ಕನ್ನಡಪ್ರಭ ವಾರ್ತೆ ಮಂಡ್ಯ
ಅವೈಜ್ಞಾನಿಕವಾಗಿ ಅಸ್ಥಿ ವಿಸರ್ಜನೆ ಮಾಡುವುದರಿಂದ ನದಿಗಳು ಕಲುಷಿತಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದಲ್ಲಿ ಅಸ್ಥಿ ವಿಸರ್ಜನೆ ವೇಳೆ ಬಟ್ಟೆ ಮತ್ತು ಪೂಜಾ ಸಾಮಗ್ರಿಗಳನ್ನು ನದಿಗೆ ಎಸೆಯುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಗರಾಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಅಸ್ಥಿ ವಿಸರ್ಜನೆಯ ಜೊತೆಗೆ ಬಟ್ಟೆ ಮತ್ತು ಪೂಜಾ ಸಾಮಗ್ರಿಗಳನ್ನು ನದಿಗೆ ಎಸೆಯುವುದರಿಂದ ಮಾಲಿನ್ಯ ಹೆಚ್ಚಾಗುತ್ತಿದೆ. ವೈಜ್ಞಾನಿಕ ರೀತಿಯಲ್ಲಿ ಧಾರ್ಮಿಕ ವಿಧಿ-ವಿಧಾನಗಳ ಆಚರಣೆ ಹಾಗೂ ಅಸ್ಥಿ ವಿಸರ್ಜನೆ ಮಾಡುವಾಗ ನೈರ್ಮಲ್ಯ ಕಾಪಾಡುವ ಕ್ರಮಗಳನ್ನು ಕೈಗೊಳ್ಳುವಂತೆ ಶ್ರೀರಂಗಪಟ್ಟಣ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು.
ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಲು ಬರುವ ಪ್ರವಾಸಿಗರಿಂದ ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿವೆ. ಪಶ್ಚಿಮವಾಹಿನಿ, ಸ್ನಾನಘಟ್ಟ, ಗೋಸಾಯಿ ಘಾಟ್ ಮತ್ತು ಸಂಗಮ ಸ್ಧಳಗಳಲ್ಲಿ ಅಸ್ಥಿ ವಿಸರ್ಜನೆ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸಲು ಪುರೋಹಿತರಿಗೆ ನಿರ್ದಿಷ್ಟ ದರ ನಿಗದಿಪಡಿಸಬೇಕು. ಹೆಚ್ಚುವರಿ ಹಣ ವಸೂಲಿ ಮಾಡುವ ಟೆಂಡರ್‌ದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಸ್ಥಿ ವಿಸರ್ಜನೆ ಮಾಡುವ ಸ್ಧಳಗಳಲ್ಲಿ ಸಿಸಿ ಟೀವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ತಿಳಿಸಿದರು.ನದಿಯ ಪಾವಿತ್ರ್ಯತೆ ಮತ್ತು ಪರಿಸರ ರಕ್ಷಣೆಗಾಗಿ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಅವರು ಸ್ಥಳಕ್ಕೆ ಭೇಟಿ ನದಿ ಪಾತ್ರವು ಮಲಿನ ಆಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು. ಶ್ರೀರಂಗಪಟ್ಟಣ ಪುರಸಭೆ ಮುಖ್ಯಾಧಿಕಾರಿಗಳು ಅಸ್ಥಿ ವಿಸರ್ಜನೆ ಮಾಡುವ ಪುರೋಹಿತರ ಸಭೆ ಕರೆದು ವೈಜ್ಞಾನಿಕ ರೀತಿಯಲ್ಲಿ ಧಾರ್ಮಿಕ ವಿಧಿವಿಧಾನ ಕೈಗೊಳ್ಳುವಂತೆ ತಿಳಿಸುವಂತೆ ಹೇಳಿದರು.
ನದಿಯ ಪಾವಿತ್ರ್ಯತೆ ಮತ್ತು ಪರಿಸರ ರಕ್ಷಣೆಗಾಗಿ ಪ್ರತ್ಯೇಕವಾದ ಮಾರ್ಗಸೂಚಿ ಸಿದ್ಥಪಡಿಸಿ ಹಾಗೂ ನದಿ ಪಾತ್ರವು ಮಲೀನವಾಗದಂತೆ ಅಗತ್ಯಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಥಿ ಕೋಶದ ಯೋಜನಾಧಿಕಾರಿ ನರಸಿಂಹಮೂರ್ತಿ, ಕಾರ್ಯಪಾಲಕ ಅಭಿಯಂತರರಾದ ಪ್ರತಾಪ್ ಹಾಗೂ ಶ್ರೀರಂಗಪಟ್ಟಣ ಮುಖ್ಯಾಧಿಕಾರಿ ಸಭೆಯಲ್ಲಿ ಭಾಗವಹಿಸಿದ್ದರು.