ಕನ್ನಡಪ್ರಭ ವಾರ್ತೆ ಹಾಸನ

ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರ ಅವರ ಜಯಂತಿ ಅಂಗವಾಗಿ ಏಪ್ರಿಲ್ 20ರ ಸೋಮವಾರ ಹಾಸನ ನಗರದಲ್ಲಿ ಭಕ್ತಿಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಬಿ.ಪಿ. ಐಸಾಮಿಗೌಡ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಮೊದಲು ನಗರದ ಅರಳೇಪೇಟೆಯಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು, ಮೆರವಣಿಗೆ ಹಾಗೂ ಸಾಂ

ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕಂಗೊಳಿಸಲಿದ್ದು, ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಏಪ್ರಿಲ್ 20ರ ಸೋಮವಾರದಂದು ಬೆಳಿಗ್ಗೆ 6 ಗಂಟೆಯಿಂದ ಆರಂಭವಾಗಲಿದ್ದು, ದೇವತಾಮೂರ್ತಿಗಳಿಗೆ ರುದ್ರಾಭಿಷೇಕ, ಮಹಾಪೂಜೆ ಹಾಗೂ ಮಹಾಮಂಗಳಾರತಿ ನಡೆಯಲಿದೆ. ಈ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸುವ ಮೂಲಕ ಭಕ್ತರು ಶ್ರೀ ಬಸವೇಶ್ವರರ ಆಶೀರ್ವಾದವನ್ನು ಪಡೆಯಲಿದ್ದಾರೆ. ದೇವಸ್ಥಾನದ ಆವರಣದಲ್ಲಿ ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗಲಿದ್ದು, ಭಕ್ತರ ನಂಬಿಕೆ ಮತ್ತು ಭಕ್ತಿಗೆ ವಿಶೇಷ ಮಹತ್ವ ನೀಡಲಾಗಿದೆ ಎಂದರು. ಬಳಿಕ ಬೆಳಿಗ್ಗೆ 9.30 ಗಂಟೆಗೆ ಶ್ರೀ ಬಸವೇಶ್ವರ ಸ್ವಾಮಿಯ ಭಾವಚಿತ್ರ ಹೊಂದಿದ ಬೆಳ್ಳಿ ರಥದಲ್ಲಿ ರಥೋತ್ಸವ ಮೆರವಣಿಗೆ ಆರಂಭವಾಗಲಿದೆ. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಡೆಯುವ ಈ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು, ಡೊಳ್ಳುಕುಣಿತ, ವೀರಗಾಸೆ, ನಾದಸ್ವರ ಸೇರಿದಂತೆ ಹಲವು ಜನಪದ ಕಲಾ ಪ್ರದರ್ಶನಗಳು ಹಾಗೂ ವಾದ್ಯಗೋಷ್ಠಿಗಳು ಪಾಲ್ಗೊಳ್ಳಲಿವೆ. ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಕ್ತರ ಗಮನ ಸೆಳೆಯಲಿದ್ದು, ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸಲಿದೆ. ಮೆರವಣಿಗೆ ಹಾಸನಾಂಬಾ ಕಲಾಕ್ಷೇತ್ರವನ್ನು ತಲುಪುವ ಮೂಲಕ ಸಮಾರೋಪಗೊಳ್ಳಲಿದೆ. ಈ ಸಂದರ್ಭದಲ್ಲಿ ನಡೆಯಲಿರುವ ಬಸವಜಯಂತಿ ಸಭಾ ಕಾರ್ಯಕ್ರಮದಲ್ಲಿ ಗಣ್ಯರು, ಸಮಾಜದ ಮುಖಂಡರು ಹಾಗೂ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸಿ ಬಸವೇಶ್ವರರ ತತ್ವ, ಸಂದೇಶ ಮತ್ತು ಸಮಾಜ ಸುಧಾರಣೆಯಲ್ಲಿ ಅವರ ಕೊಡುಗೆಯನ್ನು ನೆನಪಿಸಿಕೊಳ್ಳಲಿದ್ದಾರೆ. ಬಸವೇಶ್ವರರ ಸಮಾನತೆ, ಕಾಯಕ ಮತ್ತು ದಾಸೋಹದ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂಬ ವಿಚಾರಗಳನ್ನು ಭಾಷಣಗಳಲ್ಲಿ ಒತ್ತಿಹೇಳಲಾಗುತ್ತದೆ ಎಂದು ಹೇಳಿದರು.ನಂತರ ದೇವಸ್ಥಾನದ ಆವರಣದಲ್ಲಿ ಬಸವ ಜಯಂತಿ ಆಚರಣಾ ಸಮಿತಿಯ ವತಿಯಿಂದ ಭಕ್ತರಿಗೆ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಕುಟುಂಬ ಸಮೇತವಾಗಿ ಭಾಗವಹಿಸಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸವಿಯನ್ನು ಅನುಭವಿಸಲು ಅವಕಾಶ ಕಲ್ಪಿಸಲಾಗಿದೆ. ಈ ಸಮಗ್ರ ಕಾರ್ಯಕ್ರಮವನ್ನು ಹಾಸನ ಜಿಲ್ಲಾ ಶ್ರೀ ವೀರಶೈವ ಲಿಂಗಾಯಿತ ಸಂಘ, ವಿವಿಧ ಸಂಘಸಂಸ್ಥೆಗಳು ಹಾಗೂ ಬಸವ ಜಯಂತಿ ಆಚರಣಾ ಸಮಿತಿಯ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಬಸವೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವೀರಶೈವ ಲಿಂಗಾಯಿತ ಸಂಘದ ಉಪಾಧ್ಯಕ್ಷ ಕಿರಣ್ ಕುಮಾರ್‌ ಹೊಸಮನಿ, ಕಾರ್ಯದರ್ಶಿ ಇ. ಎಂ. ರುದ್ರಕುಮಾರ್‌, ಸಹ ಕಾರ್ಯದರ್ಶಿ ಎಚ್. ಮಲ್ಲಿಕಾರ್ಜುನ್, ಸದಸ್ಯರಾದ ಎ.ಜೆ. ಶೋಭನ್ ಬಾಬು ಇತರರು ಉಪಸ್ಥಿತರಿದ್ದರು.