ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ಜಿಲ್ಲೆಯ ಅಲ್ಲಲ್ಲಿ ಶುಕ್ರವಾರ ಮುಂಜಾನೆ ಮಳೆ ಸುರಿದಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಚಿತ್ರದುರ್ಗ, ಚಳ್ಳಕೆರೆ ಹಾಗೂ ಹೊಳಲ್ಕೆರೆ ತಾಲೂಕಿನಲ್ಲಿ ಮಳೆ ಪ್ರಮಾಣ ತುಸು ಹೆಚ್ಚಾಗಿತ್ತು. ಚಳ್ಳಕೆ ತಾಲೂಕಿನ ನಾಯಕನಹಟ್ಟಿಯಲ್ಲಿ ಅತಿ ಹೆಚ್ಚು ಅಂದರೆ 38 ಮಿಮೀ ಮಳೆ ಬಿದ್ದಿದ್ದು ಅಲ್ಲಿನ ಪೊಲೀಸ್ ಠಾಣೆ ಜಲಾವೃತಗೊಂಡಿದೆ. ಠಾಣೆಗೆ ಹೋಗುವವರು ದೋಣಿ ವ್ಯವಸ್ಥೆ ಮಾಡಿ ಎಂಬ ಅಹವಾಲು ಮಂಡಿಸುವಂತಾಗಿದೆ.ಶುಕ್ರವಾರ ಬಿದ್ದ ಮಳೆ ಹೊಳಲ್ಕೆರೆ ತಾಲೂಕಿನ ಅಡಕೆ ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ತೋಟಗಳ ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ ಹೋಗಿದ್ದ ರೈತರು ನಿಟ್ಟುಸಿರು ಬಿಡುವಂತಾಗಿದೆ. ಟ್ಯಾಂಕರ್ ನೀರು ಪೂರೈಕೆಗೆ ತಾತ್ಕಾಲಿಕ ವಿರಾಮ ದೊರೆತಿದೆ. ತಾಳಿಕಟ್ಟೆ ಗ್ರಾಮದಲ್ಲಿ 17 ಮಿಮೀ ಮಳೆ ಬಿದ್ದಿರುವುದು ಅಡಿಕೆ ಬೆಳೆಗಾರರ ಆತಂಕ ದೂರ ಮಾಡಿದೆ.
ಶುಕ್ರವಾರ ಬಿದ್ದ ಮಳೆ ಅನ್ವಯ ಚಳ್ಳಕೆರೆ ತಾಕಿನಲ್ಲಿ 28.4 ಮಿಮೀ, ಚಿತ್ರದುರ್ಗ 25.4,ಹಿರಿಯೂರು 13 ಮಿಮೀ, ಹೊಳಲ್ಕೆರೆ 18.6 , ಹೊಸದುರ್ಗ 3.1 ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 12.6 ಮಿ.ಮೀ ಮಳೆಯಾಗಿದೆ. ಚಳ್ಳಕೆರೆಯಲ್ಲಿ 20.1 ಮಿಮೀ, ನಾಯಕನಹಟ್ಟಿ 38.6 , ಪರಶುರಾಂಪುರ 29.9 ತಳಕು 31.6, ಚಿತ್ರದುರ್ಗದಲ್ಲಿ 21.1, ಭರಮಸಾಗರ 27, ಹಿರೇಗುಂಟನೂರು 21.5, ತುರುವನೂರು 35.8 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆಯಲ್ಲಿ 20.7, ಬಿ.ದುರ್ಗ 18 , ರಾಮಗಿರಿ 16.7, ತಾಳ್ಯ 16.8 ಮೊಳಕಾಲ್ಮೂರಿನಲ್ಲಿ 22.3 ಮಿಮೀ ಮಳೆಯಾಗಿದೆ.ಮಳೆಯಿಂದಾಗಿ ಜಿಲ್ಲಾದ್ಯಂತ 5 ಮನೆಗಳು ಭಾಗಶಃ ಹಾನಿಯಾಗಿವೆ. 8 ಹೆಕ್ಟೇರ್ ಕೃಷಿ ಬೆಳೆ ಹಾಗೂ 7 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.
ಕೆರೆಯಂತಾದ ನಾಯಕನಹಟ್ಟಿ ಪೋಲೀಸ್ ಠಾಣೆ ಮುಂಗಾರು ಪ್ರವೇಶಿಸುವ ಮುನ್ನವೇ ಬಯಲುಸೀಮೆ ಚಳ್ಳಕೆರೆ ತಾಲೂಕಿನಲ್ಲಿ ಶುಕ್ರವಾರ ಬೆಳಗಿನ ಜಾವ ಸುರಿದ ಮಳೆಗೆ ನಾಯಕನಹಟ್ಟಿ ಪೊಲೀಸ್ ಠಾಣೆ ಕೆರೆಯಂತಾಗಿದೆ. ಬೆಳಗಿನ ಜಾವ ಶುರುವಾದ ಮಳೆ ಸತತ ಮೂರು ಗಂಟೆಗಳ ಕಾಲ ಸುರಿದ ಪರಿಣಾಮ ಠಾಣೆಯ ಮುಂಭಾಗ ಸೇರಿದಂತೆ ಸುತ್ತಲೂ ಜಲಾವೃತವಾಗಿದೆ. ಮುಂಜಾನೆ ಕರ್ತವ್ಯಕ್ಕೆ ಬರುವ ಪೋಲೀಸರಿಗೂ ಜಲದಿಗ್ಭಂದನ ಹಾಕಿದಂತಹ ವಾತಾವರಣ ನಿರ್ಮಾಣವಾಗಿತ್ತು.
ಮಳೆ ಬಂದಾಗಲೆಲ್ಲಾ ಈ ಠಾಣೆಯ ಮುಂಭಾಗದಲ್ಲಿ ಹಾಗೂ ಸುತ್ತಲೂ ನೀರು ನಿಲ್ಲುವುದು ಸಾಮಾನ್ಯವಾಗಿದೆ. ಕಳೆದ ವರ್ಷವೂ ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತು ಕೆಲಕಾಲ ಕರ್ತವ್ಯಕ್ಕೂ ಅಡಚಣೆಯಾಗಿತ್ತು. ಈ ಬಾರಿಯ ಮುಂಗಾರಿಗೂ ಮುನ್ನ ಸುರಿದ ಮಳೆಗೆ ಪೋಲೀಸ್ ಠಾಣೆ ಜಲಾವೃತವಾಗಿರುವುದು ಆತಂಕ ಸೃಷ್ಟಿಸಿದೆ. ಮುಂಗಾರು ಮಳೆ ಜೋರಾದಾಗ ನೀರು ಠಾಣೆಗೆ ನುಗ್ಗಿದರೆ ಹೇಗೆ ಎಂಬ ಭೀತಿ ಇಲ್ಲಿನ ಸಿಬ್ಬಂದಿಗೆ ಎದುರಾಗಿದೆ.
ತಡರಾತ್ರಿ ಸುರಿದ ಮಳೆಗೆ ತಾಲೂಕಿನ ಓಬಣ್ಣನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಿಂತಿರುವ ನೀರು ಮಿನಿ ಕೆರೆಯಂತಾಗಿದೆ. ಸದ್ಯ ಬೇಸಿಗೆ ರಜೆ ಇರುವ ಕಾರಣ ಮಕ್ಕಳು ಶಾಲೆಗೆ ಬರುತ್ತಿಲ್ಲ. ಮುಂದಿನ ದಿನಗಳಲ್ಲಿ ಶಾಲೆ ಪ್ರಾರಂಭವಾದಾಗ ಇಂತಹ ಸಮಸ್ಯೆ ಬಾರದಂತೆ ಎಚ್ಚರವಹಿಸಿಬೇಕು ಎಂದು ಪೋಷಕರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಬೇಡರೆಡ್ಡಿಹಳ್ಳಿ ಹತ್ತಿರದ ಹಳ್ಳದ ನೀರು ರಸ್ತೆಗೆ ಬಂದಿದೆ. ಆದರೆ, ಯಾವುದೇ ಅವಘಡಗಳು ಸಂಭವಿಸಿಲ್ಲ.