ಕೊಡಗು ಔಷಧಿ ವ್ಯಾಪಾರಿಗಳ ಸಂಘದಿಂದ ರಕ್ತ ಸಂಗ್ರಹಣಾ ಶಿಬಿರ

| Published : Jan 25 2025, 01:02 AM IST

ಸಾರಾಂಶ

ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ, ರಾಷ್ಟ್ರೀಯ ಔಷಧಿ ವ್ಯಾಪಾರಸ್ಥರ ಸಂಘಕ್ಕೆ 50 ವರ್ಷಗಳ ಸಂಭ್ರಮದ ಹಿನ್ನಲೆಯಲ್ಲಿ ರಕ್ತಸಂಗ್ರಹ ಶಿಬಿರ ಆಯೋಜನೆಗೊಂಡಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮನುಷ್ಯನ ದೇಹದಲ್ಲಿ ಪ್ರಮುಖ ಅಂಶವಾಗಿರುವ ರಕ್ತ ಕೂಡ ಔಷಧೀಯ ಗುಣ ಹೊಂದಿರುವುದರಿಂದ ಇಂದಿನ ಕಾಲದಲ್ಲಿ ಜೀವಸಂರಕ್ಷಕ ರಕ್ತಕ್ಕೆ ಬೇಡಿಕೆಯ ಪ್ರಮಾಣ ಹೆಚ್ಚುತ್ತಲೇ ಇದೆ. ಈ ನಿಟ್ಟಿನಲ್ಲಿ ರಕ್ತ ಸಂಗ್ರಹಣೆ ಮೂಲಕ ಕೊಡಗಿನ ಆಸ್ಪತ್ರೆಗಳಲ್ಲಿ ರಕ್ತದ ಸರಬರಾಜು ಅಧಿಕವಾಗಬೇಕಾಗಿದೆ ಎಂದು ಜಿಲ್ಲಾ ಸಹಾಯಕ ಔಷಧಿ ನಿಯಂತ್ರಕ ಅಧಿಕಾರಿ ಗುರುನಾಥ್ ಹೇಳಿದ್ದಾರೆ.

ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ, ರಾಷ್ಟ್ರೀಯ ಔಷಧಿ ವ್ಯಾಪಾರಸ್ಥರ ಸಂಘಕ್ಕೆ 50 ವರ್ಷಗಳ ಸಂಭ್ರಮದ ಹಿನ್ನಲೆಯಲ್ಲಿ ಆಯೋಜಿತ ರಕ್ತಸಂಗ್ರಹ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಗುರುನಾಥ್, ರಕ್ತದಾನವನ್ನು ಯಾರೂ ವೃತ್ತಿಯನ್ನಾಗಿ ಪರಿವರ್ತಿಸಿಕೊಳ್ಳಬಾರದು. ರಕ್ತ ದಾನ ನೀಡುವುದು ಮತ್ತೋರ್ವರ ಜೀವ ಉಳಿಸುವ ಮಾನವೀಯ ಕಾರ್ಯ ಎಂದು ದಾನಿಗಳು ತಿಳಿದುಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.

ಆರೋಗ್ಯವಂತ ವ್ಯಕ್ತಿ 3 ತಿಂಗಳಿಗೊಮ್ಮೆ ರಕ್ತ ನೀಡಬಹುದಾಗಿದೆ. ಕೊಡಗಿನ ಜಿಲ್ಲಾಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ಹೆಚ್ಚುತ್ತಿರುವ ರಕ್ತದ ಬೇಡಿಕೆಗೆ ಅನುಗುಣವಾಗಿ ಶಿಬಿರಗಳ ಮೂಲಕ ರಕ್ತದ ಸಂಗ್ರಹ ಕೂಡ ಹೆಚ್ಚಾಗಬೇಕೆಂದು ಗುರುನಾಥ್ ಹೇಳಿದರು.

ರೆಡ್‌ಕ್ರಾಸ್‌ ಜಿಲ್ಲಾ ಉಪಾಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಎಐ ನಂಥ ಅತ್ಯಾಧುನಿಕ ತಂತ್ರಜ್ಞಾನಗಳು ಎಷ್ಟೇ ಬಂದರೂ ಮಾನವನ ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಕಂಡುಹಿಡಿಯಲು ಅಸಾಧ್ಯವಾಗಿದೆ. ಕೊಡಗು ಜಿಲ್ಲೆಯ ರಕ್ತ ನಿಧಿ ಕೇಂದ್ರಕ್ಕೆ ಮಾಸಿಕವಾಗಿ 500 ಯೂನಿಟ್ ರಕ್ತದ ಅಗತ್ಯತೆಯಿದ್ದು, ಮಾಸಿಕವಾಗಿ ಕನಿಷ್ಟ 10 ರಕ್ತಸಂಗ್ರಹಣೆಯ ಶಿಬಿರಗಳ ಅಗತ್ಯ ಕಂಡುಬಂದಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಸಂಘಸಂಸ್ಥೆಗಳು ರಕ್ತದಾನ ಶಿಬಿರಗಳನ್ನು ಆಯೋಜಿಸುವ ಅಗತ್ಯವಿದೆ ಎಂದರು.

250 ಸದಸ್ಯ ಬಲದ ಕೊಡಗು ಔಷಧಿ ವ್ಯಾಪಾರಿಗಳ ಸಂಘವು ರಾಜ್ಯದಲ್ಲಿಯೇ ಅತ್ಯಂತ ಕಿರಿಯ ಸಂಘವಾಗಿದ್ದರೂ ರಾಷ್ಟ್ರೀಯ ಸಂಘಕ್ಕೆ ಕೊಡಗಿನಿಂದ ಅಂಬೆಕಲ್ ಜೀವನ್ ಕುಶಾಲಪ್ಪ ಅವರನ್ನು ಸಂಘಟನಾ ಕಾರ್ಯದರ್ಶಿಯನ್ನಾಗಿ ಕಳುಹಿಸುವ ಮೂಲಕ ಕೊಡಗು ಗಮನ ಸೆಳೆಯುವಂತಾಗಿದೆ ಎಂದು ಶ್ಲಾಘಿಸಿದರು.

ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಗಾಯತ್ರಿ ಮಾತನಾಡಿ, ರಕ್ತದಾನಿಗಳಲ್ಲಿ ರಕ್ತ ನೀಡಿದ 24 ಗಂಟೆಗಳಲ್ಲಿಯೇ ಮತ್ತೆ ಹೊಸ ರಕ್ತದ ಸಂಚಾರ ಉಂಟಾಗಲಿದೆ. ರಕ್ತವನ್ನು ದಾನವಾಗಿ ನೀಡಲು ಯಾವುದೇ ಹಿಂಜರಿಕೆ ಬೇಕಾಗಿಲ್ಲ ಎಂದರು.

ರಾಷ್ಟ್ರೀಯ ಔಷಧಿ ವ್ಯಾಪಾರಸ್ಥರ ಸಂಘದ ಸಂಘಟನಾ ಕಾರ್ಯದರ್ಶಿ ಮತ್ತು ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಂಬೆಕಲ್ ಜೀವನ್ ಕುಶಾಲಪ್ಪ ಮಾತನಾಡಿ, ರಾಷ್ಟ್ರವ್ಯಾಪಿ 12.50 ಲಕ್ಷ ಔಷಧಿ ವ್ಯಾಪಾರಸ್ಥರು ಮತ್ತು ಕರ್ನಾಟಕದಲ್ಲಿ 26 ಸಾವಿರ ಔಷಧಿ ವ್ಯಾಪಾರಸ್ಥರಿದ್ದಾರೆ. ದೇಶದ ಪ್ರಬಲ ಸಂಘಟನೆಯಾಗಿರುವ ಔಷಧಿ ವ್ಯಾಪಾರಿಗಳ ಸಂಘವು ಇದೀಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನಲೆಯಲ್ಲಿ ಇಂದು ಇಡೀ ದೇಶದಲ್ಲಿ ಔಷಧಿ ವ್ಯಾಪಾರಸ್ಥರ ಸಂಘದಿಂದ ರಕ್ತದಾನ ಶಿಬಿರ ಆಯೋಜಿಸಲ್ಪಟ್ಟಿದೆ ಎಂದರು.

ಔಷಧಿ ವ್ಯಾಪಾರಸ್ಥರ ಸಂಘದ ಮಾಹಿತಿಯುಳ್ಳ ನೂತನ ಆ್ಯಪ್‌ ಲೋಕಾರ್ಪಣೆ ಮಾಡಲಾಯಿತು. ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಜಂಟಿ ಕಾರ್ಯದರ್ಶಿ ವಸಂತ್ ಕುಮಾರ್, ಉಪಾಧ್ಯಕ್ಷ ವಿನೋದ್ ಅಂಬೆಕಲ್, ಖಜಾಂಚಿ ಪ್ರಸಾದ್ ಗೌಡ, ನಿರ್ದೇಶಕ ತಿಲಕ್ ಸೇರಿದಂತೆ ಹಲವರು ಹಾಜರಿದ್ದರು. ಜಿಲ್ಲೆಯಾದ್ಯಂತಲಿನ ಔಷಧಿ ವ್ಯಾಪಾರಿಗಳ ಸಂಘದ ಸದಸ್ಯರು ರಕ್ತದಾನ ಮಾಡಿದರು.