ಪ್ರಾಮಾಣಿಕತೆಯಿಂದ ಉತ್ತಮ ಉದ್ಯಮಿಯಾಗಲು ಸಾಧ್ಯ

| Published : Sep 02 2024, 02:11 AM IST

ಸಾರಾಂಶ

ಗದಗ ಜಿಲ್ಲೆಯು ಕೃಷಿ ಆಧಾರಿತ ಜಿಲ್ಲೆಯಾಗಿದ್ದು, ಕೃಷಿ ಆಧಾರಿತ ಕೈಗಾರಿಕೆಗಳು ಆರಂಭವಾಗಬೇಕು ಎನ್ನುವುದು ಇಲ್ಲಿನ ಜನರ ಬೇಡಿಕೆ

ಗದಗ: ಜೀವನದಲ್ಲಿ ಶ್ರೇಷ್ಠ ಉದ್ಯಮಿಯಾಗಿ ಬೆಳೆಯಬೇಕು ಎನ್ನುವುದು ಎಲ್ಲ ಯುವ ಉದ್ಯಮಿಗಳ ಕನಸಾಗಿರುತ್ತದೆ. ಅದು ನನಸಾಗಬೇಕಾದಲ್ಲಿ ಕಠಿಣ ಪರಿಶ್ರಮ, ಪ್ರಾಮಾಣಿಕತೆ, ವಿನಯತೆ, ಮಾತಿನ ಕಲೆ, ಸಮಯಕ್ಕೆ ಬೆಲೆ ನೀಡುವುದರ ಜತೆಗೆ ಆತ್ಮವಿಶ್ವಾಸ ಹೊಂದಿದಾಗ ಮಾತ್ರ ಉತ್ತಮ ಉದ್ಯಮಿಯಾಗಿ ಬೆಳೆಯಲು ಸಾಧ್ಯ ಎಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ಅ‍ವರು ಭಾನುವಾರ ರಾತ್ರಿ ಗದಗ ನಗರದ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಜಿಲ್ಲಾ ವಾಣಿಜ್ಯೋಧ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ ಜಿಪಂ ಆಶ್ರಯದಲ್ಲಿ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟದ ಗದಗ ಉತ್ಸವ ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ಶ್ರೇಷ್ಠ ವರ್ತಕ, ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದರು.

ದೇಶದ ಆರ್ಥಿಕತೆ ಸುಧಾರಣೆಯಾಗಲು ಕೈಗಾರಿಕೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಗದಗ ಜಿಲ್ಲೆಯು ಕೃಷಿ ಆಧಾರಿತ ಜಿಲ್ಲೆಯಾಗಿದ್ದು, ಕೃಷಿ ಆಧಾರಿತ ಕೈಗಾರಿಕೆಗಳು ಆರಂಭವಾಗಬೇಕು ಎನ್ನುವುದು ಇಲ್ಲಿನ ಜನರ ಬೇಡಿಕೆಯಾಗಿದೆ. ಇದರಿಂದ ಯುವ ಜನರಿಗೂ ಉದ್ಯೋಗ ಸೃಷ್ಠಿಯಾಗುತ್ತದೆ. ರಾಜ್ಯದ ವಾಣಿಜ್ಯೋಧ್ಯಮ ಸಂಸ್ಥೆಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮನ್ನಣೆ ಪಡೆದಿದೆ. ಜಿಲ್ಲೆಯ ವಾಣಿಜ್ಯೋಧ್ಯಮ ಸಂಸ್ಥೆಯ ಪದಾಧಿಕಾರಿಗಳು ರಾಜ್ಯ ಹಾಗೂ ಕೇಂದ್ರ ಬಜೆಟ್ ನಲ್ಲಿ ಸಲಹೆ ಸೂಚನೆ ನೀಡುತ್ತ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಗದಗ ಜಿಲ್ಲೆ ವಾಣಿಜ್ಯೋಧ್ಯಮ ಸಂಸ್ಥೆವತಿಯಿಂದ ಜೀವಮಾನದ ಪ್ರಶಸ್ತಿ, ಶ್ರೇಷ್ಠ ವರ್ತಕ, ಉದ್ಯಮಿ ಪ್ರಶಸ್ತಿ ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ. ಪ್ರಶಸ್ತಿ ನೀಡುವ ಮೂಲಕ ಅವರನ್ನು ಇನ್ನೂ ಹೆಚ್ಚು ಉದ್ಯಮಗಳತ್ತ ಪ್ರಗತಿ ಸಾಧಿಸಲು ಪ್ರೇರಣೆಯಾಗಿದೆ ಎಂದರು.

ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋಧ್ಯಮ ಸಂಸ್ಥೆ ಅಧ್ಯಕ್ಷ ಎಸ್.ಪಿ.ಸಂಶಿಮಠ ಮಾತನಾಡಿ, ಗದಗ ಜಿಲ್ಲಾ ಕೇಂದ್ರದಿಂದ 60 ಕಿಮೀ ಸುತ್ತಳತೆ ದೂರದಲ್ಲಿ ಸೋಲಾರ ಎನರ್ಜಿ, ಪವನ ವಿದ್ಯುತ್ ಮೂಲಕ ವಾರ್ಷಿಕ ಅಂದಾಜು ₹1 ಲಕ್ಷ ಕೋಟಿ ವ್ಯವಹಾರ ನಡೆಯುತ್ತಿದೆ. ಆದರೆ, ಜಿಲ್ಲೆಯಲ್ಲಿ ವಿಶೇಷವಾಗಿ ಕೈಗಾರಿಕೆಗಳು ಬೆಳೆಯಲು ಸಾಧ್ಯವಾಗಿಲ್ಲ. ಆದ್ದರಿಂದ ಜಿಲ್ಲಾ ವಾಣಿಜ್ಯೋಧ್ಯಮ ಸಂಸ್ಥೆಯು ಜಿಲ್ಲೆಯಲ್ಲಿ ಕೃಷಿ ಆಧಾರಿತ ಕೈಗಾರಿಕೆ ಬೆಳೆಸಲು ನಿರಂತರವಾಗಿ ಪ್ರಯತ್ನಿಸಬೇಕು ಎಂದರು.

ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ವಾಣಿಜ್ಯೋಧ್ಯಮ ಸಂಸ್ಥೆಯ ಅಧ್ಯಕ್ಷ ಈಶ್ವರಪ್ಪ ಮುನವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿಯ ಅಶೋಕ ಐಯರ್ನ್ ಗ್ರುಪ್ಸ್ ಸಹ ವ್ಯವಸ್ಥಾಪಕ ನಿರ್ದೇಶಕ ಜಯಂತ ಹುಂಬರವಾಡಿ, ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಫಿಕ್ಕಿ) ಅಧ್ಯಕ್ಷ ರಮೇಶಚಂದ್ರ ಲಹೋಟಿ, ಮಾಜಿ ಅಧ್ಯಕ್ಷ ಶಂಕ್ರಣ್ಣ ಮುನವಳ್ಳಿ, ಧಾರವಾಡದ ಶೋಧಾ ಟೊಯೋಟಾದ ಸಿಇಒ ರಘು ನಾಯಕ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಾಣಿಜ್ಯೋಧ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸುರಕೋಡ, ಶರಣಪ್ಪ ಕುರಡಗಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರೊಟ್ಟಿಗೆ ಗದುಗಿನ ಬಲವಂತ ಪಾಟೀಲ, ಲಕ್ಷ್ಮೇಶ್ವರದ ಮಹಾದೇವಪ್ಪ ರಗಟಿ, ಮುಂಡರಗಿಯ ಅಮೀನಸಾಬ್ ಬಿಸನಹಳ್ಳಿ ಅವರಿಗೆ ಶ್ರೇಷ್ಠ ವರ್ತಕ ಪ್ರಶಸ್ತಿ ಹಾಗೂ ಗದುಗಿನ ಗೋವಿಂದರಾಜ ಗುಡಿಸಾಗರ, ರೋಣದ ಸಂಗನಗೌಡ ಪಾಟೀಲ ಹಾಗೂ ನರಗುಂದದ ಸಲೀಂಸಾಬ್ ಮೇಗಲಮನಿ ಅವರಿಗೆ ಶ್ರೇಷ್ಠ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗದಗ ಮೂಲದವರಾದ ಹೈದ್ರಾಬಾದ್‌ನ ಸ್ವಾತಿ ಏರ್‌ಪೋರ್ಟ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ನ ಎಂಡಿ ಮಹೇಶ್ವರ ಹಿರೇಮಠ ಹಾಗೂ ಬೆಂಗಳೂರಿನ ಎಸ್‌ಎಂ ಇಂಡಸ್ಟ್ರೀಯ ಪ್ರಕಾಶ ಚನ್ನಪ್ಪ (ಹಡಪದ) ಅವರಿಗೆ ವಿಶೇಷ ಸನ್ಮಾನ ಮಾಡಿ ಗೌರವಿಲಾಯಿತು. ಕಾರ್ಯಕ್ರಮಕ್ಕಿಂತಲೂ ಮೊದಲು ವಿವಿಧ ಮನರಂಜನಾ ಕಾರ್ಯಕ್ರಮಗಳು ಜರುಗಿದವು. ಜಿಲ್ಲೆಯ ಉದ್ಯಮಿಗಳು, ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.