ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನವು ತನ್ನ ವಿವಿಧ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಜ. 18ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಪ್ರಶಸ್ತಿ ಪ್ರದಾನ ಆಯೋಜಿಸಿದೆ.

ಧಾರವಾಡ:

ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನವು ತನ್ನ ವಿವಿಧ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಜ. 18ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಪ್ರಶಸ್ತಿ ಪ್ರದಾನ ಆಯೋಜಿಸಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಯಲ್ಲಪ್ಪ ಹಿಮ್ಮಡಿ ಮಾಹಿತಿ ನೀಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ನೇ ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪುಸ್ತಕ ಪ್ರಶಸ್ತಿಯು ಮೈಸೂರಿನ ಗೋವಿಂದರಾಜು ಕಲ್ಲೂರ ಅವರ ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು ಕಥೆ ಹಾಗೂ ಚಿಕ್ಕಮಗಳೂರಿನ ಫೌಝಿಯ ಸಲೀಂ ಅವರ ನೀ ದೂರ ಹೋದಾಗ ಕಾದಂಬರಿಗೆ ನೀಡಲಾಗುತ್ತಿದೆ. ಅದೇ ರೀತಿ 2024ನೇ ಸಾಲಿನ ಯುವ ಸಾಹಿತ್ಯ ಪುಸ್ತಕ ಪ್ರಶಸ್ತಿಯು ಧಾರವಾಡದ ಕಾವ್ಯಾ ಕಡಮೆ ಅವರ ತೊಟ್ಟು ಕ್ರಾಂತಿ ಕಥೆ ಹಾಗೂ ಬೆಂಗಳೂರಿನ ಜಯರಾಮಚಾರಿ ಅವರ ಕಿಲೆಗ್‌ ಕಾದಂಬರಿಗೆ ಲಭಿಸಿದೆ. ತಲಾ ₹ 10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಪ್ರಶಸ್ತಿ ಹೊಂದಿರುತ್ತದೆ ಎಂದರು.

2024ನೇ ಸಾಲಿನಲ್ಲಿ ಪ್ರತಿಷ್ಠಾನದ ಈ ಹಿಂದಿನ ಅಧ್ಯಕ್ಷರು, ಸಾಹಿತಿ ಮಲ್ಲಿಕಾರ್ಜುನ ಹಿರೇಮಠ ಅವರು ಬಸವರಾಜ ಕಟ್ಟೀಮನಿ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸಿದ್ದು, ಹಿರಿಯ ಪತ್ರಕರ್ತರು, ಹುಬ್ಬಳ್ಳಿಯ ಅರುಣಕುಮಾರ ಹಬ್ಬು ಅವರ ಬೊಗಸೆ ನೀರು ಆತ್ಮಕಥೆಗೆ ಆತ್ಮಕಥಾ ಪ್ರಶಸ್ತಿ ಕೊಡಲಾಗುತ್ತಿದೆ. ಈ ಪ್ರಶಸ್ತಿಯು ₹ 20 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ ಎಂದ ಅವರು, ಪ್ರತಿಷ್ಠಾನವು ಕಟ್ಟೀಮನಿ ಅವರ ಹೆಸರಿನಲ್ಲಿ ಕಟ್ಟೀಮನಿ ಕಥೀ ಹೇಳೋಣ ಎಂಬ ಹೊಸ ಹೊಸ ಪ್ರಯೋಗ ಮಾಡುತ್ತಿದ್ದು, ಈ ಮೂಲಕ ಯುವ ಜನಾಂಗಕ್ಕೆ ಕಟ್ಟೀಮನಿ ಅವರನ್ನು ಪರಿಚಯಿಸುವ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜ. 18ರ ಸಂಜೆ 4.30ಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕೇಂದ್ರೀಯ ವಿವಿ ಕನ್ನಡ ಪ್ರಾಧ್ಯಾಪಕ ಡಾ. ವಿಕ್ರಮ್‌ ವಿಸಾಜಿ, ಹಿರಿಯ ಸಾಹಿತಿ ಡಾ. ಮಾಲತಿ ಮುದಕವಿ ಅಭಿನಂದನಾ ನುಡಿ ಹೇಳುವರು. ಡಾ. ಸಂಜೀವ ಕುಲಕರ್ಣಿ, ಕೆ.ಎಚ್‌. ಚೆನ್ನೂರ, ಮಲ್ಲಿಕಾರ್ಜುನ ಹಿರೇಮಠ ಹಾಗೂ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ವಿದ್ಯಾವತಿ ಭಜಂತ್ರಿ ಕಾರ್ಯಕ್ರಮದಲ್ಲಿರುತ್ತಾರೆ ಎಂದು ಡಾ. ಯಲ್ಲಪ್ಪ ಹಿಮ್ಮಡಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ, ಪ್ರತಿಷ್ಠಾನದ ಸದಸ್ಯರಾದ ಮಂಜುಳಾ ಬಿರಾದಾರ, ಸೋಮನಾಥ ಚಿಕ್ಕನರಗುಂದ ಇದ್ದರು.