ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ
ಮಾಸಾಂತ್ಯದಲ್ಲಿ ಮುಂಗಾರು ಪ್ರವೇಶವಾಗಲಿದ್ದು, ಮಳೆಯಿಂದಾಗುವ ಹಾನಿಗಳ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು 24X7 ಮಾದರಿಯಲ್ಲಿ ಕೆಲಸ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಜಿ.ಪ್ರಭು ಅವರು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಳೆಹಾನಿ ಹಾಗೂ ಬೆಳೆ ಹಾನಿಯ ವಿವರ ಪಡೆದು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ವಿಡಿಯೋ ಸಂವಾದ ಸಭೆ ಮೂಲಕ ಅವರು ಸೂಚನೆಗಳನ್ನು ನೀಡಿದರು.ಮೇ 21ರಂದು ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆಯಾಗಿದ್ದು, ಜಿಲ್ಲೆಯ ವಿವಿಧೆಡೆ ತೋಟಗಾರಿಕಾ ಬೆಳೆಗಳು ನಾಶವಾಗಿವೆ. ಗೌರಿಬಿದನೂರು ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದೆ. 20 ಹೆಕ್ಟೇರ್ ಬಾಳೆ, 1.60 ಹೆಕ್ಟೇರ್ ಅಡಿಕೆ, 1.20 ಹೆಕ್ಟೇರ್ ಟೊಮೆಟೋ ಹಾಗೂ 2 ಹೆಕ್ಟೇರ್ ತರಕಾರಿ ಬೆಳೆಗಳು ಜಿಲ್ಲೆಯಲ್ಲಿ ನಾಶವಾಗಿದ್ದು, ಆ ಎಲ್ಲಾ ರೈತರ ತಾಕುಗಳಿಗೆ ತಾಲೂಕು ತಹಸೀಲ್ದಾರರು ಖುದ್ದು ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಬೇಕು. ಜೊತೆಗೆ ತೋಟಗಾರಿಕೆ ಇಲಾಖೆಯ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆ ನಡೆಸಿ ಪರಿಹಾರ ಹಣ ನೀಡಲು ತುರ್ತು ಕ್ರಮ ವಹಿಸಬೇಕು ಎಂದು ಡಿಸಿ ಸೂಚಿಸಿದರು.
ಜಿಲ್ಲೆಯ ಯಾವುದೇ ಭಾಗದಲ್ಲಿ ಮಳೆ ಹಾನಿಯಾದಲ್ಲಿ ತಾಲೂಕು ಅಧಿಕಾರಿಗಳು ಕ್ಷೇತ್ರ ವೀಕ್ಷಿಸಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾಲೋಚಿತ ಕ್ರಮ ತೆಗೆದುಕೊಳ್ಳಬೇಕು. ಮಳೆ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನು ಸೇರಿಸಿ ತಾಲೂಕು ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಸಿ ಸ್ಥಳೀಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಕ್ತ ನಿರ್ದೇಶನವನ್ನು ಆಯಾ ತಹಸೀಲ್ದಾರ್‌ಗಳು ನೀಡಬೇಕು. ಈಗಾಗಲೆ ಸಿಡಿಲು ಬಡಿದು ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮುಂಗಾರು ಅವಧಿಯಲ್ಲಿ ಸಿಡಿಲು ಬಡಿಯುವ ಸಾಧ್ಯತೆ ಜಾಸ್ತಿ ಇರಲಿದೆ. ಸಿಡಿಲು ಘಟನೆಗಳನ್ನು ತಪ್ಪಿಸಲು ಜನರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಸೇರಿದಂತೆ ಈ ವರ್ಷ ಜಿಲ್ಲೆಯಲ್ಲಿ ಕೈಗೊಳ್ಳುವ ಕೃಷಿ ಚಟುವಟಿಕೆಗಳ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಿ ಮುಂಗಾರು ಪುರ್ವದಲ್ಲೆ ರೈತರಿಗೆ ಮಾಹಿತಿ ನೀಡಲು ಜಂಟಿ ಕೃಷಿ ನಿರ್ದೇಶಕರಿಗೆ ಸೂಚನೆ ನೀಡಿದರು.ರಸ್ತೆ ಇಕ್ಕೆಲ ಸ್ವಚ್ಛ ಮಾಡಿ: ನಗರಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳು ಹಾಗೂ ಇತರ ರಸ್ತೆಗಳ ಇಕ್ಕೆಲಗಳಲ್ಲಿ ಶೇಖರಣೆ ಆಗಿರುವ ತ್ಯಾಜ್ಯ ವಸ್ತುಗಳು, ಪ್ಲಾಸ್ಟಿಕ್ ತ್ಯಾಜ್ಯವನ್ನು ಒಂದು ವಾರದ ಒಳಗಾಗಿ ತೆರವು ಮಾಡಬೇಕು. ಖಾಲಿ ನಿವೇಶನಗಳಲ್ಲಿ ಗಿಡಗಳನ್ನು ಹಾಗೂ ಘನ ತ್ಯಾಜ್ಯವನ್ನು ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕವೇ ತೆರವು ಮಾಡಬೇಕು ಎಂದು ಸೂಚನೆ ನೀಡಿದರು.
ಬಾಕ್ಸ್...
ರಾಜಕಾಲುವೆ ಸ್ವಚ್ಛಗೊಳಿಸಿ:ಸಿಇಒ
ಜಿಪಂ ಸಿಇಒ ಡಾ. ನವೀನ್ ಭಟ್ ಮಾತನಾಡಿ, ಮಳೆ ನೀರು ಸರಾಗವಾಗಿ ಹರಿಯಲು ಜಿಲ್ಲೆಯಲ್ಲಿನ ರಾಜಕಾಲುವೆಗಳು, ಚರಂಡಿ ತುರ್ತಾಗಿ ಸ್ವಚ್ಛ ಮಾಡಬೇಕು. ಗಿಡ, ಮರ, ಹುಲ್ಲು ಹಾಗೂ ಯಾವುದೇ ರೀತಿಯ ತ್ಯಾಜ್ಯವಿದ್ದಲ್ಲಿ ತೆರವು ಮಾಡಬೇಕು. ಒಂದು ಗ್ರಾಮ ಅಥವಾ ವಾರ್ಡನ್ನು ಸ್ವಚ್ಛಗೊಳಿಸಲು ಒಂದು ತಂಡವನ್ನು ಸ್ಥಳೀಯವಾಗಿ ರಚಿಸಿ ಆ ಗ್ರಾಮ/ವಾರ್ಡ್ ವ್ಯಾಪ್ತಿಯಲ್ಲಿನ ತ್ಯಾಜ್ಯ ವಿಲೇವಾರಿ ಮಾಡಿ ಸ್ವಚ್ಛತೆ ಕೈಗೊಳ್ಳಲು ಕ್ರಮ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ಸಿಕೆಬಿ-3 ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಜಿ.ಪ್ರಭು ಮಳೆಹಾನಿ ಹಾಗೂ ಬೆಳೆ ಹಾನಿಯ ವಿವರದ ವಿಡಿಯೋ ಸಂವಾದ ಸಭೆ ನಡೆಸಿದರು.