ಸಾರಾಂಶ
ಈಗಾಗಲೇ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದೆ. ಕೆರೆಗಳ ಪುನಶ್ಚೇತನಕ್ಕೂ ಆದ್ಯತೆ ನೀಡಲಾಗಿದೆ. ಇದರಿಂದ ಕ್ಷೇತ್ರದ ರೈತರ ಬಹುದಿನಗಳ ಕನಸು ಈಡೇರಲಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ವಿಧಾನಸಭಾ ಕ್ಷೇತ್ರದ ಏತ ನೀರಾವರಿ ಯೋಜನೆಗಳ ಪುನಶ್ಚೇತನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಮಂಗಳವಾರ ಹೇಳಿದರು.ತಾಲೂಕಿನ ಕೆಸ್ತೂರು ಜಿಪಂ ವ್ಯಾಪ್ತಿಯ ಆತಗೂರು ಗ್ರಾಮದಲ್ಲಿ ಒಂದು ಕೋಟಿ ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕೆರೆ ಅಭಿವೃದ್ಧಿಯಲ್ಲಿ ತೂಬು ರಿಪೇರಿ, ಕೋಡಿ ಅಭಿವೃದ್ಧಿ, ಏರಿ ದುರಸ್ತಿ ನಂತರ ಕೆರೆ ಹೂಳು ತೆಗೆದು ಹೆಚ್ಚಿನ ನೀರು ಸಂಗ್ರಹದ ಜೊತೆಗೆ ಮುಂದಿನ ದಿನಗಳಲ್ಲಿ ಕೊಳವೆಬಾವಿಗಳ ಪುನಶ್ಚೇತನ ಮತ್ತು ಜನ - ಜಾನುವಾರುಗಳಿಗೆ ಕುಡಿಯುವ ನೀರು ಲಭ್ಯವಾಗಲಿದೆ ಎಂದರು.
ಈಗಾಗಲೇ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದೆ. ಕೆರೆಗಳ ಪುನಶ್ಚೇತನಕ್ಕೂ ಆದ್ಯತೆ ನೀಡಲಾಗಿದೆ. ಇದರಿಂದ ಕ್ಷೇತ್ರದ ರೈತರ ಬಹುದಿನಗಳ ಕನಸು ಈಡೇರಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.ಮದ್ದೂರು ಕ್ಷೇತ್ರದ ನೀರಾವರಿ, ರಸ್ತೆ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ 700 ಕೋಟಿ ರು.ಗೂ ಮೀರಿ ಅನುದಾನ ಬಿಡುಗಡೆಯಾಗಲಿದೆ. ಆನಂತರ ಹಂತಹಂತವಾಗಿ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗಲಿವೆ ಎಂದರು.
ಈ ವೇಳೆ ಆತಗೂರು ಗ್ರಾಪಂ ಸದಸ್ಯರಾದ ಅಶೋಕ್, ಶಮಿತ್, ಸತೀಶ್, ಭಾನುಪ್ರಿಯ, ರಾಮಚಂದ್ರ, ತಾಪಂ ಮಾಜಿ ಅಧ್ಯಕ್ಷ ಸಿ. ನಾಗೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ದಾಸೇಗೌಡ, ಮುಖಂಡರಾದ ನಾಗರಾಜು, ನಟರಾಜು. ರಘು ಮತ್ತಿತರರು ಇದ್ದರು.