ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ರಾಜು ಡಿ.ಎಸ್. ಅವರು ಖಾಸಗಿ ಮತ್ತು ಸರ್ಕಾರಿ ವಲಯದ ಮಧ್ಯೆ ಬಹಳಷ್ಟ ವ್ಯತ್ಯಾಸವಿದ್ದು, ಖಾಸಗೀ ವಲಯದಲ್ಲಿ ನಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ. ಪ್ರತೀ ಕ್ಷಣ ನಮ್ಮನ್ನು ನಾವು ಅಪ್ಡೇಟ್ ಮಾಡಿಕೊಳ್ಳುವ ಮೂಲಕ ಪರಿಶ್ರಮ ಪಟ್ಟರೆ ಮಾತ್ರ ಉನ್ನತ ಮಟ್ಟ ತಲುಪಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಯಾವುದೇ ಸಂಸ್ಥೆಗೆ ಕ್ಯಾಂಪಸ್ ಸಂದರ್ಶನ ಕೊಡುವ ಮೊದಲು ವಿದ್ಯಾರ್ಥಿಗಳು ಆ ಸಂಸ್ಥೆಯ ಬಗ್ಗೆ ಸಂಪೂರ್ಣ ಮಾಹಿತಿ ಹೊಂದುವುದು ಅತೀ ಅಗತ್ಯ. ಇದರಿಂದ ಉದ್ಯೋಗಾಕಾಂಕ್ಷಿಗಳು ದಿಕ್ಕು ತಪ್ಪುವ ಸಾಧ್ಯತೆ ಕಡಿಮೆ ಎಂದು ಎಸ್‌ಎಂಎಫ್‌ಜಿ ಹಾಸನ ಶಾಖೆಯ ಮುಖ್ಯ ವ್ಯವಸ್ಥಾಪಕ ಚೇತನ್ ಕುಮಾರ್‌ ಹೇಳಿದರು.

ಅವರು ನಗರದ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಕ್ಯಾಂಪಸ್‌ನಲ್ಲಿ ಭಾಗವಹಿಸುತ್ತಿರುವ ಸಂಸ್ಥೆಯ ಬಗ್ಗೆ ತಿಳುವಳಿಕೆ ಇದ್ದಷ್ಟು ಸಂದರ್ಶನವನ್ನು ಎದುರಿಸಲು ಧೈರ್ಯ ಮತ್ತು ವಿಶ್ವಾಸ ಹೆಚ್ಚುತ್ತದೆ, ಅದರಿಂದ ಸುಲಭ ಯಶಸ್ಸನ್ನೂ ಸಾಧಿಸಬಹುದು ಎಂದರು. ಇದೇ ವೇಳೆ ಅವರು ಬ್ಯಾಂಕಿಂಗ್ ಸೆಕ್ಟರ್ ಮತ್ತು ನಾನ್ ಬ್ಯಾಂಕಿಂಗ್ ಸೆಕ್ಟರ್ಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾದ ಮಾಹಿತಿ ನೀಡಿದರು. 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದ ಬೃಹತ್ ಜಾಬ್ ಮೇಳದಲ್ಲಿ ಪ್ರತಿಷ್ಠಿತ ಸಂಸ್ಥೆಗಳಾದ ಗೋಕುಲ್ದಾಸ್ ಎಕ್ಸ್ಪೋರ್ಟ್ ಪ್ರೈ. ಲಿ., ಎಸ್‌ಎಂಎಫ್‌ಜಿ, ಎಸ್‌ಎಸ್‌ಪಿಎಂ ಪ್ರೈ. ಲಿ. ಮತ್ತು ಜೋಯಾಲುಕ್ಕಾಸ್ ಸೇರಿದಂತೆ ವಿವಿಧ ಸಂಸ್ಥೆಗಳು ಭಾಗವಹಿಸಿ ಲಿಖಿತ ಮತ್ತು ಮೌಖಿಕ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳನ್ನು ಸಂದರ್ಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ರಾಜು ಡಿ.ಎಸ್. ಅವರು ಖಾಸಗಿ ಮತ್ತು ಸರ್ಕಾರಿ ವಲಯದ ಮಧ್ಯೆ ಬಹಳಷ್ಟ ವ್ಯತ್ಯಾಸವಿದ್ದು, ಖಾಸಗೀ ವಲಯದಲ್ಲಿ ನಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ. ಪ್ರತೀ ಕ್ಷಣ ನಮ್ಮನ್ನು ನಾವು ಅಪ್ಡೇಟ್ ಮಾಡಿಕೊಳ್ಳುವ ಮೂಲಕ ಪರಿಶ್ರಮ ಪಟ್ಟರೆ ಮಾತ್ರ ಉನ್ನತ ಮಟ್ಟ ತಲುಪಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.

ಪದವಿ ವಿಭಾಗದ ಪ್ಲೇಸ್ಮೆಂಟ್ ಸೆಲ್ನ ಸಂಯೋಜಕರಾದ ಡಾ. ಸವಿತಾ ಅವರು ಮಾತನಾಡಿ, ಉದ್ಯೋಗಾಂಕ್ಷಿಗಳು ವಿದ್ಯಾರ್ಥಿ ದೆಸೆಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವುದರಿಂದ ಯಶಸ್ಸು ಸಾಧ್ಯವಾಗುತ್ತದೆ. ವೃತ್ತಿ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳು ಪದವಿಯ ಜೊತೆಗೆ ಇಂಗ್ಲೀಷ್ ಸಂವಹನ ಮತ್ತು ಕೌಶಲ್ಯದ ಕಡೆಗೂ ಒತ್ತು ನೀಡಬೇಕಿದ್ದು, ಅಂಕಗಳ ಜೊತೆಗೆ ಜ್ಞಾನದ ಸಮನ್ವಯ ಅತೀ ಮುಖ್ಯ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಶೈಕ್ಷಣಿಕ ಡೀನ್ ಡಾ. ಹರೀಶ್ ಎಂ.ಕೆ, ಪರೀಕ್ಷಾ ನಿಯಂತ್ರಕರಾದ ಡಾ. ಮುರಳೀಧರ್‌ ಕೆ.ಡಿ. ಸ್ನಾತಕೋತ್ತರ ವಿಭಾಗದ ಪ್ಲೇಸ್ಮೆಂಟ್ ಸೆಲ್ ಸಂಯೋಜಕಿ ಡಾ. ಶಾಂತ ಪಿ. ಆರ್‌. ಮತ್ತು ವಿವಿಧ ಕಂಪೆನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.