಟೇಶ್ ಬಾರ್ಕೆರ್, ಸಿ.ವಿ. ಚಂದ್ರಶೇಖರ್, ಗೂಳಪ್ಪ ಹಲಗೇರಿ, ಗಣೇಶ್ ಹೊರತಟ್ನಾಳ್, ಮಲ್ಲಿಕಾರ್ಜುನ್ ಪೂಜಾರ್, ರವಿ ದೇವರಮನೆ, ಫಕೀರಪ್ಪ ದೊಡ್ಮನಿ, ಶಿವಣ್ಣ ತಾಳ ಕನಕಪುರ, ಗವಿಸಿದ್ದಪ್ಪ ಹಿರೇಬಗನಾಳ, ಯುವರಾಜ್ ಹೊಸಮನಿ, ಸಾಗರ್ ದೊಡ್ಮನಿ, ನಾಗರಾಜ್ ಪೂಜಾರ ಭಾಗವಹಿಸಿದ್ದರು.