ಸಾರಾಂಶ
ಕನ್ನಡಪ್ರಭ ವಾರ್ತೆ ಕುಂದಾಪುರಹನಿಟ್ರ್ಯಾಪ್ ಮೂಲಕ ಕಾಸರಗೋಡಿನ ವ್ಯಕ್ತಿಯೊಬ್ಬರನ್ನು ಸುಲಿಗೆ ಮಾಡಿದ ಘಟನೆ ಸೋಮವಾರ ನಡೆದಿದೆ.
ಕಾಸರಗೋಡು ಮೂಲದ ಸಂದೀಪ ಕುಮಾರ್ ಹನಿಟ್ರ್ಯಾಪ್‌ಗೆ ಒಳಗಾದವರು. ಕುಂದಾಪುರ ತಾಲೂಕಿನ ಎಂಕೋಡಿ ನಿವಾಸಿ ಆಸ್ಮಾ (43), ನಾವುಂದದ ನಿವಾಸಿ ಅಬ್ದುಲ್ ಸವಾದ್ ಯಾನೆ ಅಚ್ಚು (28), ಗುಲ್ವಾಡಿಯ ಸೈಪುಲ್ಲಾ (38), ಹಂಗಳೂರಿನ ಮೊಹಮ್ಮದ್ ನಾಸೀರ್ ಶರೀಫ್ (36), ಕುಂಭಾಶಿಯ ಅಬ್ದುಲ್ ಸತ್ತಾರ್ (23), ಶಿವಮೊಗ್ಗ ಜಿಲ್ಲೆಯ ಹೊಲಗಾರಿನ ಅಬ್ದುಲ್ ಅಜೀಜ್ (26) ವಂಚಿಸಿದ ಆರೋಪಿಗಳು.ಘಟನೆ ವಿವರ:ಸಂದೀಪ್ ಕುಮಾರ್ ಅವರಿಗೆ 3 ತಿಂಗಳ ಹಿಂದೆ ಅಬ್ದುಲ್ ಸವಾದ್ ಪರಿಚಯವಾಗಿದ್ದ. ಆತ ಆಸ್ಮಾ ಎಂಬವರ ಮೊಬೈಲ್ ನಂಬರ್ ಕೊಟ್ಟಿದ್ದು, ಆಕೆಯೊಂದಿಗೆ ಲೈಂಗಿಕ ಸಂಪರ್ಕ ಮಾಡಬಹುದು ಎಂದು ತಿಳಿಸಿದ್ದ. ಸಂದೀಪ್, ಆಕೆಗೆ ಕರೆ ಮಾಡಿದ್ದು, ಆಕೆ ಕುಂದಾಪುರಕ್ಕೆ ಬರಲು ತಿಳಿಸಿದ್ದಳು. ಅದರಂತೆ ಸಂದೀಪ್, ಸೋಮವಾರ ಸಂಜೆ 6.30 ಗಂಟೆಗೆ ಕುಂದಾಪುರಕ್ಕೆ ಬಂದಿದ್ದ. ಆಕೆ ಆತನನ್ನು ತನ್ನ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಇತರ ಆರೋಪಿಗಳು ಬಂದು 3 ಲಕ್ಷ ರು. ಹಣ ಕೊಡುವಂತೆ ಚಾಕು ತೋರಿಸಿ ಹೆದರಿಸಿದರು.ಸಂದೀಪ್ ಹೆದರಿ ಓಡಿ ಹೋಗಲು ಪ್ರಯತ್ನಿಸಿದಾಗ ಆರೋಪಿಗಳು ಆತನ ಕೈಗಳನ್ನು ಕಟ್ಟಿ ಕೂಡಿ ಹಾಕಿ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ ಮತ್ತು ಆತನ ಜೇಬಿನಲ್ಲಿದ್ದ 6,200 ರು.ಗಳನ್ನು ಕಿತ್ತುಕೊಂಡಿದ್ದರೆ. ಅಲ್ಲದೇ ಆತನ ಮೊಬೈಲಿನಿಂದ 5000 ರು.ಗಳನ್ನು ಗೂಗಲ್ ಪೇ ಮಾಡಿಸಿದ್ದಾರೆ. ಇನ್ನು ಹಣ ಇಲ್ಲ ಎಂದಾಗ ಆರೋಪಿಗಳು ಕೊಲ್ಲುವ ಬೆದರಿಕೆ ಒಡ್ಡಿ ಹಲ್ಲೆ ಮಾಡಿದ್ದಾರೆ. ಹೆದರಿದ ಸಂದೀಪ್ ಪುನಃ ತನ್ನ ಮೊಬೈಲಿನಿಂದ 10,000 ಮತ್ತು 20,000 ರು.ಗಳನ್ನು ವರ್ಗಾವಣೆ ಮಾಡಿದ್ದಾರೆ. ನಂತರ ಬಲವಂತವಾಗಿ ಎಟಿಎಂ ಕಾರ್ಡನ್ನು ಕಿತ್ತುಕೊಂಡು ಪಿನ್ ನಂಬರ್ ಪಡೆದು, ಆತನನ್ನು ರೂಮಿನಲ್ಲಿ ಕೂಡಿಹಾಕಿ ಆತನ ಎಸ್‌ಬಿಐ ಖಾತೆಯಿಂದ 40000 ರು.ಗಳನ್ನು ಡ್ರಾ ಮಾಡಿದ್ದಾರೆ. ನಂತರ ರಾತ್ರಿ ಸುಮಾರು 11:30 ಗಂಟೆಗೆ ಪೊಲೀಸರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಜೀವಬೆದರಿಕೆ ಒಡ್ಡಿ ಬಿಡುಗಡೆ ಮಾಡಿದ್ದಾರೆ.ಸಂದೀಪ್ ಕುಮಾರ್ ರಾತ್ರಿಯೇ ಕುಂದಾಪುರ ಠಾಣೆಗೆ ತೆರಳಿ ದೂರು ನೀಡಿದ್ದು, ಎಸ್‌ಐ ನಂಜಾ ನಾಯ್ಕ್ ಅವರು ವಿಶೇಷ ತಂಡವನ್ನು ರಚಿಸಿ ಆರೋಪಿಗಳೆಲ್ಲರನ್ನು 24 ಗಂಟೆಯೊಳಗೆ ಬಂಧಿಸಿದ್ದಾರೆ. ಅವರಿಂದ ಕೃತ್ಯಕ್ಕೆ ಬಳಸಿದ 2 ಕಾರುಗಳನ್ನು ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ಇದು ಮೊದಲ ಕೃತ್ಯವಲ್ಲ:
ಆರೋಪಿ ಆಸ್ಮಾಳದ್ದು ಇದು ಮೊದಲ ಕೃತ್ಯವಲ್ಲ. ಆಕೆ ಮತ್ತು ನಾಸೀರ್ ಶರೀಫ್ ಸೇರಿ ಈ ಹಿಂದೆಯೂ ಅನೇಕ ಮಂದಿಯನ್ನು ಕರೆಸಿಕೊಂಡು ಸುಲಿಗೆ ಮಾಡಿದ್ದಾರೆ ಎಂದು ತನಿಖೆಯಿಂದ ಪತ್ತೆಯಾಗಿದೆ. ಅವುಗಳನ್ನೂ ಪ್ರತ್ಯೇಕ ಪ್ರಕರಣದಡಿ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.