ನೀರಾವರಿ ನಿಗಮವಾದ ನಂತರ ಸರ್ಕಾರದಿಂದ ಕಾಲುವೆಯಲ್ಲಿನ ಜಾಲಿ ಕಂಟಿ, ಹೂಳು ತೆಗೆಸಲು ಸರಿಯಾದ ಸಮಯಕ್ಕೆ ಅನುದಾನ ಬರುತ್ತಿಲ್ಲ. ಇನ್ನೊಂದೆಡೆ ನೀರು ಬಳಕೆದಾರರ ಸಂಘಕ್ಕೆ ರೈತರಿಂದ ಸರಿಯಾಗಿ ನೀರಿನ ಕರ ವಸೂಲಿ ಆಗದ್ದರಿಂದ ಸಂಘವು ಕ್ರಿಯಾಶೀಲವಾಗಿಲ್ಲ.
ಎಸ್.ಜಿ. ತೆಗ್ಗಿನಮನಿನರಗುಂದ: ಜಿಲ್ಲೆಯಲ್ಲಿ ಹೆಚ್ಚು ನೀರಾವರಿ ಕೃಷಿ ಹೊಂದಿರುವ ತಾಲೂಕಿನ ಮಲಪ್ರಭಾ ಜಲಾಶಯದ ಮುಖ್ಯ ಕಾಲುವೆಗಳಲ್ಲಿ ಜಾಲಿ ಕಂಟಿ ಬೆಳೆದು ಹೂಳು ತುಂಬಿದ್ದು, ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ.ಈ ಮೊದಲು ನರಗುಂದ, ಸವದತ್ತಿ, ಬಾದಾಮಿ, ರಾಮದುರ್ಗ, ರೋಣ ತಾಲೂಕಿನ ಹಲವಾರು ಗ್ರಾಮಗಳ ಜಮೀನುಗಳಿಗೆ ನೀರು ಪೂರೈಕೆ ಮಾಡುವ ಮುಖ್ಯ ಕಾಲುವೆಗಳನ್ನು ಸರ್ಕಾರದಿಂದ ಬಂದ ಅನುದಾನದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಸ್ವಚ್ಛಗೊಳಿಸುತ್ತಿದ್ದರು.
ಆದರೆ ಎಚ್.ಕೆ. ಪಾಟೀಲ ಅವರು ಜಲಸಂಪನ್ಮೂಲ ಸಚಿವರಾದ ಸಂದರ್ಭದಲ್ಲಿ ಮಹಾರಾಷ್ಟ್ರ ಮಾದರಿಯಲ್ಲಿ ಇಲಾಖೆಯನ್ನು ನಿಗಮ ಮತ್ತು ನೀರು ಬಳಕೆದಾರರು ಸಂಘ ಸ್ಥಾಪನೆ ಮಾಡಿದಾಗಿನಿಂದ ಕಾಲುವೆಗಳಿಗೆ ವಾರಸುದಾರರು ಇಲ್ಲದಂತಾಗಿವೆ. ಕಾಲುವೆ ರಕ್ಷಣೆ ಮಾಡುವ ಜವಾಬ್ದಾರಿ ನೀರು ಬಳಕೆದಾರರ ಸಂಘದವರದ್ದು ಎಂದು ಅಧಿಕಾರಿಗಳು ಹೇಳುತ್ತಾರೆ. ಇನ್ನೊಂದೆಡೆ ನೀರು ಬಳಕೆದಾರರ ಸಂಘಗಳಿಗೆ ಬೀಗ ಹಾಕಿರುವುದರಿಂದ ಮಲಪ್ರಭಾ ಕಾಲುವೆಗಳು ಅನಾಥವಾಗಿವೆ.ಕಾಲುವೆ ನೀರು ಸಿಗುತ್ತಿಲ್ಲ: ನೀರಾವರಿ ನಿಗಮವಾದ ನಂತರ ಸರ್ಕಾರದಿಂದ ಕಾಲುವೆಯಲ್ಲಿನ ಜಾಲಿ ಕಂಟಿ, ಹೂಳು ತೆಗೆಸಲು ಸರಿಯಾದ ಸಮಯಕ್ಕೆ ಅನುದಾನ ಬರುತ್ತಿಲ್ಲ. ಇನ್ನೊಂದೆಡೆ ನೀರು ಬಳಕೆದಾರರ ಸಂಘಕ್ಕೆ ರೈತರಿಂದ ಸರಿಯಾಗಿ ನೀರಿನ ಕರ ವಸೂಲಿ ಆಗದ್ದರಿಂದ ಸಂಘವು ಕ್ರಿಯಾಶೀಲವಾಗಿಲ್ಲ. ಹೀಗಾಗಿ ಪ್ರತಿವರ್ಷ ಕಾಲುವೆಗೆ ಜಲಾಶಯದಿಂದ ನೀರು ಪೂರೈಕೆಯಾದರೂ ಕೆಳ(ತೈಲಂಡ) ಭಾಗದ ರೈತರ ಜಮೀನುಗಳಿಗೆ ನೀರು ಸಿಗುತ್ತಿಲ್ಲ.ಮುಖ್ಯ ಕಾಲುವೆ ಶಿಥಿಲ: ಸರ್ಕಾರ ಕೆಳ(ತೈಲಂಡ) ಭಾಗದ ರೈತರ ಜಮೀನುಗಳಿಗೆ ನೀರು ಮುಟ್ಟಿಸುವ ಉದ್ದೇಶದಿಂದ ಕಾಲುವೆಯನ್ನು ನವೀಕರಣಕ್ಕಾಗಿ ನೂರಾರು ಕೋಟಿ ಅನುದಾನವನ್ನು ಮಂಜೂರುಗೊಳಿಸಿ ದೊಡ್ಡ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಿತ್ತು. ಆದರೆ ಗುತ್ತಿಗೆದಾರರು ನವೀಕರಣದ ಕಾಮಗಾರಿ ಕಳಪೆ ಮಾಡಿದ್ದರಿಂದ ಕಾಲುವೆ ಶಿಥಿಲಗೊಂಡು ಕಾಂಕ್ರಿಟ್ ಕಿತ್ತು ಹೋಗುತ್ತಿದೆ ಎಂಬುದು ರೈತರ ಆರೋಪವಾಗಿದೆ.ಕಾಲುವೆ ಸ್ವಚ್ಛಗೊಳಿಸಿಲು ಹಣ ಇಲ್ಲ:ಪ್ರತಿವರ್ಷ ತಾಲೂಕಿನ ರೈತರು ಚಿಕ್ಕ ನರಗುಂದದಿಂದ ಕೊಣ್ಣೂರು ಗ್ರಾಮದವರೆಗೆ 40 ಕಿಮೀ ಜಮೀನುಗಳಿಗೆ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶ ಜಮೀನುಗಳಿಗೆ ನೀರು ಪೂರೈಸುವ ಮುಖ್ಯ ಕಾಲುವೆಯ ಹೂಳು ಮತ್ತು ಜಾಲಿ ಕಂಟಿ ಸ್ವಚ್ಛ ಮಾಡಿ ಜಮೀನುಗಳಿಗೆ ಸರಾಗವಾಗಿ ನೀರು ಮುಟ್ಟಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಈ ಕುರಿತು ರೈತ ಸಂಘಟನೆಗಳು ನೀರಾವರಿ ನಿಗಮದ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸರ್ಕಾರ ಕಾಲುವೆ ಸ್ವಚ್ಛಗೊಳಿಸಲು ಹಣ ನೀಡುತ್ತಿಲ್ಲವೆಂಬುದು ರೈತರ ಆರೋಪ.ಸರ್ಕಾರ ವಹಿಸಿಕೊಳ್ಳಲಿ: ಸರ್ಕಾರ ನೀರಾವರಿ ನಿಗಮ ರದ್ದು ಮಾಡಿ ಮೊದಲಿನಂತೆ ಕಾಲುವೆ ನಿರ್ವಹಣೆ ಮಾಡಬೇಕು. ಕಾಲುವೆಗಳನ್ನು ಅಧಿಕಾರಿಗಳ ಮೂಲಕ ಸ್ವಚ್ಛ ಮಾಡಿಸಿ ಎಲ್ಲ ರೈತರ ಜಮೀನುಗಳಿಗೆ ನೀರು ಮುಟ್ಟಿಸುವ ಜವಾಬ್ದಾರಿ ಸರ್ಕಾರ ವಹಿಸಿಕೊಳ್ಳಬೇಕು ಎಂದು ಮಹದಾಯಿ ಹೋರಾಟ ವೇದಿಕೆಯ ಅಧ್ಯಕ್ಷ ವೀರಬಸಪ್ಪ ಹೂಗಾರ ತಿಳಿಸಿದರು.
ಸರ್ಕಾರಕ್ಕೆ ಪ್ರಸ್ತಾವನೆ: ಚಿಕ್ಕನರಗುಂದದಿಂದ ಕೊಣ್ಣೂರಿನವರೆಗೆ 40 ಕಿಮೀ ಮುಖ್ಯ ಕಾಲುವೆ ಸ್ವಚ್ಛಗೊಳಿಸಲು ಕ್ರಿಯಾಯೋಜನೆ ತಯಾರಿಸಿ ನೀರಾವರಿ ನಿಗಮದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ತಕ್ಷಣ ಕಾಲುವೆ ಸ್ವಚ್ಛಗೊಳಿಸಲಾಗುವುದು ಎಂದು ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೆಂಕನಗೌಡ ಪಾಟೀಲ ತಿಳಿಸಿದರು.