ಸಾರಾಂಶ
ಕೋಲಾರದಲ್ಲಿ ರಾಜಕೀಯವಾಗಿ ಬೇರು ಬಿಡಲು ಎಸ್.ಬಂಗಾರಪ್ಪನವರೇ ಕಾರಣ. ತಮ್ಮನ್ನು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಆಯ್ಕೆ ಮಾಡಿ ತಮ್ಮ ಪರವಾಗಿ ಕೋಲಾರ ತಾಲೂಕುಗಳಲ್ಲೂ ಪ್ರಚಾರ ಮಾಡಿ ಗೆಲ್ಲಿಸಿ ದೆಹಲಿ ತೋರಿಸಿದ ರಾಜಕೀಯ ಗುರು ಎಸ್. ಬಂಗಾರಪ್ಪನವರು
ಸೊರಬ: ತಾವು ಕೋಲಾರದಲ್ಲಿ ರಾಜಕೀಯವಾಗಿ ಬೇರು ಬಿಡಲು ಎಸ್.ಬಂಗಾರಪ್ಪನವರೇ ಕಾರಣ. ತಾಲೂಕು ಬೋರ್ಡ್ ಮೆಂ ಬರ್ ಆಗಿದ್ದ ತಮ್ಮನ್ನು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಆಯ್ಕೆ ಮಾಡಿ ತಮ್ಮ ಪರವಾಗಿ ಕೋಲಾರ ಜಿಲ್ಲೆಯ ಪ್ರತೀ ತಾಲೂಕುಗಳಲ್ಲೂ ಪ್ರಚಾರ ಮಾಡಿ ಗೆಲ್ಲಿಸಿ ದೆಹಲಿ ತೋರಿಸಿದ ರಾಜಕೀಯ ಗುರು ಎಸ್. ಬಂಗಾರಪ್ಪನವರು ಎಂದರೆ ತಪ್ಪಾಗಲಾರದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಭಾನುವಾರ ಪಟ್ಟಣದ ಡಾ.ರಾಜ್‌ಕುಮಾರ್ ರಂಗಮಂದಿರದ ಆವರಣದಲ್ಲಿ ಎಸ್.ಬಂಗಾರಪ್ಪ ಫೌಂಡೇಶನ್ ಮತ್ತು ಎಸ್.ಬಂಗಾರಪ್ಪ ವಿಚಾರ ವೇದಿಕೆಯಿಂದ ಬಂಗಾರಪ್ಪ ಅವರ ೯೩ನೇ ಹುಟ್ಟುಹಬ್ಬದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಹಮ್ಮಿಕೊಂಡಿದ್ದ ಬಂಗಾರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ನಾನು 7 ಬಾರಿ ಲೋಕಸಭಾ ಸದಸ್ಯನಾಗಿ, ಕೇಂದ್ರ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಇದಕ್ಕೆ ಕಾರಣ ಬಂಗಾರಪ್ಪನವರು. ನನ್ನ ಬಾಳಿಗೆ ಅವರು ರಾಜಕೀಯ ಬಂಗಾರ ಎಂದರು.
23ರಲ್ಲಿ 23 ಕ್ಷೇತ್ರವನ್ನು ಗೆದ್ದು ಕಾಂಗ್ರೆಸ್ ಪಕ್ಷವನ್ನು ಉತ್ತುಂಗಕ್ಕೇರಿಸಿದ ಕೀರ್ತಿ
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಯಾವುದೇ ಪಕ್ಷದಲ್ಲಿದ್ದರೂ ಆ ಪಕ್ಷದ ಉತ್ತುಂಗಕ್ಕಾಗಿ ಶ್ರಮಿಸುವ ಮೂಲಕ ಪಕ್ಷಾತೀತ ನಾಯಕರಾಗಿದ್ದರು. ರಾಜ್ಯದಲ್ಲಿ ಅವರ ನೇತೃತ್ವದಲ್ಲಿ ನಡೆದ ಲೋಕಸಭಾ ಚುನಾವಣೆಯ 23ರಲ್ಲಿ 23 ಕ್ಷೇತ್ರವನ್ನು ಗೆದ್ದು ಕಾಂಗ್ರೆಸ್ ಪಕ್ಷವನ್ನು ಉತ್ತುಂಗಕ್ಕೇರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಈ ದಾಖಲೆಯನ್ನು ಅಳಿಸಲು ಯಾರಿಂದಲೂ ಸಾಧ್ಯವಾಗಿಲ್ಲ ಎಂದು ಹೇಳಿದರು.
ಬಂಗಾರಪ್ಪನವರು ಅಧಿಕಾರವನ್ನು ಅನುಭವಿಸಿದ್ದು ಕೆಲವೇ ವರ್ಷಗಳು. ಆದರೆ ಅವರ ಜನಪರವಾದ ಕಾಳಜಿ ಮತ್ತು ಬಡವರನ್ನು ಉನ್ನತ ಸ್ಥಾನಕ್ಕೆ ತರುವ ದೃಷ್ಟಿಯಿಂದ ಮುಖ್ಯಮಂತ್ರಿಯಾಗಿ ರೂಪಿಸಿದ ಯೋಜನೆಗಳು ಎಂದಿಗೂ ಶಾಶ್ವತವಾಗಿ ಉಳಿದಿವೆ. ಹಾಗಾಗಿ ಅವರು ಜನಾಕರ್ಷಣೆ ಮತ್ತು ಸಾಮಾಜಿಕ ಕಾಳಜಿಯ ಶೋಷಿತ ವರ್ಗಗಳ ನಾಯಕರಾಗಿದ್ದಾರೆ ಎಂದ ಅವರು, ಶೋಷಿತ ವರ್ಗದವರ ಏಳಿಗೆಗೆ ಬೆಳಕು ಚೆಲ್ಲಿದ ಬಂಗಾರಪ್ಪ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ರಾಜಕಾರಣದಲ್ಲಿ ಸ್ವಾರ್ಥತತೆ
ಇತ್ತೀಚಿನ ದಿನಗಳಲ್ಲಿ ರಾಜಕಾರಣದಲ್ಲಿ ಸ್ವಾರ್ಥತತೆ ಎದ್ದು ಕಾಣುತ್ತಿರುವ ಸಂದರ್ಭದಲ್ಲಿ ಬಂಗಾರಪ್ಪನವರ ಚಿಂತನೆ ಹಾಗೂ ಶೋಷಿತವರ್ಗದವರ ಉನ್ನತಿಗೆ ಶ್ರಮಿಸುವ ವ್ಯಕ್ತಿತ್ವವನ್ನು ಅವರ ಮಗ ಸಚಿವ ಮಧು ಬಂಗಾರಪ್ಪ ಅವರಲ್ಲಿ ಕಾಣುತ್ತಿದ್ದೇವೆ. ಶಿಕ್ಷಣ ಸಚಿವರಾಗಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ನೆರವಾಗಲೆಂದು ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಶಿಕ್ಷಣ ದೊರೆಯಲಿ ಎಂಬ ಸದುದ್ದೇಶದಿಂದ ಕರ್ನಾಟಕ ಪಬ್ಲಕ್ ಸ್ಕೂಲ್ ಅನುಮೋದನೆ ಕಾರಣರಾಗಿದ್ದಾರೆ. ಈ ರೀತಿಯ ಯೋಜನೆಯನ್ನು ಹಿಂದಿನ ಯಾವುದೇ ಶಿಕ್ಷಣ ಸಚಿವರು ಮಾಡಿಲ್ಲ. ಹಾಗಾಗಿ ಮಧು ಬಂಗಾರಪ್ಪ ತಂದೆಯಂತೆಯೇ ದೂರದೃಷ್ಟಿಯ ನಾಯಕ. ಸಾಮಾಜಿಕ ಚಿಂತಕ. ಅವರಿಗೆ ಕಾಂಗ್ರೆಸ್‌ನಲ್ಲಿ ಉತ್ತಮ ಭವಿಷ್ಯವಿದೆ ಎಂದರು.
ಬಂಗಾರಪ್ಪ ಅವರ ಸಮಾದಿ ಸ್ಥಳವನ್ನು ಪ್ರವಾಸಿ ತಾಣವನ್ನಾಗಿಸಿ ತಂದೆ-ತಾಯಿಗೆ ದೇವರ ಸ್ಥಾನ ನೀಡದ ಭಾರತದ ಏಕೈಕ ರಾಜಕಾರಣಿ ಎಂದರೆ ಮಧು ಬಂಗಾರಪ್ಪ ಎಂದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ದೇವರಾಜ ಅರಸು ನಂತರ ರಾಜ್ಯದಲ್ಲಿ ಶೋಷಿತರು ಹಾಗೂ ಬಡವರ ಪರವಾಗಿ ಯೋಜನೆಗಳನ್ನು ರೂಪಿಸಿದ ಮುಖ್ಯಮಂತ್ರಿಗಳೆಂದರೆ ಎಸ್.ಬಂಗಾರಪ್ಪ ಮತ್ತು ಈಗಿನ ಸರ್ಕಾರದ ಸಿದ್ದರಾಮಯ್ಯನವರು. ಜಾತಿ ಗಣತಿ ಮೂಲಕ ರಾಜ್ಯದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳ ಮೀಸಲಾತಿ ಮೂಲಕ ಸರ್ವರಿಗೂ ಸಮ ಬಾಳು, ಸರ್ವರಿಗೂ ಸಮಪಾಲು ಎನ್ನುವ ಚಿಂತನೆಯೊಂದಿಗೆ ಮುನ್ನಡೆಯುತ್ತಿದ್ದಾರೆ. ಇದು ಕಾಟಾಚಾರದ ಗಣತಿಯಾಗದೇ ಪ್ರತಿಯೊಂದು ಜಾತಿ, ವರ್ಗಗಳಿಗೂ ಅನುಕೂಲತೆಯನ್ನು ಕಲ್ಪಿಸುತ್ತದೆ ಎಂದರು.
ಈಗಾಗಲೇ ತಮಿಳುನಾಡಿನಲ್ಲಿ ಹಿಂದುಳಿದ ವರ್ಗಗಳಿಗೆ ಶೇ.೬೯ ಮೀಸಲಾತಿ ಜಾರಿಯಾಗಿದೆ. ರಾಜ್ಯದಲ್ಲೂ ಹಿಂದುಳಿದ ವರ್ಗಗಳಿಗೆ ಶೇ. ೭೫ ರಷ್ಟು ಮೀಸಲಾತಿ ಜಾರಿಯಾಗುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದ ಅವರು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಕ್ರಾಂತಿಕಾರದ ಬದಲಾವಣೆಗಳು ನಡೆಯುತ್ತವೆ. ಅಧಿಕಾರ ಎನ್ನುವುದು ಯಾರಿಗೂ ಶಾಶ್ವತವಲ್ಲ. ನಾವು ಎಷ್ಟು ದಿನ ಇರುತ್ತೇವೆಯೋ ಗೊತ್ತಿಲ್ಲ. ಇರುವಷ್ಟು ದಿನ ಜನಸೇವೆಯನ್ನು ಮರೆಯಬಾರದು. ನಾನೂ ಕೂಡಾ ಬಂಗಾರಪ್ಪ ಅಭಿಮಾನಿಯಾಗಿ ಇಲ್ಲಿಗೆ ಬಂದಿರುವೆ. ಮಧು ಬಂಗಾರಪ್ಪ ಅವರ ಜೊತೆ ಎಂದಿಗೂ ಕೈಜೋಡಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಾಹಿತಿ ಡಾ.ಕಾಳೆಗೌಡ ನಾಗವಾರ, ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ ಬೆಂಗಳೂರು, ಚೌಡಿಕೆ ಕಲಾವಿದೆ ರಾಧಾಬಾಯಿ ಮಾದರ್, ರಂಗಭೂಮಿ ಕಲಾವಿದ ಜೇವರ್ಗಿ ರಾಜಣ್ಣ ಅವರಿಗೆ ಬಂಗಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಾಸಕ ಗೋಪಾಕೃಷ್ಣ ಬೇಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿರಸಿ ಶಾಸಕ ಬೀಮಣ್ಣ ನಾಯ್ಕ, ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು, ಮಾಜಿ ಸಂಸದ ಆಯನೂರು ಮಂಜುನಾಥ, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಡಿಸಿ ಗುರುದತ್ತ ಹೆಗಡೆ, ಪ್ರಸನ್ನಕುಮಾರ್, ಚೇತನ್‌ಕುಮಾರ್ ಸೇರಿದಂತೆ ವಿವಿಧ ಮಂಡಳಿಗಳ ಅಧ್ಯಕ್ಷರು, ಸದಸ್ಯರು ಉಪಸ್ಥಿರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))