ಸಾರಾಂಶ
ಶಾಲೆಯಲ್ಲಿ ಜನ್ಮಾಷ್ಟಾಮಿಯನ್ನು ಕೇವಲ ಒಂದು ಜಾತಿ ಮತ್ತು ಧರ್ಮಕ್ಕೆ ಸೀಮಿತ ಎಂದು ಬಯಸದೆ ಎಲ್ಲಾ ಧರ್ಮದ ಮಕ್ಕಳು ಪಾಲ್ಗೊಂಡಿದ್ದಾರೆ. ನಾವೆಲ್ಲಾ ಒಂದೇ ಎನ್ನುವ ಭಾವನೆ ಸಾರುವುದಕ್ಕೆ ಕಾರ್ಯಕ್ರಮ ಸಾಕ್ಷಿಯಾಗಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ದೇಶದ ಭವಿಷ್ಯ ರೂಪಿಸುವ ಇಂದಿನ ಮಕ್ಕಳಲ್ಲಿ ಶ್ರೀಕೃಷ್ಣನ ಆದರ್ಶಗಳನ್ನು ತಿಳಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಮಗಿರಿ ಬಿಜಿಎಸ್ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ತಿಳಿಸಿದರು.ಪಟ್ಟಣದ ಬಿಜಿಎಸ್ ಎಜುಕೇಷನ್ ಸೆಂಟರ್ ಶಾಲಾ ಆವರಣ ನಡೆದ ಮಕ್ಕಳಿಗೆ ಶ್ರೀಕೃಷ್ಣ, ರಾಧೆ ವೇಷ-ಭೂಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಮುದ್ದು ಮಕ್ಕಳ ನೋಟವೇ ನಮಗೆ ಖುಷಿ ಕೊಡುತ್ತದೆ. ಅದರಲ್ಲೂ ರಾಧೆ ಹಾಗೂ ಕೃಷ್ಣನ ವೇಷಧಾರಿಗಳಾಗಿ ಬಂದಾಗ ನೋಡಲು ಮತ್ತಷ್ಟು ಚಂದವಾಗಿರುತ್ತದೆ ಎಂದರು.
ಇಂದು ಶಾಲೆಯಲ್ಲಿ ಜನ್ಮಾಷ್ಟಾಮಿಯನ್ನು ಕೇವಲ ಒಂದು ಜಾತಿ ಮತ್ತು ಧರ್ಮಕ್ಕೆ ಸೀಮಿತ ಎಂದು ಬಯಸದೆ ಎಲ್ಲಾ ಧರ್ಮದ ಮಕ್ಕಳು ಪಾಲ್ಗೊಂಡಿದ್ದಾರೆ. ನಾವೆಲ್ಲಾ ಒಂದೇ ಎನ್ನುವ ಭಾವನೆ ಸಾರುವುದಕ್ಕೆ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು.ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣ ತಿಲಕ್ ಮಾತನಾಡಿ, ಭಗವಾನ್ ಶ್ರೀಕೃಷ್ಣ ಸತ್ಯ ಮತ್ತು ಧರ್ಮದ ಪ್ರತೀಕ. ಪ್ರೇಮಮಯಿ ಹಾಗೂ ಚತುರ ರಾಜನೀತಿ ನಿಪುಣ. ಹರ ಮತ್ತು ಹರಿಯನ್ನು ಅಷ್ಟ ಭಕ್ತಿ, ಶೃದ್ಧೆಯಿಂದ ಪೂಜಿಸುವ ನಾಡು ನಮ್ಮದು ಎಂದರು.
ಬಿಜಿಎಸ್ ಶಾಲೆಯಲ್ಲಿ ಪ್ರತಿಯೊಂದು ಕಾರ್ಯಕ್ರಮವು ಇತಿಹಾಸ ಪುಟ ಮೆಲುಕು ಹಾಕುವ ನಿಟ್ಟಿನಲ್ಲಿ ಅರ್ಥಪೂರ್ಣವಾಗಿ ಮೂಡಿ ಬರುತ್ತವೆ. ರಾಧೆ, ಶ್ರೀಕೃಷ್ಣ ವೇಷ-ಭೂಷಣದಲ್ಲಿ ಮಕ್ಕಳು ಕಣ್ಮನ ಸೆಳೆಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ವೇಳೆ 100ಕ್ಕೂ ಹೆಚ್ಚು ಶಾಲಾ ಮಕ್ಕಳು ರಾಧೆ ಮತ್ತು ಕೃಷ್ಣ ಹಾಗೂ ಪಾಂಡವರು ಕೌರವರ ವಿಶೇಷ ವೇಷ ಧರಿಸಿದ ಪುಟಾಣಿ ಮಕ್ಕಳಿಗೆ ಪ್ರಶಸ್ತಿ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಮಕ್ಕಳು ವಿವಿಧ ಹಾಡುಗಳ ತಾಳಕ್ಕೆ ತಕ್ಕಂತೆ ಕುಣಿದು ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಪಾಪೇಗೌಡ , ಹಿರಿಯ ಪತ್ರಕರ್ತ ಕೆ.ಆರ್. ನೀಲಕಂಠ, ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಅಧ್ಯಕ್ಷ ಗಂಜಿಗೆರೆ ಮಹೇಶ್, ಜಿ.ಪಿ.ರಾಜು, ಬಿಜಿಎಸ್ ಶಾಲಾ ಮತ್ತು ಕಾಲೇಜು ಪ್ರಾಂಶುಪಾಲರು, ಶಿಕ್ಷಕರು, ಪೋಷಕರು ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು.