ರಾತ್ರಿ ನಿದ್ದೆಯಲ್ಲಿ ಮೈಮೇಲೆ ಏನೋ ಹರಿದಾಡಿದ ಅನುಭವವಾದರೂ ಇಲಿ ಇರಬೇಕೆಂದು ನಿರ್ಲಕ್ಷ್ಯಿಸಿ ಮಲಗಿದ್ದ ಅಣ್ಣ-ತಂಗಿ ಇಬ್ಬರು, ಬೆಳಗ್ಗೆ ಕಣ್ಣು ಬಿಟ್ಟಾಗ ಕಂಡ ದೃಶ್ಯಕ್ಕೆ ಬೆಚ್ಚಿಬಿದ್ದಿದ್ದಾರೆ.
ಬೆಂಗಳೂರು : ರಾತ್ರಿ ನಿದ್ದೆಯಲ್ಲಿ ಮೈಮೇಲೆ ಏನೋ ಹರಿದಾಡಿದ ಅನುಭವವಾದರೂ ಇಲಿ ಇರಬೇಕೆಂದು ನಿರ್ಲಕ್ಷ್ಯಿಸಿ ಮಲಗಿದ್ದ ಅಣ್ಣ-ತಂಗಿ ಇಬ್ಬರು, ಬೆಳಗ್ಗೆ ಕಣ್ಣು ಬಿಟ್ಟಾಗ ಕಂಡ ದೃಶ್ಯಕ್ಕೆ ಬೆಚ್ಚಿಬಿದ್ದಿದ್ದಾರೆ.
ಐದು ಅಡಿ ಉದ್ದದ ವಿಷಪೂರಿತ ನಾಗರ
ರಾತ್ರಿಯಿಡೀ ಬರೋಬ್ಬರಿ ಐದು ಅಡಿ ಉದ್ದದ ವಿಷಪೂರಿತ ನಾಗರಹಾವಿನ ಮೇಲೆಯೇ ಮಲಗಿ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ರೋಚಕ ಘಟನೆ ನಗರದ ಬಾಗಲಗುಂಟೆಯ ಭೈರವೇಶ್ವರ ನಗರದಲ್ಲಿ ನಡೆದಿದೆ.
ಮನೆಯ ಕಾಂಪೌಂಡ್ ಒಳಗೆ ನುಗ್ಗಿದ್ದ ನಾಗರಹಾವು, ಕಿಟಕಿಯ ಪಕ್ಕದಲ್ಲೇ ಇರಿಸಲಾಗಿದ್ದ ವಾಷಿಂಗ್ ಮೆಷಿನ್ ಏರಿ, ತೆರೆದಿದ್ದ ಕಿಟಿಕಿಯ ಮೂಲಕ ಕೊಠಡಿಯೊಳಗೆ ಪ್ರವೇಶಿಸಿದೆ. ಆ ವೇಳೆ ರೂಮಿನಲ್ಲಿ ಗಾಢ ನಿದ್ದೆಯಲ್ಲಿದ್ದ ಅಣ್ಣ-ತಂಗಿಯ ಮೈಮೇಲೆ ಹಾಗೂ ಒಂದೆರಡು ಬಾರಿ ಹರಿದಾಡಿದೆ. ಆದರೆ, ಗಾಢ ನಿದ್ದೆಯಲ್ಲಿದ್ದ ಅವರು ಅದು ಇಲಿ ಇರಬಹುದೆಂದು ಭಾವಿಸಿ ಮೈಕೊಡವಿ ಮತ್ತೆ ನಿದ್ದೆಗೆ ಜಾರಿದ್ದಾರೆ.
ಬೆಳಗ್ಗೆ ಎದ್ದು ಹಾಸಿಗೆ ಸರಿಪಡಿಸುವಾಗ ದಿಂಬಿನ ಕೆಳಗೆ ಸುರಳಿ ಸುತ್ತಿ ಮಲಗಿದ್ದ ಐದು ಅಡಿ ಉದ್ದದ ಬೃಹತ್ ನಾಗರ ಹಾವನ್ನು ಕಂಡು ಮನೆಯವರು ದಿಗ್ಭ್ರಮೆಗೊಂಡಿದ್ದಾರೆ. ತಕ್ಷಣವೇ ಉರಗ ತಜ್ಞ ನಾಗೇಂದ್ರ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ನಾಗೇಂದ್ರ ಅವರು ಅತ್ಯಂತ ಜಾಗರೂಕತೆಯಿಂದ ಹಾವನ್ನು ಸೆರೆಹಿಡಿದು, ಹೆಸರಘಟ್ಟದ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ.
ಈ ಘಟನೆಯ ಕುರಿತು ಮಾಹಿತಿ ಹಂಚಿಕೊಂಡಿರುವ ಉರಗ ತಜ್ಞ ನಾಗೇಂದ್ರ ಅವರು, ಸಾರ್ವಜನಿಕರು ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿಸಿದ್ದಾರೆ.
ಅಕ್ಟೋಬರ್ನಲ್ಲಿ ಚಳಿಗಾಲ ಶುರು
ಅಕ್ಟೋಬರ್ನಲ್ಲಿ ಚಳಿಗಾಲ ಶುರುವಾಗುತ್ತದೆ. ಆದ್ದರಿಂದ ಹಾವುಗಳಿಗೆ ಬೆಚ್ಚಗಿರುವ ಜಾಗ ಬೇಕಾಗುತ್ತದೆ. ಹಂಡೆ ಒಲೆ, ಸೌದೆ ಒಲೆ, ಗಾಡಿ ಎಂಜಿನ್, ಶೂ ಒಳಗೆ, ಹಾಸಿಗೆ, ದಿಂಬಿನ ಕೆಳಗಡೆ ಹಾವುಗಳು ಸೇರಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಕಿಟ್ಟಕಿ, ಬಾಗಿಲುಗಳನ್ನು ಮಲಗುವಾಗಿ ತೆಗೆದು ಇಡಬೇಡಿ. ಅವುಗಳ ಪಕ್ಕವೂ ತ್ಯಾಜ್ಯ ವಸ್ತುಗಳನ್ನು ಇಡುವುದು ಒಳ್ಳೆಯದಲ್ಲ. ಗಿಡ, ಮರ ಬಳ್ಳಿಗಳನ್ನು ಬಾಗಿಲು ಪಕ್ಕದಲ್ಲಿ ಬೆಳಸಬೇಡಿ, ಅದನ್ನು ಹತ್ತಿಕೊಂಡು ಒಳಗೆ ಬರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
