ಹಸಿರು ಕ್ಯಾಂಪಸ್‌ನತ್ತ ಬೆಂಗಳೂರು ಕೃಷಿ ವಿವಿ

| Published : Aug 22 2024, 12:53 AM IST

ಸಾರಾಂಶ

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಸಂಘ-ಸಂಸ್ಥೆಗಳ ಸಹಭಾಗಿತ್ವದೊಂದಿಗೆ 20 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮ ರೂಪಿಸಿ ‘ಹಸಿರು ಕ್ಯಾಂಪಸ್‌’ನತ್ತ ದಾಪುಗಾಲು ಹಾಕುತ್ತಿದೆ ಎಂದು ವಿವಿ ಕುಲಪತಿ ಡಾ.ಎಸ್‌.ವಿ.ಸುರೇಶ ಸಂತಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಸಂಘ-ಸಂಸ್ಥೆಗಳ ಸಹಭಾಗಿತ್ವದೊಂದಿಗೆ 20 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮ ರೂಪಿಸಿ ‘ಹಸಿರು ಕ್ಯಾಂಪಸ್‌’ನತ್ತ ದಾಪುಗಾಲು ಹಾಕುತ್ತಿದೆ ಎಂದು ವಿವಿ ಕುಲಪತಿ ಡಾ.ಎಸ್‌.ವಿ.ಸುರೇಶ ಸಂತಸ ವ್ಯಕ್ತಪಡಿಸಿದರು.

ಹೆಬ್ಬಾಳದ ಜಿಕೆವಿಕೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ವಿವಿಯಿಂದ ಬುಧವಾರ ಆಯೋಜಿಸಿದ್ದ ‘ಅಮ್ಮನಿಗಾಗಿ ಒಂದು ಮರ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿವಿಯಿಂದ ನಗರದಲ್ಲಿ ಆರು ಸಾವಿರ ಸಸಿ ನೆಟ್ಟು ಪ್ರೋತ್ಸಾಹಿಸಲಾಗುತ್ತಿದೆ. ಅಷ್ಟೇ ಅಲ್ಲ, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ 20 ಸಾವಿರ ಸಸಿ ನೆಟ್ಟು ಹಸಿರು ಕ್ಯಾಂಪಸ್‌ನತ್ತ ನಾವು ಸಾಗುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ‘ಅಮ್ಮನಿಗಾಗಿ ಒಂದು ಮರ’ ಕಾರ್ಯಕ್ರಮದಡಿ ಸಸಿ ನೆಡಲಾಗುತ್ತಿದೆ. ಪರಿಸರ ತಾಯಿ ಸಮಾನವಾಗಿದ್ದು ಅದನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಚಿಟ್ಟೆ ವನ ಪ್ರಾರಂಭ:

ಪ್ರಸಕ್ತ ಸಾಲಿನಿಂದ ಸ್ನಾತಕ ಪದವಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ಸಸಿ ನೆಟ್ಟು ನಾಲ್ಕು ವರ್ಷ ಪೋಷಿಸಲು ರೂಪುರೇಷೆ ತಯಾರಿಸಲಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗುತ್ತದೆ. ಕೃಷಿ ವಿವಿ ಹಾಗೂ ಹಾಸನ ಕೃಷಿ ವಿದ್ಯಾಲಯದ ಆವರಣದಲ್ಲಿ 10 ಎಕರೆ ಪ್ರದೇಶದಲ್ಲಿ ‘ಚಿಟ್ಟೆ ವನ’ ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಶಿಕ್ಷಣ ನಿರ್ದೇಶಕ ಡಾ.ಕೆ.ಸಿ.ನಾರಾಯಣಸ್ವಾಮಿ, ವಿಸ್ತರಣಾ ನಿರ್ದೇಶಕ ಡಾ.ವಿ.ಎಲ್‌.ಮಧುಪ್ರಸಾದ್‌, ಸಂಶೋಧನಾ ನಿರ್ದೇಶಕ ಡಾ.ಎಚ್‌.ಎಸ್‌.ಶಿವರಾಮು ಮತ್ತಿತರರು ಉಪಸ್ಥಿತರಿದ್ದರು.

ಫೋಟೋ ಕ್ಯಾಪ್ಷನ್‌....

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಿದ್ದ ‘ಅಮ್ಮನಿಗಾಗಿ ಒಂದು ಮರ’ ಕಾರ್ಯಕ್ರಮವನ್ನು ವಿವಿ ಕುಲಪತಿ ಡಾ.ಎಸ್‌.ವಿ.ಸುರೇಶ ಸಸಿಗೆ ನೀರೆಯುವ ಮೂಲಕ ಉದ್ಘಾಟಿಸಿದರು. ಶಿಕ್ಷಣ ನಿರ್ದೇಶಕ ಡಾ.ಕೆ.ಸಿ.ನಾರಾಯಣಸ್ವಾಮಿ, ಸಂಶೋಧನಾ ನಿರ್ದೇಶಕ ಡಾ.ಎಚ್‌.ಎಸ್‌.ಶಿವರಾಮು ಹಾಜರಿದ್ದರು.