ಸಭೆಯುದ್ದಕ್ಕೂ ಈ ಇಬ್ಬರು ಅಧಿಕಾರಿಗಳ ಕಾರ್ಯ ವೈಖರಿಯನ್ನು ಸಚಿವರು, ಸಂಸದ, ಶಾಸಕರು ತೀವ್ರವಾಗಿ ಟೀಕಿಸಿದರು.

ಬಳ್ಳಾರಿ: ನಗರ ನಿವಾಸಿಗಳಿಗೆ ಮೂಲಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ಕರ್ತವ್ಯ ನಿರ್ವಹಿಸದ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್‌. ಮಂಜುನಾಥ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಖಲೀಲ್ ಅವರನ್ನು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪ್ರಸಂಗ ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜರುಗಿತು.

ಇಡೀ ಸಭೆಯುದ್ದಕ್ಕೂ ಈ ಇಬ್ಬರು ಅಧಿಕಾರಿಗಳ ಕಾರ್ಯ ವೈಖರಿಯನ್ನು ಸಚಿವರು, ಸಂಸದ, ಶಾಸಕರು ತೀವ್ರವಾಗಿ ಟೀಕಿಸಿದರು. ಕೂಡಲೇ ಕಾರ್ಯವೈಖರಿಯನ್ನು ಸರಿಪಡಿಸಿಕೊಳ್ಳದೇ ಹೋದರೆ ಮುಂದಿನ ಹಂತದ ಕ್ರಮಕ್ಕೆ ನೀವೇ ಹಾದಿ ಮಾಡಿಕೊಳ್ಳುತ್ತೀರಿ ಎಂದು ಇಬ್ಬರು ಆಯುಕ್ತರಿಗೆ ಎಚ್ಚರಿಕೆ ನೀಡಿದರು.

ಪ್ರಗತಿ ಪರಿಶೀಲನೆ ಸಭೆ ನಡಾವಳಿಯ ಪುಸ್ತಕ ಇಂಗ್ಲೀಷ್‌ನಲ್ಲಿ ಮುದ್ರಿಸಿರುವುದನ್ನು ಆಕ್ಷೇಪಿಸುವ ಮೂಲಕ ಸಭೆ ಶುರುಗೊಳಿಸಿದ ಸಚಿವ ಭೈರತಿ ಸುರೇಶ್, ಯಾಕ್ರೀ ಕನ್ನಡದಲ್ಲಿ ಪುಸ್ತಕ ಮುದ್ರಿಸಿಲ್ಲ. ಇಂಗ್ಲೀಷ್‌ನಲ್ಲಿಯೇ ಓದಿಕೊಳ್ಳಬೇಕಾ? ಎಂದು ಪ್ರಶ್ನಿಸುವ ಮೂಲಕ ಆಯುಕ್ತ ಮಂಜುನಾಥ ಅವರ ಕಾರ್ಯವೈಖರಿ ಸುತ್ತ ಸಚಿವರು ಹತ್ತಾರು ಪ್ರಶ್ನೆಗಳ ಸುರಿಮಳೆಗೈದರು.

ಪಾಲಿಕೆಯಲ್ಲಿ ಉಳಿತಾಯದ ಹಣವನ್ನು ಬಳಕೆ ಮಾಡದೇ ಹಾಗೆಯೇ ಇಟ್ಟುಕೊಂಡಿದ್ದೀರಿ. ಐದಾರು ತಿಂಗಳಾದರೂ ಕೆಲಸಗಳಿಗೆ ಟೆಂಡರ್‌ ಕರೆದಿಲ್ಲ. ನಗರದ ಫಲಾನುಭವಿಗಳಿಗೆ ಖರ್ಚು ಮಾಡಬೇಕಾದ ಹಣವನ್ನು ನಿಮ್ಮತ್ರ ಯಾಕ್ರಿ ಇಟ್ಟುಕೊಂಡ್ರಿ? ಪಾಲಿಕೆ ಸದಸ್ಯರ ಕರೆದು ಆಯಾ ವಾರ್ಡ್‌ಗೆ ಬೇಕಾದ ಸೌಲಭ್ಯಗಳಿಗೆ ಹಣ ಖರ್ಚು ಮಾಡುವುದು ಬಿಟ್ಟು ನಿಮ್ಮತ್ರ ಹಣ ಇಟ್ಕೊಂಡು ಏನ್ ಮಾಡ್ತಾ ಇದ್ದೀರಿ? ಎಂದು ಸಚಿವರು ಪ್ರಶ್ನಿಸಿದರು.

ಇದೇ ವೇಳೆ ಸಭೆಯಲ್ಲಿದ್ದ ಕೆಲ ಪಾಲಿಕೆ ಸದಸ್ಯರು ಪಾಲಿಕೆ ಆಡಳಿತ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ವಾರ್ಡ್‌ನಲ್ಲಿರುವ ಸಮಸ್ಯೆಗಳ ಕುರಿತು ಹತ್ತಾರು ಬಾರಿ ಮನವಿ ಮಾಡಿದರೂ ಯಾವ ಪ್ರಯೋಜನವಾಗಿಲ್ಲ. ಬೋರ್‌ವೆಲ್‌ ಕೊರೆಸಿ ನೀರು ಸಮಸ್ಯೆ ನೀಗಿಸುವಂತೆ ಕೋರಿದರೂ ಸ್ಪಂದಿಸಿಲ್ಲ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೂಡಲೇ ಆಯಾ ವಾರ್ಡ್‌ಗಳ ಬೋರ್‌ವೆಲ್‌ ಅಳವಡಿಕೆಗೆ ಕ್ರಮ ವಹಿಸಿ. ಪಾಲಿಕೆಯಲ್ಲಿ ಹಣ ಇಟ್ಟುಕೊಳ್ಳದೇ ಜನೋಪಯೋಗಕ್ಕೆ ಬಳಸಿ. ಅಭಿವೃದ್ಧಿಯ ತುರ್ತು ಅಗತ್ಯವಿದ್ದರೆ ಪ್ರತಿ ವಾರ್ಡ್‌ಗೆ ₹2 ಲಕ್ಷ ನೀಡಿ ಎಂದು ಆಯುಕ್ತರಿಗೆ ಸೂಚನೆ ನೀಡಿದರು.

ತಿಂಗಳೊಳಗೆ ಒತ್ತುವರಿ ತೆರವುಗೊಳಿಸಿ: ರಸ್ತೆ, ಉದ್ಯಾನ ಮತ್ತಿತರ ಸರ್ಕಾರದ ಜಾಗಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ದೂರುಗಳಿವೆ. ತಿಂಗಳೊಳಗಾಗಿ ತೆರವುಗೊಳಿಸಬೇಕು. ರಾಜಕೀಯ ನಾಯಕರು ಸೇರಿದಂತೆ ಯಾರೇ ಪ್ರಭಾವಿಗಳಿದ್ದರೂ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಿ. ಬೇಕಾದರೆ ಪೊಲೀಸ್ ಭದ್ರತೆ ಬಳಸಿಕೊಳ್ಳಿ. ತೆರವು ಪ್ರಕರಣದಲ್ಲಿ ಅನೇಕರು ಕೋರ್ಟ್‌ ಮೊರೆ ಹೋಗಿರುವ ಮಾಹಿತಿ ಇದೆ. ಪಾಲಿಕೆಯ ಲೀಗಲ್ ಸೆಲ್ ಬಲಪಡಿಸಿಕೊಳ್ಳಿ ಎಂದರು.

ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಗಮನಹರಿಸಬೇಕು. ಕಟ್ಟುನಿಟ್ಟಾಗಿ ವಾಣಿಜ್ಯ ಕಟ್ಟಡಗಳಿಂದ ತೆರಿಗೆ ವಸೂಲು ಮಾಡಬೇಕು. ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ಕಟ್ಟಡ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದರು.

ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು ಸಂಬಳ ನೀಡುತ್ತಿಲ್ಲ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಆಯುಕ್ತರ ವಿರುದ್ಧ ಆಕ್ರೋಶಗೊಂಡ ಸಚಿವ ಭೈರತಿ ಸುರೇಶ್, ಏನ್ರೀ ನೀವು... ದುಡಿವ ಜನರಿಗೆ ಸರಿಯಾದ ಸಮಯಕ್ಕೆ ಸಂಬಳ ಕೊಡದಿದ್ದರೆ ಹೇಗೆ? ಬೆಳಿಗ್ಗೆ 4 ಗಂಟೆಗೆ ಎದ್ದು ಇಡೀ ನಗರ ಶುಚಿಗೊಳಿಸುವವರಿಗೆ ಸಂಬಳ ವಿಳಂಬ ಮಾಡಲು ನಿಮಗೆ ಮನಸ್ಸಾದ್ರೂ ಹೇಗೆ ಬರುತ್ತೆ? ಎಂದು ಪ್ರಶ್ನಿಸಿದರು.

ಪೌರ ಕಾರ್ಮಿಕರಿಗೆ ಒಂದೇ ಒಂದು ದಿನವೂ ಸಂಬಳ ವಿಳಂಬವಾಗಬಾರದು. ನಿರ್ದಿಷ್ಟ ದಿನಕ್ಕೆ ಸಂಬಳ ಕೊಡಿ ಎಂದು ಸೂಚಿಸಿದರು.

ಸಭೆಯಲ್ಲಿ ಸಂಸದ ಈ.ತುಕಾರಾಮ್, ಶಾಸಕರಾದ ಬಿ.ನಾಗೇಂದ್ರ, ನಾರಾ ಭರತ್ ರೆಡ್ಡಿ, ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಪಿ.ಗಾದೆಪ್ಪ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್. ಆಂಜನೇಯುಲು, ಉಪಮೇಯರ್ ಮೊಬಿನಾ, ಜಿಲ್ಲಾಧಿಕಾರಿ ನಾಗೇಂದ್ರಪ್ರಸಾದ್ ಇದ್ದರು.

ಸಭೆಯಿಂದ ಹೊರ ಹೋಗಿ ಎಂದ ಡಿಸಿ; ಹೋಗಲ್ಲ ಎಂದ ಪತ್ರಕರ್ತರು: ನಗರಾಭಿವೃದ್ಧಿ ಸಚಿವರು ಪ್ರಗತಿ ಪರಿಶೀಲನೆ ಸಭೆ ನಡೆಸುತ್ತಿದ್ದು, ಮಾಧ್ಯಮದವರು ಹೊರಗಡೆ ಹೋಗಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಸೂಚಿಸಿದರು. ನಾವು ಹೋಗೋದಿಲ್ಲ. ಬಳ್ಳಾರಿಯಲ್ಲಿ ಹೊಸ ಪದ್ಧತಿಯನ್ನು ಶುರು ಮಾಡಬೇಡಿ. ಜನಪ್ರತಿನಿಧಿಗಳು ಇದ್ದಲ್ಲಿ ಪತ್ರಕರ್ತರು ಇರ್ತಾರೆ. ಅಷ್ಟಕ್ಕೂ ಪತ್ರಕರ್ತರನ್ನು ಮರೆಮಾಚಿ ಮಾಡುವ ಸಭೆಯ ಉದ್ದೇಶವಾದರೂ ಏನು? ಎಂದು ಪ್ರಶ್ನಿಸಿದರು. ಮಧ್ಯಪ್ರವೇಶಿಸಿದ ಶಾಸಕ ನಾಗೇಂದ್ರ, ಪತ್ರಕರ್ತರು ಸಭೆಯಲ್ಲಿ ಇದ್ದರೆ ತಪ್ಪೇನಿಲ್ಲ. ಸಭೆಯ ಮಾಹಿತಿಯನ್ನು ಜನರಿಗೆ ತಿಳಿಸುವವರು ಅವರೇ ಅಲ್ಲವೇ? ಎಂದರು. ವಿಪರ್ಯಾಸ ಸಂಗತಿ ಎಂದರೆ ಪತ್ರಕರ್ತರು ಹೊರಗಡೆ ಹೋಗಿ ಎಂದು ಸೂಚಿಸಿದ ಜಿಲ್ಲಾಧಿಕಾರಿ, ಕಾಂಗ್ರೆಸ್ ಕಾರ್ಯಕರ್ತರು ಸಭೆಯಲ್ಲಿದ್ದರೂ ಹೊರ ಕಳಿಸುವ ಕಾಳಜಿ ತೆಗೆದುಕೊಳ್ಳಲಿಲ್ಲ. ಮಹಿಳಾ ಪಾಲಿಕೆ ಸದಸ್ಯರ ಜತೆ ಪತಿಯರು ಸಹ ಸಭೆಯಲ್ಲಿದ್ದರು. ಜಿಲ್ಲಾಧಿಕಾರಿ ಈ ಬಗ್ಗೆ ಗಮನ ಹರಿಸಲಿಲ್ಲ.