ಗದಗ: ಜಗತ್ತಿಗೆ ಮೊದಲ ಬಾರಿಗೆ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ ಮಹಾ ಮಾನವತವಾದಿ ಬಸವಣ್ಣನವರು ಅಂದಿಗೂ ಇಂದಿಗೂ ಮುಂದೆಯೂ ಪ್ರಸ್ತುತವಾಗಿದ್ದಾರೆ. ಬಿದ್ದವರನ್ನು ಎಬ್ಬಿಸುವ ಕೆಲಸ ಮಾಡುತ್ತಲೇ ತಮ್ಮ ಬಳಿಗೆ ಬಂದ ಎಲ್ಲರಿಗೂ ಕಾಯಕ ತತ್ವ ತಿಳಿಸಿದ ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕ. ಅಷ್ಟೇ ಅಲ್ಲ, ಅವರು ಇಡೀ ಜಗತ್ತಿಗೆ ಸಾಂಸ್ಕೃತಿಕ ನಾಯಕರಾಗಿದ್ದಾರೆ ಎಂದು ನಿವೃತ್ತ ಪ್ರಾ. ಪ್ರೊ. ಕೆ.ಎಚ್. ಬೇಲೂರ ತಿಳಿಸಿದರು.ನಗರದ ಅಡವೀಂದ್ರ ಸ್ವಾಮಿ ಮಠದ ಅನ್ನಪೂರ್ಣೇಶ್ವರ ಮಂದಿರದಲ್ಲಿ ಜರುಗಿದ 347ನೇ ಮಾಸಿಕ ಶಿವಾನುಭವ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ಜಯಂತ್ಯುತ್ಸವ ಸಮಾರಂಭದಲ್ಲಿ ಬುದ್ಧ, ಬಸವ, ಅಂಬೇಡ್ಕರರ ವಿಚಾರಧಾರೆಗಳ ಪ್ರಸ್ತುತೆ ಕುರಿತು ಉಪನ್ಯಾಸ ನೀಡಿದರು.ಜಗತ್ತಿನಲ್ಲಿ ಶಾಂತಿ ಮತ್ತು ಮಾನವೀಯತೆ ನೆಲೆಸಲು ಭಗವಾನ್ ಬುದ್ಧನ ತತ್ವಗಳು ಸದಾಕಾಲ ಪ್ರಸ್ತುತವಾಗಿದ್ದು, ಅಹಿಂಸಾ ತತ್ವದ ಪಾಲನೆಯ ಮೂಲಕ ಇಡೀ ಜಗತ್ತನ್ನೇ ಬುದ್ಧ ಗೆಲ್ಲುವ ಮೂಲಕ ನಮಗೆಲ್ಲಾ ಆದರ್ಶಮಯವಾದರು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಈ ಜಗತ್ತು ಕಂಡ ಶ್ರೇಷ್ಠ ಚಿಂತಕರಲ್ಲಿ ಒಬ್ಬರಾಗಿದ್ದು, ಅವರು ಅಪಾರ ಸಂಖ್ಯೆಯ ಪುಸ್ತಕಗಳನ್ನು ಓದಿದ್ದರಿಂದಾಗಿಯೇ ಭಾರತದಂತಹ ದೇಶಕ್ಕೆ ಸುಭದ್ರವಾದ ಸಂವಿಧಾನವನ್ನು ಕೊಡಲು ಸಾಧ್ಯವಾಯಿತು ಎಂದರು.ನಗರಸಭೆ ಮಾಜಿ ಅಧ್ಯಕ್ಷ ಶಂಕರ್ ಹಾನಗಲ್ ಮಾತನಾಡಿ, ಮಹಾನ್ ದಾರ್ಶನಿಕರ ಜಯಂತಿ ಉತ್ಸವಗಳನ್ನು ಬರೀ ಫೋಟೋ ಪೂಜೆ ಮೆರವಣಿಗೆಯ ಮೂಲಕ ಮಾಡಿದರೆ ಸಾಲದು. ಅವರ ವಿಚಾರಧಾರೆಗಳನ್ನು ನಾಡಿಗೆ ಅದರಲ್ಲೂ ಮಕ್ಕಳಿಗೆ ತಿಳಿಸುವ ಕಾರ್ಯವಾದಾಗ ಮಾತ್ರ ಸಾರ್ಥಕವಾಗುತ್ತದೆ ಎಂದರು.ಅಡವೀಂದ್ರ ಸ್ವಾಮಿ ಮಠದ ಶಿವಾನುಭವ ಸಮಿತಿ ಅಧ್ಯಕ್ಷ ಡಾ. ರಾಜೇಂದ್ರ ಗಡಾದ ಮಾತನಾಡಿ, ಮಹಾನ್ ದಾರ್ಶನಿಕರಾದ ಬುದ್ಧ ಬಸವ ಗಾಂಧಿ ಡಾ. ಅಂಬೇಡ್ಕರ್ ಅವರ ವಿಚಾರಗಳನ್ನು ನಿತ್ಯದ ಬದುಕಿನಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಂಡಿದ್ದೆ ಆದಲ್ಲಿ ಎಲ್ಲೂ ಅಸಮಾನತೆ, ಮೇಲು ಕೀಳು , ಭೇದಭಾವ, ಅತ್ಯಾಚಾರ ಕೊಲೆ ಸುಲಿಗೆ, ಹಿಂಸೆ ಇವುಗಳನ್ನು ಕಾಣಲು ಸಾಧ್ಯವೇ ಇಲ್ಲ. ಅಷ್ಟೇ ಅಲ್ಲ, ಜಗತ್ತಿನಲ್ಲಿ ಯುದ್ಧದ ಸನ್ನಿವೇಶಗಳೇ ಸೃಷ್ಟಿಯಾಗುವುದಿಲ್ಲ. ಸಂಘರ್ಷವೆಂಬುದು ನೋಡಲು ಅಸಾಧ್ಯ ಎಂದರು.ಅಡವೀಂದ್ರ ಸ್ವಾಮಿ ಮಠದ ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು ಮಾತನಾಡಿದರು. ಬಸವ ತತ್ವ ಪ್ರತಿಪಾದಕ ಜಗದೀಶ್ ಚಂದ್ರ ನಾಡಗೌಡರ ಅವರನ್ನು ಸನ್ಮಾನಿಸಲಾಯಿತು. ಶಿವಾನುಭವದ ಭಕ್ತಿಸೇವೆಯನ್ನು ವಹಿಸಿಕೊಂಡ ಸಂಗಮ ಪ್ರಕಾಶನದ ಪ್ರಕಾಶಕಿ ಜ್ಯೋತಿ ಡಾ. ರಾಜೇಂದ್ರ ಗಡಾದ ದಂಪತಿಗಳನ್ನು ಸನ್ಮಾನಿಸಲಾಯಿತು.
ಆನಂದ ಹಿರೇಮಠ, ರೇಣುಕಾ ವಿ. ಬಾರಕೇರ, ಜ್ಯೋತಿ ರಾಜೇಂದ್ರ ಗಡಾದ, ಎಲ್.ಎಸ್. ನೀಲಗುಂದ, ಬಿ.ಎಂ. ಬಿಳೆಯಲಿ, ಸುಶೀಲಮ್ಮ ಕೋಟಿ, ಪ್ರೊ. ಆರ್.ಎಂ.ಬ ಡಿಗೇರ, ಮಾಲತೇಶ ಪಾಟೀಲ, ಜಿ.ಎಂ. ಯಾನಮಶೆಟ್ಟಿ, ರಾಜೇಶ ಮಾರನಬೀಡ, ಕೆ.ಎಸ್. ಪಲ್ಲೇದ ಮುಂತಾದವರು ಇದ್ದರು. ಗೀತಾ ಹೂಗಾರ ಪ್ರಾರ್ಥಿಸಿದರು. ಉಮಾಪತಿ ಭೂಸನೂರಮಠ ಸ್ವಾಗತಿಸಿದರು. ಬಿ.ಎಂ. ಕುಂದ್ರಾಳ್ ಹಿರೇಮಠ ನಿರೂಪಿಸಿದರು. ಸಿದ್ದಣ್ಣ ಜವಳಿ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ಗುರಪ್ಪ ನಿಡಗುಂದಿ ಪರಿಚಯಿಸಿದರು. ಮಾರುತಿ ಹೆಬ್ಬಾರೆ ವಂದಿಸಿದರು.ಬಸವಣ್ಣ ಇಡೀ ಜಗತ್ತಿಗೆ ಸಾಂಸ್ಕೃತಿಕ ನಾಯಕ: ಪ್ರೊ. ಕೆ.ಎಚ್. ಬೇಲೂರ
ಜಗತ್ತಿನಲ್ಲಿ ಶಾಂತಿ ಮತ್ತು ಮಾನವೀಯತೆ ನೆಲೆಸಲು ಭಗವಾನ್ ಬುದ್ಧನ ತತ್ವಗಳು ಸದಾಕಾಲ ಪ್ರಸ್ತುತವಾಗಿದ್ದು, ಅಹಿಂಸಾ ತತ್ವದ ಪಾಲನೆಯ ಮೂಲಕ ಇಡೀ ಜಗತ್ತನ್ನೇ ಬುದ್ಧ ಗೆಲ್ಲುವ ಮೂಲಕ ನಮಗೆಲ್ಲಾ ಆದರ್ಶಮಯವಾದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.