ಹನಿಟ್ರ್ಯಾಪ್ ಖೆಡ್ಡಾಗೆ ಬಿದ್ದ ಬ್ಯಾಂಕ್‌ ಮ್ಯಾನೇಜರ್‌

| Published : Nov 16 2025, 03:15 AM IST

ಹನಿಟ್ರ್ಯಾಪ್ ಖೆಡ್ಡಾಗೆ ಬಿದ್ದ ಬ್ಯಾಂಕ್‌ ಮ್ಯಾನೇಜರ್‌
Share this Article
  • FB
  • TW
  • Linkdin
  • Email

ಸಾರಾಂಶ

ಎಳನೀರು ಮಾರುತ್ತಿದ್ದ ಮಹಿಳೆ ಬ್ಯಾಂಕ್ ಮ್ಯಾನೇಜರ್‌ನನ್ನು ಬಲೆಗೆ ಕೆಡವಿ ಹನಿಟ್ರ್ಯಾಪ್ ಮಾಡಿ ಬೆದರಿಸಿ ಹಣ ಸುಲಿಗೆಗೆ ಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾಳೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

44ರ ಮಧ್ಯವಯಸ್ಸಿನ ಮಹಿಳೆ ಇಂಡಿಯ ಡಿ‌ವೈಎಸ್ಪಿ ಕಚೇರಿ ಪಕ್ಕದಲ್ಲೇ ಹಲವಾರು ವರ್ಷಗಳಿಂದ ಎಳನೀರು ಮಾರಿಕೊಂಡಿದ್ದಳು. ಆದರೆ ಅದೇನು ಕೆಟ್ಟಬುದ್ಧಿ ಬಂತೋ ಗೊತ್ತಿಲ್ಲ, ಎಳನೀರು ಮಾರುತ್ತಿದ್ದ ಮಹಿಳೆ ಬ್ಯಾಂಕ್ ಮ್ಯಾನೇಜರ್‌ನನ್ನು ಬಲೆಗೆ ಕೆಡವಿ ಹನಿಟ್ರ್ಯಾಪ್ ಮಾಡಿ ಬೆದರಿಸಿ ಹಣ ಸುಲಿಗೆಗೆ ಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾಳೆ. ತನ್ನ ಬಳಿ ಎಳನೀರು ಕುಡಿಯಲು ಬಂದವನಿಗೆ ಯಾಮಾರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಪ್ರಕರಣದಲ್ಲಿ ಮಹಿಳೆ ಹಾಗೂ ಆಕೆಯ ಮಗ ಹಾಗೂ ಯ್ಯೂಟೂಬ್‌ ಪತ್ರಕರ್ತನನ್ನೂ ಬಂಧಿಸಲಾಗಿದೆ.

ಯಾರು ಈ ಎಳನೀರು ಮಹಿಳೆ?

ಇಂಡಿ ಪಟ್ಟಣದ ಡಿವೈಎಸ್ಪಿ ಕಾರ್ಯಾಲಯದ ಪಕ್ಕದಲ್ಲಿರುವ ಪುಟ್‌ಪಾತ್ ಮೇಲೆ ಎಳನೀರು (ತೆಂಗಿನಕಾಯಿ) ಮಾರುತ್ತಿದ್ದ ಮಹಿಳೆ ಸುವರ್ಣ ಹೊನಸೂರೆ ಎಂಬ ಮಹಿಳೆ ತನ್ನಲ್ಲಿಗೆ ಎಳನೀರು ಕುಡಿಯಲು ಬರುತ್ತಿದ್ದ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ನಿವಾಸಿ ಇಂಡಿಯ ಬ್ಯಾಂಕ್ ಮ್ಯಾನೇಜರ್‌ಗೆ ನವ್ಹೆಂಬರ್ 1ರಂದು ಬರ್ರೀ ಸರ್ ಎಂದು ಪುಸಲಾಯಿಸಿದ್ದಾಳೆ. ಮಹಿಳೆ ಮಾತುನಂಬಿ ಇಂಡಿಗೆ ಬಂದ ಬ್ಯಾಂಕ್‌ ಮ್ಯಾನೇಜರನನ್ನು ತನ್ನ ಗೆಳತಿಯ ಮನೆಗೆ ಕರೆದುಕೊಂಡು ಹೋಗಿ ದೈಹಿಕ ಸಂಪರ್ಕ ಬೆಳೆಸಿದ್ದಾಳೆ. ಪ್ರಣಯದ ಕ್ಷಣಗಳನ್ನು ಕಳೆದು ಸಂತಸದಲ್ಲಿದ್ದ ಆತನಿಗೆ ನ.5ರಂದು ಶಾಕ್ ಕಾದಿತ್ತು. ಕರೆ ಮಾಡಿದ ವಂಚಕಿ, ನಮ್ಮ‌ ಪ್ರಣಯ ಪ್ರಸಂಗವನ್ನು ಪತ್ರಕರ್ತರು ವಿಡಿಯೋ ಮಾಡಿಕೊಂಡು ಬೆದರಿಕೆ ಹಾಕುತ್ತಿದ್ದಾರೆ. ಅವರಿಗೆ ಭೇಟಿಯಾಗಿ ವ್ಯವಹಾರ ಬಗೆಹರಿಸಿಕೊ ಎಂದಿದ್ದಳು.

ಪ್ರಣಯದ ವಿಡಿಯೋ ಮಾಡಿದ್ದ ವಂಚಕಿ:

ಬ್ಯಾಂಕ್ ಮ್ಯಾನೇಜರ್ ಪ್ರತಾಪನೊಂದಿಗಿನ ಸರಸ ಸಲ್ಲಾಪದ ವಿಡಿಯೋವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ ಮಹಿಳೆ ತನ್ನ ಪರಿಚಯಸ್ಥನಾದ ಮಹೇಶ ಬಗಲಿ, ಯೂಟ್ಯೂಬರ್ ಹಾಗೂ ಹೋಮಗಾರ್ಡ್ ಆಗಿರುವ ತೌಸಿಫ್ ಖರೋಶಿ ಎಂಬುವವರಿಂದ ಫೋನ್ ಮಾಡಿಸಿ ₹10 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಇದರಲ್ಲಿ ಆಕೆಯ ಮಗ ಅಮೂಲ್ ಹೊನಸೂರೆ ಕೂಡ ಭಾಗಿಯಾಗಿದ್ದಾನೆ.

ನಾಲ್ವರು ಅಂದರ್:

ಹನಿಟ್ರ್ಯಾಪ್ ಘಟನೆಯ ಕುರಿತು ನ.12ರಂದು ದೂರು ದಾಖಲಿಸಿಕೊಂಡ ಇಂಡಿ ಪೊಲೀಸರು ಎಳನೀರು ಮಹಿಳೆಯನ್ನು ಆಕೆಯ ಮಗ ಅಮೂಲ್ ಹೊನಸೂರೆ, ಹಂಜಗಿ ಗ್ರಾಮದವರಾದ ಮಹೇಶ ಬಗಲಿ ಹಾಗೂ ಪತ್ರಕರ್ತ ಎಂದು ಹೇಳಿಕೊಂಡ ವೃತ್ತಿಯಲ್ಲಿ ಹೋಮ್‌ಗಾರ್ಡ್‌ ಆಗಿರುವ ತೌಶಿಫ್ ಖರೋಶಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಬ್ಯಾಂಕ್ ರಜೆ‌ಯಿದೆ ಬನ್ನಿ ಎಂದು ಸ್ನೇಹಿತೆಯ ಮನೆಗೆ ಕರೆಸಿಕೊಂಡು ಲೈಂಗಿಕ ಕ್ರಿಯೆ ನಡೆಸಿ ತಾನೇ ವಿಡಿಯೋ ಮಾಡಿಕೊಂಡಿದ್ದಾಳೆ. ಬಳಿಕ ₹10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಇದು ಹನಿಟ್ರ್ಯಾಪ್ ಎಂದು ಗೊತ್ತಾಗಿ ದೂರು ದಾಖಲಿಸಿದ್ದೇನೆ.

- ಹನಿಟ್ರ್ಯಾಪ್‌ಗೆ ಒಳಗಾದ ಬ್ಯಾಂಕ್ ಮ್ಯಾನೇಜರ್

ಎಳನೀರು ಮಾರುತ್ತಿದ್ದ ಮಹಿಳೆ ಹಾಗೂ ಆಕೆಯ ಸಂಗಡಿಗರು ಸೇರಿ ಹನಿಟ್ರ್ಯಾಪ್ ಮಾಡಿ ₹10 ಲಕ್ಷಕ್ಕೆ ಬೇಡಿಕೆ ಇಟ್ಟಿರುವ ಕುರಿತು ನಾಲ್ವರ ಮೇಲೆ ಇಂಡಿ ಠಾಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ ದೂರು ದಾಖಲಿಸಿದ್ದಾರೆ. ನಾಲ್ವರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಇವರಿಂದ ಇನ್ನೂ ಯಾರಿಗಾದರೂ ವಂಚನೆಯಾಗಿದ್ದರೆ ದೂರು ದಾಖಲಿಸಿದರೆ ಆರೋಪಿಗಳ ಮೇಲೆ‌ ಕ್ರಮ ಕೈಗೊಳ್ಳಲಾಗುವುದು.

- ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್ಪಿ