2 ವಾರದಲ್ಲೇ 172+ ಡೆಂಘೀ ಕೇಸ್‌: ಪಾಲಿಕೆಯಿಂದ ಜಾಗೃತಿ ಅಭಿಯಾನ

| Published : May 17 2024, 08:04 AM IST

World Mosquito Day 2023
2 ವಾರದಲ್ಲೇ 172+ ಡೆಂಘೀ ಕೇಸ್‌: ಪಾಲಿಕೆಯಿಂದ ಜಾಗೃತಿ ಅಭಿಯಾನ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಕೇವಲ ಎರಡು ವಾರದಲ್ಲಿ ಬರೋಬ್ಬರಿ 172ಕ್ಕೂ ಅಧಿಕ ಡೆಂಘೀ ಪ್ರಕರಣ ಪತ್ತೆ ಆಗಿರುವ ಹಿನ್ನೆಲೆಯಲ್ಲಿ ಹಾಗೂ ರಾಷ್ಟ್ರೀಯ ಡೆಂಘೀ ದಿನಾಚರಣೆಯ ಅಂಗವಾಗಿ ಬಿಬಿಎಂಪಿ ಆರೋಗ್ಯ ವಿಭಾಗದಿಂದ ನಗರದಲ್ಲಿ ಜಾಗೃತಿ ಅಭಿಯಾನ ಆರಂಭಿಸಲಾಗಿದೆ.

ಬೆಂಗಳೂರು :  ರಾಜಧಾನಿ ಬೆಂಗಳೂರಿನಲ್ಲಿ ಕೇವಲ ಎರಡು ವಾರದಲ್ಲಿ ಬರೋಬ್ಬರಿ 172ಕ್ಕೂ ಅಧಿಕ ಡೆಂಘೀ ಪ್ರಕರಣ ಪತ್ತೆ ಆಗಿರುವ ಹಿನ್ನೆಲೆಯಲ್ಲಿ ಹಾಗೂ ರಾಷ್ಟ್ರೀಯ ಡೆಂಘೀ ದಿನಾಚರಣೆಯ ಅಂಗವಾಗಿ ಬಿಬಿಎಂಪಿ ಆರೋಗ್ಯ ವಿಭಾಗದಿಂದ ನಗರದಲ್ಲಿ ಜಾಗೃತಿ ಅಭಿಯಾನ ಆರಂಭಿಸಲಾಗಿದೆ.

ಪೂರ್ವ ವಲಯದ ರಾಮಸ್ವಾಮಿಪಾಳ್ಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್, ನಗರದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಡೆಂಘೀ ಪ್ರಕರಣ ಹೆಚ್ಚಾಗುತ್ತಿದೆ. ನಿಯಂತ್ರಣಕ್ಕೆ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಪಾಲಿಕೆಯ ಎಲ್ಲಾ ವಾರ್ಡ್‌ಗಳಲ್ಲಿ ಸೊಳ್ಳೆ ನಿಯಂತ್ರಣ ಕುರಿತು ಅರಿವು ಮೂಡಿಸುವ ಹಾಗೂ ಔಷಧಿ ಸಿಂಪಡಣೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಮನೆಯ ಸುತ್ತಮುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಒಂದು ವಾರ್ಡ್‌ಗೆ 4 ಔಷಧಿ ಸಿಂಪಡೆಣೆ ಮಾಡುವ ತಂಡಗಳನ್ನು ನಿಯೋಜನೆ ಮಾಡಿದ್ದೇವೆ. ತಾತ್ಕಾಲಿಕವಾಗಿ ನೀರು ನಿಲ್ಲುವ ಸ್ಥಳ ಹಾಗೂ ಶಾಶ್ವತವಾಗಿ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಫಾಗಿಂಗ್ ಮತ್ತು ಔಷಧಿ ಸಿಂಪಡಣೆ ಮಾಡಲಾಗುತ್ತದೆ ಎಂದು ಹೇಳಿದರು.

ಲಾರ್ವಾ ಸಮೀಕ್ಷೆ

ಕೊಳಚೆ ಹಾಗೂ ಇನ್ನಿತರೆ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ನಮ್ಮ ಕ್ಲಿನಿಕ್ ವೈದ್ಯರ ತಂಡ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ತಂಡಗಳನ್ನು ರಚಿಸಲಾಗಿದೆ. ಮನೆ-ಮನೆ ಭೇಟಿ ನೀಡಿ ಡೆಂಘೀ ಪ್ರಕರಣಗಳ ಪತ್ತೆ ಹಚ್ಚುವ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಡೆಂಘೀ ನಿಯಂತ್ರಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ, ಆಯಾ ವಲಯಗಳ ವಾರ್ಡ್ ಮಟ್ಟದಲ್ಲಿ ಜಾಗೃತಿ ಜಾಥಾ ಹಾಗೂ ಪಾಲಿಕೆಯ ಕಸದ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ಡೆಂಘೀ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿಸಲಾಗುತ್ತಿದೆ ಎಂದರು.

ಈ ವೇಳೆ ಮುಖ್ಯ ಆರೋಗ್ಯಾಧಿಕಾರಿ ಡಾ। ಮದನಿ, ಪೂರ್ವ ವಲಯ ಆರೊಗ್ಯಾಧಿಕಾರಿ ಡಾ। ಭಾಗ್ಯಲಕ್ಷ್ಮಿ, ಡೆಂಘೀ ನೋಡಲ್ ಅಧಿಕಾರಿ ಸುಜಾತಾ, ಆರೋಗ್ಯ ವೈದ್ಯಾಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.