ಹುಬ್ಬಳ್ಳಿ: ಇಂದಿಗೂ ಕೆಲವರು ಸಮಾಜವನ್ನು ಒಡೆಯಲು ಶ್ರಮಿಸುತ್ತಿದ್ದಾರೆ. ಇದಕ್ಕೆ ಪ್ರತ್ಯುತ್ತರ ಕೊಡಲು ನಾವೆಲ್ಲರೂ ಜಾಗ್ರತರಾಗಬೇಕಿದೆ ಎಂದು ಆರ್‌ಎಸ್‌ಎಸ್ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.
ಅವರು ಇಲ್ಲಿನ ದಾಜಿಬಾನಪೇಟೆಯ ಶ್ರೀ ದುರ್ಗಾದೇವಿ ಕಲ್ಯಾಣ ಮಂಟಪದಲ್ಲಿ ಶ್ರೀ ಶಿವಶರಣ ಹರಳಯ್ಯ ಸಮಗಾರ ಸಮಾಜ ಹಾಗೂ ಸಾಮರಸ್ಯ ವೇದಿಕೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ಶ್ರೀ ಶಿವಶರಣ ಹರಳಯ್ಯ ಹಾಗೂ ಸಂತ ಶಿರೋಮಣಿ ರವಿದಾಸರ ಜಯಂತಿಯಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದರು.ಡಾ. ಬಿ.ಆರ್. ಅಂಬೇಡ್ಕರ್ ಕೂಡ ಹಿಂದೂ ಧರ್ಮದಲ್ಲಿಯೇ ಜನಿಸಿದ್ದರು. ಕೊನೆ ಗಳಿಗೆಯಲ್ಲಿ ಹಿಂದೂ ಧರ್ಮದ ಒಂದು ಭಾಗವಾಗಿರುವ ಬೌದ್ಧ ಧರ್ಮವನ್ನು ಸ್ವೀಕರಿಸಿದರೆ ಹೊರತು ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಲಿಲ್ಲ. ಅವರೆಲ್ಲರೂ ತಮ್ಮ ಪ್ರಾಣ ಹೋದರೂ ಹಿಂದೂ ಧರ್ಮವನ್ನು ಬಿಡಲಿಲ್ಲ. ನಮ್ಮ ದೇಶದ ಶರಣರು, ಸಂತರು ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಇವರಿಂದ ಕಲಿತ ಪಾಠ ನಮ್ಮ ಜೀವನ ಹಾಗೂ ಚಿಂತನೆ ರಾಷ್ಟ್ರದ ಹಿತಕ್ಕೆ ಮೀಸಲಿಡಬೇಕು ಎಂದರು.
ಜಾತಿ ಸಮಸ್ಯೆ ಮತ್ತು ಸಂಘರ್ಷವಿದ್ದಾಗ ಶರಣ ಹರಳಯ್ಯನವರು ಜನಿಸಿದರು. ಬಸವಣ್ಣನವರಿಂದ ಪ್ರೇರಿತರಾಗಿ ಅವರೊಟ್ಟಿಗೆ ಶ್ರಮಿಸಲಾರಂಭಿಸಿದರು. ಅದೇ ರೀತಿ ರವಿದಾಸರು ಕೂಡ ತಮ್ಮ ನಡೆ- ನುಡಿಗಳಿಂದ ಅನೇಕ ಶಿಷ್ಯರನ್ನು ಹೊಂದಿದರು. ಸಿಖಂದರ್ ಲೋದಿ ಮತಾಂತರಗೊಳಿಸಲು ಪ್ರಯತ್ನಿಸಿ ವಿಫಲರಾದರು. ಹಿಂದೂ ಧರ್ಮವೇ ನಮ್ಮ ಮೂಲವೆಂದು ಸಂತರು ಅರಿತಿದ್ದರು. ಹಾಗಾಗಿಯೇ ಹಿಂದೂ ಧರ್ಮದ ತತ್ವ, ಸಿದ್ಧಾಂತಗಳನ್ನು ಪಸರಿಸಿದರು ಎಂದರು.ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಬಸವಣ್ಣನವರೊಂದಿಗೆ ಸಮಸಮಾಜ ನಿರ್ಮಿಸಲು ಶರಣ ಹರಳಯ್ಯನವರು ಶ್ರಮಿಸಿದರು. ಕಾಯಕ ತತ್ವವನ್ನು ಅರಿತು ಅಳವಡಿಸಿಕೊಂಡು ವಚನಗಳನ್ನು ಬರೆದರು. ನುಡಿದಂತೆ ನಡೆದು ಇತರರಿಗೂ ಮಾದರಿಯಾದರು. ಕಾಯಕ ಪ್ರಿಯರಾದ ಸಮಗಾರ ಸಮಾಜಕ್ಕೆ ಸದಾ ಬೆಂಬಲವಾಗಿರುವೆ ಎಂದು ಭರವಸೆ ನೀಡಿದರು.
ಬಿರವಳ್ಳಿ ಶ್ರೀ ಗುರುದೇವ ತಪೋವನದ ಶ್ರೀ ಗುರುಮಾತೆ ನಂದಾ ತಾಯಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಸಮಗಾರ ಸಮಿತಿ ನಿಕಟಪೂರ್ವ ಅಧ್ಯಕ್ಷ ಜಗದೀಶ ಬೆಟಗೇರಿ ಉದ್ಘಾಟಿಸಿ ಮಾತನಾಡಿದರು. ಪರಶುರಾಮ ಅರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಶ್ರೀ ಶರಣ ಹರಳಯ್ಯನವರು ಹಾಗೂ ಸಂತ ಶಿರೋಮಣಿ ರವಿದಾಸ ಅವರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಸಮಗಾರ ಸಮಾಜದ ಅಧ್ಯಕ್ಷ ರಾಜಶೇಖರ ಸಾಂಬ್ರಾಣಿ ಸೇರಿದಂತೆ ಹಲವರಿದ್ದರು.