ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟನೆ ಪ್ರತಿಯೊಬ್ಬರ ಹಕ್ಕಾಗಿದ್ದರೂ ಅದರ ಹೆಸರಲ್ಲಿ ದೇಶವಿರೋಧಿ ಕೃತ್ಯ ನಡೆಸುವುದು ಅಸಹನೀಯ. ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಬಾರದು, ಸಂವಿಧಾನ ಈ ದೇಶದ ಪವಿತ್ರ ಗ್ರಂಥವಾಗಿ ಸರ್ವರೂ ಅದನ್ನೇ ಅನುಸರಿಸಬೇಕೆಂದು ಶಾಸಕ ಸಿದ್ದು ಸವದಿ ಹೇಳಿದರು.ಬನಹಟ್ಟಿಯ ಎಸ್ಟಿಸಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ತಾಲೂಕು ಆಡಳಿತ ರಬಕವಿ-ಬನಹಟ್ಟಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ವಕೀಲರ ಸಂಘ ಸಂಯುಕ್ತವಾಗಿ ಆಯೋಜಿಸಿದ್ದ ಅಣಕು ಯುವ ಸಂಸತ್ತು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಕಾರ್ಯ ವೈಖರಿ, ಸಂಸತ್ ಮತ್ತು ವಿಧಾನ ಸಭೆಗಳಲ್ಲಿನ ಆಡಳಿತ ಮತ್ತು ಪ್ರತಿಪಕ್ಷಗಳ ಕಾರ್ಯ ವಿಧಾನಗಳು ಪ್ರೌಢ, ಪಿಯು ಮತ್ತು ಪದವಿ ಹಂತದ ಮಕ್ಕಳಿಗೂ ಸುಲಭಗ್ರಾಹ್ಯವಾಗಲು ಮತ್ತು ಮಕ್ಕಳಲ್ಲಿ ಒಗ್ಗಟ್ಟು, ಪ್ರಜೆಗಳ ಕಲ್ಯಾಣಕ್ಕೆ ಅಗತ್ಯ ತಂತ್ರಗಳ ಅನುಸರಿಸಲು ಬೇಕಾದ ಕೌಶಲ್ಯಗಳು, ಇಂಥ ಅಣಕು ಸಂಸತ್ಗಳಲ್ಲಿ ಭಾಗಿಯಾಗುವುದರಿಂದ ನೆರವಾಗುತ್ತವೆ ಎಂದರು.ಪ್ರಾಸ್ತಾವಿಕ ಮಾತುಗಳಾಡಿದ ಶಿಕ್ಷಣ ಸಂಯೋಜಕ ಮಹಾಂತೇಶ ಚವಾಣ್, ಯುವ ಸಂಸತ್ಗೆ ಪ್ರೌಢವಿಭಾಗದ ೨೨, ಪಿಯು ವಿಭಾಗದ ೩೪ ಮತ್ತು ಪದವಿ ವಿಭಾಗದ ೧೧೨, ಸ್ನಾತಕೋತ್ತರ ವಿಭಾಗದ ೫೬ ಸೇರಿ ಒಟ್ಟು ೨೨೪ ಮಕ್ಕಳ ಸಂಸತ್ ರಚಿಸಲಾಗಿದೆ. ಜಿಲ್ಲಾ ಹಂತಕ್ಕೆ ಒಟ್ಟು ೩೨ ಮಕ್ಕಳ ಆಯ್ಕೆ ಮಾಡಲಾಗುತ್ತದೆ. ಪಾಲ್ಗೊಂಡು ವಿಜೇತರಾಗುವ ಮಕ್ಕಳು ರಾಜ್ಯ ಮಟ್ಟದವರೆಗೂ ನಮ್ಮ ತಾಲೂಕಿನ ಕೀರ್ತಿ ಹೆಚ್ಚಿಸಲಿ ಎಂದರು.
ವೇದಿಕೆಯಲ್ಲಿ ತಹಸೀಲ್ದಾರ ವಿಜಯಕುಮಾರ ಕಡಕೋಳ, ತಾಪಂ ಇಒ ಬಸವರಾಜ ಐನಾಪುರ, ಡಾ.ಬಿ.ಆರ್. ಗೊಡ್ಡಾಳೆ, ಡಾ.ಶಿವು ಹಂದಿಗುಂದ, ತೇರದಾಳ ಪದವಿ ಕಾಲೇಜು ಪ್ರಚಾರ್ಯೆ ಶೈಲಾ, ಬಿಸಿಯೂಟ ಅಧಿಕಾರಿ ಸಿ.ಎಸ್. ಕಲ್ಯಾಣಿ, ಪ್ರಾಚಾರ್ಯ ಎಚ್.ಬಿ. ನದಾಫ್, ಸಮಾಜ ಕಲ್ಯಾಣ ಇಲಾಖೆ ಸಹ ನಿರ್ದೇಶಕ ಜಗದೇವ ಪಸೋಡಿ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಆರ್.ಪಾಟೀಲ ಇತರರಿದ್ದರು.ಎಚ್.ವೈ.ಅಲಾಸ ಸ್ವಾಗತಿಸಿದರು. ಡಾ.ಮನೋಹರ ಶಿರಹಟ್ಟಿ ಪ್ರಮಾಣ ವಚನ ಬೋಧಿಸಿದರು. ಎಸ್.ಎಂ.ತೇಲಿ ನಿರೂಪಿಸಿದರು. ಸಂತೋಷ ರಾಮದುರ್ಗ ವಂದಿಸಿದರು.