ಹೊಸಕೋಟೆ: ಛತ್ರಪತಿ ಶಿವಾಜಿ ನಾಡು, ದೇಶ ಕಂಡ ಅಪ್ರತಿಮ ಹಿಂದೂ ನಾಯಕನಾಗಿ ಗುರುತಿಸಿಕೊಂಡಿದ್ದು ಸರ್ಕಾರಿ ಕಾರ್ಯಕ್ರಮವಾಗಿ ಛತ್ರಪತಿ ಶಿವಾಜಿ ಜಯಂತಿ ಆಚರಿಸಲು ಸರ್ಕಾರ ಆದೇಶಿಸಿದ್ದರೂ ಜಯಂತಿ ಆಚರಣೆಯಲ್ಲಿ ಅಧಿಕಾರಿಗಳ ಉದಾಸೀನತೆ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಎಂದು ಮರಾಠ ಸಂಘದ ಗೌರವಾಧ್ಯಕ್ಷ ಎಚ್‌.ಸಿ.ವೆಂಕೋಭರಾವ್ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಾಜಿ ದೇಶ ದ್ರೋಹಿಗಳಿಗೆ ಸಿಂಹ ಸ್ವಪ್ನವಾಗಿ, ಹಿಂದೂ ಸಿಂಹಾಸನಾಧೀಶನಾಗಿ ದೇಶಕ್ಕೆ ತಮ್ಮದೇ ಕೊಡುಗೆ ನೀಡಿ ದೇಶಭಕ್ತಿ ಮೆರೆದಿದ್ದಾರೆ. ಕರ್ನಾಟಕ ರಾಜ್ಯಕ್ಕೂ ಅವರ ಕೊಡುಗೆ ಅಪಾರವಾಗಿದೆ. ಅಂತಹ ಮಹಾನ್ ನಾಯಕರ ಜಯಂತಿ ಆಚರಣೆಗೆ ಸರ್ಕಾರಿ ಅಧಿಕಾರಿಗಳು ಗೈರಾಗಿರುವುದು ಇದು ಮೊದಲಲ್ಲ, ತಹಸೀಲ್ದಾರ್, ಉಪ ತಹಸಿಲ್ದಾರ್ ಸೇರಿ ಯಾವ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಕಳೆದ ಮೂರು ವರ್ಷಗಳಿಂದ ಸರ್ಕಾರಿ ಅಧಿಕಾರಿಗಳು ಇದೇ ಧೋರಣೆ ಅನುಸರಿಸುತ್ತಿರುವುದು ಖಂಡನೀಯ. ಮುಂದಾದರೂ ದೇಶಕ್ಕೆ ಸೇವೆ ಸಲ್ಲಿಸಿದ ಶಿವಾಜಿ ಮಹಾರಾರ ಜಯಂತಿ ಸಂಬಂಧ ಸಮುದಾಯದ ಮುಖಂಡರು ಸಾರ್ವಜನಿಕರನ್ನು ಆಹ್ವಾನಿಸಿ ಪೂರ್ವಭಾವಿ ಸಭೆ ಕರೆದು, ಕಾರ್ಯಕ್ರಮಕ್ಕೆ ಎಲ್ಲಾ ಸರ್ಕಾರಿ ಅಧಿಕಾರಿಗಳು ಭಾಗವಹಿಸಿ ಗೌರವಯುವತಾಗಿ ಕಾರ್ಯಕ್ರಮ ಆಯೋಜಿಸಲಿ ಎಂದರು.

ಕಾರ್ಯಕ್ರಮದಲ್ಲಿ ಮರಾಠ ಸಂಘದ ಖಜಾಂಚಿ ಭದ್ರಿನಾಥ್, ಕಾರ್ಯದರ್ಶಿ ಚಿನ್ನೂರಾವ್, ಮುಖಂಡರಾದ ಶಿವಾಜಿರಾವ್, ಭುಜಂಗರಾವ್, ರಮೇಶ್ ಪುಟ್ಟಪ್ಪ ಇತರರು ಹಾಜರಿದ್ದರು.

ಫೋಟೋ: 20 ಹೆಚ್‌ಎಸ್‌ಕೆ 3

ಹೊಸಕೋಟೆ ತಾಲೂಕು ಕಚೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಕಾರ್ಯಕ್ರಮದಲ್ಲಿ ಶಿವಾಜಿ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿದರು.