ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ಬಸವಣ್ಣನವರು ಕರ್ನಾಟಕಕ್ಕೆ ಮಾತ್ರವಲ್ಲ; ಇಡೀ ವಿಶ್ವಕ್ಕೆ ಸಾಂಸ್ಕೃತಿಕ ನಾಯಕರು. ಸಮಾನತೆ ತತ್ವದ ಮೇಲೆ ಸಾಮಾಜಿಕ ಬದಲಾವಣೆಗೆ ಪರಿಶ್ರಮಿಸಿದ ಅವರನ್ನು ಕರ್ನಾಟಕಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಗದುಗಿನ ಜಗದ್ಗುರು ತೋಂಟದಾರ್ಯ ಮಠದ ಡಾ. ಸಿದ್ಧರಾಮ ಮಹಾಸ್ವಾಮಿಗಳು ತಿಳಿಸಿದರು.ನಗರದ ಬಸವ ಭವನದಲ್ಲಿ ಬಸವಸಂಸ್ಕೃತಿ ಅಭಿಯಾನ ಅಂಗವಾಗಿ ಜರುಗಿದ ಸಾರ್ವಜನಿಕ ಧಾರ್ಮಿಕ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯಕ್ಕೆ ಘನತೆ ಬಂದಿದ್ದೇ ವಚನ ಸಾಹಿತ್ಯದಿಂದ. ಈ ಮಾತನ್ನು ನಾಡಿನ ಅನೇಕ ವಿದ್ವಾಂಸರೇ ಹೇಳಿದ್ದಾರೆ. ಬಸವಣ್ಣನವರ ಸಂಪರ್ಕಕ್ಕೆ ಬಂದವರೆಲ್ಲರೂ ಶರಣರಾದರು. ಮನೆಗೆ ಕಳ್ಳತನಕ್ಕೆ ಬಂದವನನ್ನು ಸಹ ಬಸವಣ್ಣನವರು ಶರಣ ಎಂದು ಕರೆದ. ಆತನ ಮನಃ ಪರಿವರ್ತನೆಗೊಳಿಸಿ ಸಮಾಜಮುಖಿಯನ್ನಾಗಿಸಿದರು. ಕಂದಾಚಾರ, ಮೌಢ್ಯತೆ, ಅಂಧಶ್ರದ್ಧೆಗಳನ್ನು ದೂರ ಮಾಡಬೇಕು. ಸಮಾನತೆಯ ತತ್ವದಲ್ಲಿ ಸುಂದರ ಸಮಾಜ ನಿರ್ಮಾಣಗೊಳ್ಳಬೇಕು ಎಂಬ ಕಾರಣಕ್ಕಾಗಿಯೇ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಿಸಿದರು. ವಿಪರ್ಯಾಸ ಎಂದರೆ ಲಿಂಗಾಯತರಲ್ಲಿಯೇ ಮೌಢ್ಯತೆ, ಕಂದಾಚಾರಗಳು ಹೆಚ್ಚಾಗಿವೆ. ಬೇರೆ ಧರ್ಮಗಳ ಆಚಾರ-ವಿಚಾರಗಳು ಲಿಂಗಾಯತರ ಮನೆಗಳನ್ನು ಆಕ್ರಮಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು.ವ್ಯಸನಮುಕ್ತ ಸಮಾಜ ನಿರ್ಮಾಣವಾಗಬೇಕು. ಲಿಂಗಾಯತ ಆಚಾರ-ವಿಚಾರಗಳನ್ನು ಅಳವಡಿಸಿಕೊಂಡು ಮದ್ಯ ವ್ಯಸನಿಗಳಾಗುವ ಬದಲು ಲಿಂಗ ವ್ಯಸನಿಗಳಾಗಬೇಕು. ಮೌಢ್ಯದಿಂದ ದೂರ ಉಳಿದು ವೈಜ್ಞಾನಿಕ, ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಜಂಗಮಪ್ರೇಮಿಗಳಾಗಬೇಕು. ಸನ್ಮಾರ್ಗಿ, ಸದಾಚಾರಿಗಳಾಗಬೇಕು. ಈ ಹಿನ್ನೆಲೆ ಜನರಲ್ಲಿ ಬಸವಪ್ರಜ್ಞೆ ಮೂಡಿಸಬೇಕು ಎಂಬ ಉದ್ದೇಶದಿಂದಾಗಿಯೇ ನಾಡಿನಾದ್ಯಂತ ಬಸವಸಂಸ್ಕೃತಿ ಅಭಿಯಾನ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಒಳ ಪಂಗಡಗಳು ಸಾಮರಸ್ಯದ ದಿಕ್ಕು ತಪ್ಪಿಸುತ್ತಿವೆ:ಬಾಲ್ಕಿಯ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು ಮಾತನಾಡಿ, ಲಿಂಗಾಯತರು ಬಸವ ಸಂಸ್ಕೃತಿಯಿಂದ ದೂರ ಸರಿಯುತ್ತಿದ್ದಾರೆ. ವಚನಗಳಿಂದ ದೂರ ಉಳಿಯುತ್ತಿದ್ದಾರೆ. ಬಸವಪ್ರಜ್ಞೆ ಜಾಗೃತಗೊಳಿಸಬೇಕು. ಪ್ರತಿಯೊಬ್ಬರಲ್ಲೂ ಬಸವನಿಷ್ಠೆಯನ್ನು ಬೆಳೆಸಬೇಕು. ಈ ಹಿನ್ನೆಲೆ ಬಸವ ಸಂಸ್ಕೃತಿ ಅಭಿಯಾನ ಹೆಚ್ಚು ಮಹತ್ವ ಪಡೆದುಕೊಂಡಿದೆ. ಲಿಂಗಾಯತ ಸಮುದಾಯದಲ್ಲಿನ ಒಳ ಪಂಗಡಗಳು ಸಾಮರಸ್ಯವನ್ನು ದಿಕ್ಕು ತಪ್ಪಿಸುತ್ತಿವೆ. ಆದರೆ, ಲಿಂಗಾಯತ ಸಮಾಜದ ಎಲ್ಲ ಒಳ ಪಂಗಡಗಳ ಗುರು ಬಸವಣ್ಣ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದರು.ಜಾತಿ ಗಣತಿಯಲ್ಲಿ ಯಾವುದೇ ಗೊಂದಲ ಮಾಡಿಕೊಳ್ಳದೆ ಲಿಂಗಾಯತ ಎಂದು, ಜಾತಿ ಕಾಲಂನಲ್ಲಿ ಉಪ ಪಂಗಡಗಳನ್ನು ಬರೆಸಿ ಎಂದು ಸಲಹೆ ನೀಡಿದರು.
ಪ್ರೇಮಕ್ಕ ಅಂಗಡಿ ಶರಣಪಥದ ನಿಜಾಚರಣೆಗಳು ಕುರಿತು ಉಪನ್ಯಾಸ ನೀಡಿದರು. ಶೇಗುಣಸಿಯ ಬಸವಪ್ರಭು ಸ್ವಾಮಿ, ಉರವಕೊಂಡ ಮಠದ ಡಾ. ಕರಿಬಸವರಾಜೇಂದ್ರ ಸ್ವಾಮಿಗಳು, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿದರು. ಹುಲುಸೂರು ಸಂಸ್ಥಾನಮಠದ ಶಿವಾನಂದ ಮಹಾಸ್ವಾಮಿ, ಮಹಾಂತಸ್ವಾಮಿಗಳು, ಬಸವಲಿಂಗ ಪಟ್ಟದೇವರು, ನವಲಗುಂದದ ಬಸವಲಿಂಗ ಮಹಾಸ್ವಾಮಿ, ಸಂಡೂರು ವಿರಕ್ತಮಠದ ಪ್ರಭುಸ್ವಾಮಿ, ಎಮ್ಮೆಲ್ಸಿ ವೈ.ಎಂ. ಸತೀಶ್, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ರಾಯದುರ್ಗದ ಮಾಜಿ ಶಾಸಕ ರಾಮಚಂದ್ರ ರೆಡ್ಡಿ, ಲಿಂಗಾಯತ ಸಮಾಜದ ಹಿರಿಯ ಮುಖಂಡ ಡಾ. ಮಹಿಪಾಲ, ಲಿಂಗಾಯತ ಮಹಾಸಭಾದ ಅಧ್ಯಕ್ಷ ಎನ್.ಜಿ. ಬಸವರಾಜಪ್ಪ ಮತ್ತಿತರರಿದ್ದರು. ಹಿರಿಯ ಲೆಕ್ಕ ಪರಿಶೋಧಕ ಸಿರಿಗೇರಿ ಪನ್ನರಾಜ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿಷ್ಠಿ ರುದ್ರಪ್ಪ, ವೀವಿ ಸಂಘದ ಅಧ್ಯಕ್ಷ ಕಣೇಕಲ್ ಮಹಾಂತೇಶ್ ಹಾಗೂ ಕೆ.ವಿ. ರವಿಶಂಕರ್ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಸಾಣೇಹಳ್ಳಿಯ ಶಿವಸಂಚಾರ ನಾಟಕ ತಂಡದಿಂದ ಜಂಗಮದೆಡೆಗೆ ನಾಟಕ ಪ್ರದರ್ಶನಗೊಂಡಿತು. ಕಾರ್ಯಕ್ರಮ ಮುನ್ನ ಬಸವ ಸಂಸ್ಕೃತಿ ಅಭಿಯಾನ ಹಿನ್ನೆಲೆ ಬೃಹತ್ ಮೆರವಣಿಗೆ ಹಾಗೂ ಯುವಕರ ಬೈಕ್ ರ್‍ಯಾಲಿ ನಡೆಯಿತು. ಸಂಜೆ ಬಸವಜ್ಯೋತಿ ರಥ ಯಾತ್ರೆ ಜರುಗಿತು. ಬಳ್ಳಾರಿ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.