ಬಾಣಂತಿ, ಹಸುಗೂಸನ್ನು ಹೊರಹಾಕಿದ್ದ ಫೈನಾನ್ಸ್‌ ಸಿಬ್ಬಂದಿ

| Published : Jan 25 2025, 01:02 AM IST

ಸಾರಾಂಶ

ಸಾಲ ವಸೂಲಾತಿಗೆ ಬಂದ ಖಾಸಗಿ ಫೈನಾನ್ಸ್‌ ಸಿಬ್ಬಂದಿ ಒಂದು ತಿಂಗಳ ಬಾಣಂತಿ ಹಾಗೂ ಹಸುಗೂಸನ್ನು ಲೆಕ್ಕಿಸದೇ ಮನೆಯಿಂದ ಎಲ್ಲರನ್ನೂ ಹೊರಗೆ ಹಾಕಿ ಮನೆ ಜಪ್ತಿ ಮಾಡಿದ ಅಮಾನವೀಯ ಘಟನೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪ್ರತಿನಿಧಿಸುತ್ತಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ತಾರಿಹಾಳ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಾಲ ವಸೂಲಾತಿಗೆ ಬಂದ ಖಾಸಗಿ ಫೈನಾನ್ಸ್‌ ಸಿಬ್ಬಂದಿ ಒಂದು ತಿಂಗಳ ಬಾಣಂತಿ ಹಾಗೂ ಹಸುಗೂಸನ್ನು ಲೆಕ್ಕಿಸದೇ ಮನೆಯಿಂದ ಎಲ್ಲರನ್ನೂ ಹೊರಗೆ ಹಾಕಿ ಮನೆ ಜಪ್ತಿ ಮಾಡಿದ ಅಮಾನವೀಯ ಘಟನೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪ್ರತಿನಿಧಿಸುತ್ತಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ತಾರಿಹಾಳ ಗ್ರಾಮದಲ್ಲಿ ನಡೆದಿದೆ. ಈ ವಿಚಾರ ಅರಿತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ತ್ವರಿತವಾಗಿ ಸ್ಪಂದಿಸಿ ಮನೆಯ ಬೀಗ ತೆರವುಗೊಳಿಸಿ ಕುಟುಂಬದವರನ್ನು ಮನೆಗೆ ಸೇರಿಸಿದ್ದಾರೆ. ಅಪಘಾತದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಸುದ್ದಿ ತಿಳಿದ ತಕ್ಷಣ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಆಪ್ತ ಸಹಾಯಕರನ್ನು ಸ್ಥಳಕ್ಕೆ ಕಳಿಸಿದ ಸಚಿವೆ, ಸಂತ್ರಸ್ತ ಕುಟುಂಬಕ್ಕೆ ಆಹಾರ ಧಾನ್ಯ ಮತ್ತು ಆರ್ಥಿಕ ನೆರವು ಒದಗಿಸಿದರು. ನಂತರ ಹಣಕಾಸು ಸಂಸ್ಥೆಯ ಪ್ರತಿನಿಧಿಗಳ ಜೊತೆ ಮಾತನಾಡಿ, ಸಾಲ ಮರುಪಾವತಿಸಲು ಸಮಯಾವಕಾಶ ಕೊಡಿಸಿದ್ದಲ್ಲದೆ, ಮನೆಯ ಬೀಗ ತೆರವು ಮಾಡಿಸಿ ಕುಟುಂಬಸ್ಥರನ್ನು ಮನೆಯೊಳಗೆ ಸೇರಿಸಿದರು. ಕುಟುಂಬಸ್ಥರು ಕೇವಲ ಸಾಲದ ಅಸಲನ್ನಷ್ಟೇ ತುಂಬಲಿದ್ದು, ಅದಕ್ಕೂ ಕಾಲಾವಕಾಶ ನೀಡಬೇಕು ಎನ್ನುವ ತಾಕೀತನ್ನು ಸಚಿವರು ಮಾಡಿದ್ದಾರೆ.

ಆಸ್ಪತ್ರೆಯಲ್ಲಿದ್ದರೂ, ತುರ್ತಾಗಿ ಸ್ಪಂದಿಸಿ, ಮಾನವೀಯತೆ ತೋರಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಾರ್ಯ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿ ಧನ್ಯವಾದ ಸಲ್ಲಿಸಿದರು.

ಘಟನೆ ಆಗಿದ್ದೇನು?: ಪೊಲೀಸ್‌ ಭದ್ರತೆಯಲ್ಲಿ ಆಗಮಿಸಿದ ಫೈನಾನ್ಸ್‌ ಕಂಪನಿಯೊಂದರ ಸಿಬ್ಬಂದಿ, ಮನೆಯಲ್ಲಿದ್ದ ಎಲ್ಲ ಸದಸ್ಯರನ್ನು ಹೊರಹಾಕಿದರು. ಅಲ್ಲದೆ, ಮನೆಯಲ್ಲಿದ್ದ ಪಾತ್ರೆ, ಬಟ್ಟೆ ಸೇರಿದಂತೆ ಮತ್ತಿತರ ಸಾಮಗ್ರಿಗಳನ್ನು ಕೂಡ ಬೀದಿಗೆ ಎಸೆದು ಮನೆಗೆ ಬೀಗ ಹಾಕಿದರು. ಮನೆ ಗೋಡೆ ಮುಂದೆ ಇದು ಹರಾಜಿಗಿದೆ ಎಂದು ಬರೆಸಿದರು. ಹೀಗಾಗಿ ಬೀದಿಗೆ ಬಂದಿರುವ ಈ ಕುಟುಂಬಕ್ಕೆ ಇದೀಗ ದಿಕ್ಕು ತೋಚದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ತಾರಿಹಾಳ ಗ್ರಾಮದ ಗಣಪತಿ ರಾಮಚಂದ್ರ ಲೋಹಾರ ಎಂಬುವರ ಮನೆಯನ್ನೇ ಜಪ್ತಿ ಮಾಡಲಾಗಿದೆ. ಗಣಪತಿ ಅವರು 5 ವರ್ಷಗಳ ಹಿಂದೆ ಮನೆ ಕಟ್ಟಿಸಲು ಖಾಸಗಿ (ಆಪ್ಟಸ್ ವ್ಯಾಲ್ಯೂ ಹೌಸಿಂಗ್ ಫೈನಾನ್ಸ್‌) ಫೈನಾನ್ಸ್‌ನಿಂದ ₹5 ಲಕ್ಷ ಸಾಲ ಪಡೆದಿದ್ದರು. ನಿರಂತರ ಮೂರು ವರ್ಷಗಳ ಕಾಲ ಕಂತುಗಳನ್ನು ಸರಿಯಾಗಿಯೇ ತುಂಬುತ್ತ ಬಂದಿದ್ದರು. ಆದರೆ, ವೃದ್ಧ ತಾಯಿಗೆ ಅನಾರೋಗ್ಯ ಮತ್ತು ಮಗಳ ಹೆರಿಗೆ ಆದ ಹಿನ್ನೆಲೆಯಲ್ಲಿ ಕಳೆದ 6 ತಿಂಗಳಿಂದ ಸಾಲದ ಕಂತು ಪರುಪಾವತಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಫೈನಾನ್ಸ್‌ನವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶದಂತೆ ಫೈನಾನ್ಸ್‌ ಸಿಬ್ಬಂದಿ, ಪೊಲೀಸರು ಹಾಗೂ ವಕೀಲರ ಸಮ್ಮುಖದಲ್ಲೇ ಮನೆ ಖಾಲಿ ಮಾಡಿಸಿದರು. ಮನೆ ಗೋಡೆಯ ಮೇಲೆ ಹರಾಜಿಗಿದೆ ಎಂಬ ಬರಹವನ್ನೂ ಬರೆಸಿದರು.ತಾರಿಹಾಳ ಗ್ರಾಮದಲ್ಲಿ ಫೈನಾನ್ಸ್‌ ಸಿಬ್ಬಂದಿ ಬಾಣಂತಿ, ಹಸುಗೂಸನ್ನು ಲೆಕ್ಕಿಸದೇ ಹೊರಹಾಕಿ ಮನೆ ಸೀಜ್‌ ಮಾಡಿರುವ ಘಟನೆ ನಡೆಯಬಾರದಿತ್ತು. ಈ ಬಗ್ಗೆ ಗಮನ ಹರಿಸುತ್ತೇವೆ. ಜಿಲ್ಲೆಯಲ್ಲಿ ಮೈಕ್ಸೋ ಫೈನಾನ್ಸ್‌ ಕಿರುಕುಳದ ಕುರಿತು ವ್ಯಾಪಕ ದೂರುಗಳು ಬರುತ್ತಿವೆ. ಮಿಡಲ್‌ ಮೆನ್‌, ಮೂರನೇ ವ್ಯಕ್ತಿಗಳಿಂದ ಕಾಟ ಕೊಡುತ್ತಿರುವುದು ನಮ್ಮ ಇಂಟಲಿಜೆನ್ಸ್‌ ಮೂಲಕ ಮಾಹಿತಿ ಇದೆ. ಈಗಾಗಲೇ ನಾನು ಕಿರುಕುಳ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

- ಮೊಹಮ್ಮದ್‌ ರೋಷನ್‌, ಜಿಲ್ಲಾಧಿಕಾರಿ ಬೆಳಗಾವಿ