ಕನ್ನಡಪ್ರಭ ವಾರ್ತೆ ಮದ್ದೂರು
ಜನರ ಸಮಸ್ಯೆಗೆ ಸ್ಪಂದಿಸುವುದು, ಬಡವರ ಪರ ಕೆಲಸ ಮಾಡುವುದು, ಹೆಚ್ಚು ಅನುದಾನ ತಂದು ಕಾಮಗಾರಿಗಳನ್ನು ನಿರ್ವಹಿಸುವುದು ಸರ್ವಾಧಿಕಾರಿ ಧೋರಣೆಯೇ ಎಂದು ಪ್ರಶ್ನಿಸಿದ ಶಾಸಕ ಕೆ.ಎಂ.ಉದಯ್ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ವಿರುದ್ಧ ಹರಿಹಾಯ್ದರು.ಮದ್ದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹಗರಲಿಂಗನದೊಡ್ಡಿ, ಡಿ.ಹೊಸೂರು, ಹಳ್ಳಿಕೆರೆ, ಅಂಕೇಗೌಡನದೊಡ್ಡಿ ಹಾಗೂ ಕೆಂಪೇಗೌಡನದೊಡ್ಡಿ ಗ್ರಾಮಗಳ ಗ್ರಾಮ ಪರಿಮಿತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ವಿರೋಧ ಪಕ್ಷದ ನಾಯಕರು ಯಾರಾದರೂ ಬಂದು ಕೆಲಸ ಮಾಡಿದರೆ ಅವರಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡುತ್ತೇನೆ. ಅದು ಬಿಟ್ಟು ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನನ್ನ ವಿರುದ್ಧ ಸರ್ವಾಧಿಕಾರಿ ಧೋರಣೆ ಎಂದರೆ ಅವರಿಗೆ ಶೋಭೆ ತರುವುದಿಲ್ಲ ಎಂದರು.ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸಿಆರ್‌ಎಸ್ ಅನುದಾನ ತಂದು ಕೆ.ಬೆಳ್ಳೂರು ಗ್ರಾಮದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ತಡೆಯೊಡ್ಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಯಾವುದೇ ರೀತಿಯ ಧಮಕಿ ಹಾಕಿಲ್ಲ. ಅಂತಹ ಕುಯುಕ್ತಿ ಬುದ್ಧಿ ನನ್ನ ಜಾಯಮಾನದಲ್ಲೂ ಇಲ್ಲ. ಎರಡು ಕೊಠಡಿಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಇನ್ನೂ ಎರಡು ಕೊಠಡಿ ನಿರ್ಮಿಸಲಿ. ಅದಕ್ಕೆ ನನ್ನ ಅಭ್ಯಂತರವಿಲ್ಲ ಎಂದರು.
ಈ ತಾಲೂಕಿನಲ್ಲಿ ಸಮಸ್ಯೆ ಪರಿಹಾರ ಆಗಬೇಕು. ಯಾರೇ ಬಂದು ಕೆಲಸ ಮಾಡಿದರೂ, ಅದನ್ನು ಸ್ವಾಗತಿಸುವುದರ ಜೊತೆಗೆ ಅವರಿಗೆ ಬೆಂಬಲವಾಗಿ ನಿಲ್ಲುತ್ತೇನೆ. ಕೆಲಸ ಮಾಡುವುದಾದರೆ ಅದಕ್ಕೆ ನಾನು ತಡೆಯೊಡ್ಡುವುದಿಲ್ಲ. ದಾನ ಕೊಡಲಿ, ಕೆಲಸ ಮಾಡಿಸಲು ಅವರಿಗೆ ಹಾರ ಹಾಕಿ ಅಭಿನಂದಿಸುತ್ತೇನೆ ಎಂದರು.
ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಿದರೆ ಸರ್ವಾಧಿಕಾರಿ ಧೋರಣೆಯೇ, ನನಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಇಚ್ಛೆ ಇರಲಿಲ್ಲ. ಟ್ರಸ್ಟ್‌ನಿಂದಲೇ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದೆ. ಅದಕ್ಕೆ ಶಕ್ತಿ ಬೇಕು ಎಂಬ ಕಾರಣಕ್ಕೆ ರಾಜಕಾರಣಕ್ಕೆ ಬಂದಿದ್ದೇನೆ. ನಾನು ಚಿಲ್ಲರೆ ರಾಜಕಾರಣ ಮಾಡುವುದಿಲ್ಲ ಎಂದು ಗುಡುಗಿದರು.
ಕ್ಷೇತ್ರದ ಸಮಸ್ಯೆಗೆ ಪರಿಹಾರ ಕೊಡಿಸಬೇಕು. ಬಡವರಿಗೆ ಅನುಕೂಲ ಆಗಬೇಕು. ಆ ಉದ್ದೇಶಕ್ಕೆ ಬಂದಿದ್ದೇನೆ. ಬೆರಳು ತೋರಿಸಿಕೊಂಡು ಜನರ ಬಳಿ ಥೂ ಎನಿಸಿಕೊಳ್ಳಲು ಬಂದಿಲ್ಲ. ಎಲ್ಲವನ್ನೂ ಬಿಟ್ಟು ಜನರ ಸಮಸ್ಯೆ ತಿಳಿದುಕೊಂಡು ಅದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಭೇಟಿ ಮಾಡಿ ನಮ್ಮ ಕೆಲಸ ಮುಗಿಸುತ್ತಿದ್ದೇನೆ. ಸ್ವಂತ ಕೆಲಸ ಬಿಟ್ಟು ಐದು ವರ್ಷವೇ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಬಿ.ಹೊಸೂರು, ಹಳ್ಳಿಕೆರೆ, ಕೆಂಪೇಗೌಡನದೊಡ್ಡಿ, ಅಂಕೇಗೌಡನದೊಡ್ಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಬಹಳಷ್ಟು ವರ್ಷಗಳಿಂದ ನೆನಗುದಿಗೆ ಬಿದ್ದಿತ್ತು. ಗ್ರಾಮಸ್ಥರ ಮನವಿ ಮೇರೆಗೆ ಈ ಗ್ರಾಮಗಳನ್ನು ಆಯ್ಕೆ ಮಾಡಿ 1 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ್ದೇನೆ. ಈಗಾಗಲೇ 100 ಹಳ್ಳಿಗಳಿಗೆ ವಿಶೇಷವಾಗಿ ಪೂಜೆ ಮಾಡಿ ಕಾಮಗಾರಿಗೆ ಚಾಲನೆ ಕೊಡುವುದಾಗಿ ಭರವಸೆ ನೀಡಿದರು.
ನೀರಿನ ಸಮಸ್ಯೆ ನೀಗಿಸಲು ಕೆರೆಗಳ ಅಭಿವೃದ್ಧಿಗೆ ಮುಂದಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಹಣದ ಕೊರತೆಯನ್ನೂ ಪರಿಹರಿಸಿದ್ದೇನೆ. ಇನ್ನು ಮೂರು ತಿಂಗಳಲ್ಲಿ ಕೆರೆಗಳ ಸಂಪೂರ್ಣ ಅಬಿವೃದ್ಧಿಗೆ ಚಾಲನೆ ನೀಡಲಾಗುವುದು ಎಂದರು.ಮುಖಂಡರಾದ ಕೂಳಗೆರೆ ಜಯರಾಮ್, ತಿಮ್ಮೇಗೌಡ, ಪಾಪಣ್ಣ, ಬೋರೇಗೌಡ, ಶ್ರೀನಿವಾಸ್, ಮನು, ಬಸವರಾಜು ಮತ್ತಿತರರಿದ್ದರು.