ಸಾರಾಂಶ
ಸ್ವಂತ ಶ್ರಮದ ಹಣ ಮತ್ತು ಸರ್ಕಾರದ ಪಂಚ ಗ್ಯಾರಂಟಿ ಮತ್ತು ಇತರ ಯೋಜನೆಗಳ ಮೂಲಕ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಬೆಂಗಳೂರು : ಸ್ವಂತ ಶ್ರಮದ ಹಣ ಮತ್ತು ಸರ್ಕಾರದ ಪಂಚ ಗ್ಯಾರಂಟಿ ಮತ್ತು ಇತರ ಯೋಜನೆಗಳ ಮೂಲಕ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಶಾಸಕರಾದ 22 ತಿಂಗಳ ಅವಧಿಯಲ್ಲಿ ಮಾಡಿರುವ ಕೆಲಸಗಳ ಕುರಿತು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಅಮ್ಮ ಆಂಬ್ಯುಲೆನ್ಸ್, ಡಿಜಿಟಲ್ ಚಿಕ್ಕಬಳ್ಳಾಪುರ, ನಮ್ಮೂರಿಗೆ ನಮ್ಮ ಶಾಸಕ, ನಮಸ್ತೆ ಚಿಕ್ಕಬಳ್ಳಾಪುರ, ಎಸ್‌ಎಸ್‌ಎಲ್‌ಸಿ ಟೆಸ್ಟ್ ಸಿರೀಸ್, ಉಚಿತ ನೀಟ್, ಸಿಇಟಿ ಕೋಚಿಂಗ್ ಮೂಲಕ ಬದಲಾವಣೆ ಮತ್ತು ಅಭಿವೃದ್ಧಿಗೆ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ನಮ್ಮ ಕ್ಷೇತ್ರದ ಜನರಿಗಾಗಿ ಉಚಿತವಾಗಿ 10 ಆ್ಯಂಬುಲೆನ್ಸ್ ಸೇವೆ ಆರಂಭಿಸಿದ್ದು, 12 ನಿಮಿಷದಲ್ಲಿ ಮನೆ ಬಾಗಿಲ ಬಳಿ ನಿಲ್ಲುತ್ತದೆ. ಅದಕ್ಕಾಗಿ ಶಾಸಕರ ವೇತನ, ಪರಿಶ್ರಮ ಅಕಾಡೆಮಿಯ ಹಣ ಸೇರಿ ಪ್ರತಿ ತಿಂಗಳು 12 ರಿಂದ 14 ಲಕ್ಷ ರು. ಖರ್ಚು ಮಾಡುತ್ತಿದ್ದೇನೆ. 1 ಸಾವಿರ ಮಕ್ಕಳಿಗೆ ಉಚಿತ ನೀಟ್, ಸಿಇಟಿ ಕೋಚಿಂಗ್ ನೀಡಲಾಗಿದೆ. ಪ್ರತಿ ವಾರ ಆರೋಗ್ಯ ಕ್ಯಾಂಪ್ ಆಯೋಜನೆ, 10ನೇ ತರಗತಿಯ 7 ಸಾವಿರ ಸರ್ಕಾರಿ ಶಾಲಾ ಮಕ್ಕಳಿಗೆ ₹1,000 ಸ್ಕಾಲರ್‌ಶಿಪ್ ವಿತರಣೆ, ಕ್ಷೇತ್ರವನ್ನು ನೋಡಿಕೊಳ್ಳಲು 40 ಜನರ ತಂಡ ರಚಿಸಲಾಗಿದೆ ಎಂದು ಪ್ರದೀಪ್ ತಿಳಿಸಿದರು.
ಡಿಜಿಟಲ್ ಚಿಕ್ಕಬಳ್ಳಾಪುರ:
ನನ್ನ ಕ್ಷೇತ್ರ ವ್ಯಾಪ್ತಿಗೆ ಬರುವ 366 ಹಳ್ಳಿಗಳ ಪೈಕಿ ಈವರೆಗೆ 130 ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ನನ್ನ ಕ್ಷೇತ್ರದಲ್ಲಿ 60,180 ಮನೆಗಳಿದ್ದೂ ಎಲ್ಲಾ ಮನೆಗಳಿಗೆ ಕ್ಯೂಆರ್ ಕೋಡ್ ನೀಡಿದ್ದೇನೆ. ಅದಕ್ಕೆ ಡಿಜಿಟಲ್ ಚಿಕ್ಕಬಳ್ಳಾಪುರ ಎಂದು ನಾಮಕರಣ ಮಾಡಿದ್ದೇನೆ. ಕ್ಷೇತ್ರದ ಜನರಿಗೆ ವಿದ್ಯುತ್ ದೀಪ, ರಸ್ತೆ ಸೇರಿದಂತೆ ಯಾವುದೇ ಸಮಸ್ಯೆ ಇದ್ದರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ದೂರು ಸಲ್ಲಿಸಬಹುದು. ದೂರು ಡೌನ್‌ಲೋಡ್ ಮಾಡಿಕೊಳ್ಳುವ ತಂಡ, ಸಂಬಂಧಿಸಿದ ಇಲಾಖೆಗೆ ರವಾನಿಸಿ 48 ತಾಸುಗಳಲ್ಲಿ ಬಗೆಹರಿಸುತ್ತಾರೆ. ಕಳೆದ 22 ತಿಂಗಳಲ್ಲಿ 5 ಸಾವಿರಕ್ಕೂ ಹೆಚ್ಚು ಸಮಸ್ಯೆಗಳನ್ನು ಪರಿಹರಿಸಿದ್ದೇನೆ ಎಂದರು. ಇಂತಹ ಕಾರ್ಯಕ್ರಮ ಯಾರೂ ಮಾಡಿರಲಿಲ್ಲ ಎಂದು ಮುಖ್ಯಮಂತ್ರಿಯವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಶಾಸಕ ಪ್ರದೀಪ್ ತಿಳಿಸಿದರು.
ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮ ಆರಂಭಿಸಿ ಬೆಳಗ್ಗೆಯೇ ಹಳ್ಳಿ ಹಳ್ಳಿಗೆ 30ಕ್ಕೂ ಹೆಚ್ಚು ಇಲಾಖೆಯ ಕೆಎಎಸ್ ಅಧಿಕಾರಿಗಳನ್ನು ಕರೆದೊಯ್ಯುತ್ತೇನೆ. ಜನರ ಸಮಸ್ಯೆಗಳನ್ನು ನೆಲದ ಮೇಲೆಯೇ ಕುಳಿತುಕೊಂಡು ಕೇಳಿ ಪರಿಹರಿಸುತ್ತೇನೆ. ಸ್ವಾತಂತ್ರ್ಯ ಬಂದಾಗಿನಿಂದ ರಸ್ತೆಯನ್ನೇ ಕಾಣದ ಊರಿಗೆ ಎರಡುವರೆ ಕೋಟಿ ರು. ಅನುದಾನದಲ್ಲಿ ರಸ್ತೆಯನ್ನು ಮಾಡಿಸಿದ್ದೇನೆ. ಹಳ್ಳಿಗಳ ಅಭಿವೃದ್ಧಿಗೆ ₹37 ಕೋಟಿ ಅನುದಾನ ಖರ್ಚು ಮಾಡಲಾಗಿದೆ. ಉಳಿದ ಹಳ್ಳಿಗಳನ್ನು ಮುಂದಿನ ಒಂದು ವರ್ಷದಲ್ಲಿ ತಲುಪುತ್ತೇನೆ ಎಂದು ಪ್ರದೀಪ್ ಈಶ್ವರ್ ಹೇಳಿದರು.
ನಮಸ್ತೆ ಚಿಕ್ಕಬಳ್ಳಾಪುರ
ನಮಸ್ತೆ ಚಿಕ್ಕಬಳ್ಳಾಪುರ ಎಂಬ ಯೋಜನೆ ರೂಪಿಸಿ ಪಟ್ಟಣದ ಜನರನ್ನು ತಲುಪುತ್ತಿದ್ದೇನೆ. ಈವರೆಗೆ 12 ವಾರ್ಡ್‌ಗಳನ್ನು ತಲುಪಿ ಸಮಸ್ಯೆ ಪರಿಹರಿಸಿದ್ದೇನೆ ಎಂದರು.
ಒಬ್ಬ ಅನಾಥ ಹುಡುಗ, ಬಡತನದ ಹಿನ್ನೆಲೆಯ ಸಾಮಾನ್ಯ ಹುಡುಗ ರಾಜಕಾರಣದಲ್ಲಿ ಅವಕಾಶ ಸಿಕ್ಕರೆ ಏನಾಗುತ್ತದೆ ಎಂದರೆ, ಒಬ್ಬ ಪ್ರದೀಪ್ ಈಶ್ವರ್ ಆಗುತ್ತಾನೆ. ಒಬ್ಬ ಆತ್ಮವಿಶ್ವಾಸದ ಶಾಸಕನಾಗುತ್ತಾನೆ. ನನ್ನ ಗೆಲುವು ಇಡೀ ದೇಶಕ್ಕೆ ಸ್ಪೂರ್ತಿಯಾಗಿದೆ. ನನ್ನಂತಹ ಸಾಮಾನ್ಯ ವ್ಯಕ್ತಿ ಚುನಾವಣೆಯಲ್ಲಿ ಗೆದ್ದಿರುವುದಕ್ಕೆ ಜನರಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆ ಎಂಬ ಭಾವನೆ ಬರುತ್ತದೆ ಎಂದು ಪ್ರದೀಪ್ ಹೇಳಿಕೊಂಡರು.
ಈ ವರ್ಷದ ತಾಲೂಕಿನ ಎಸ್‌ಎಸ್‌ಎಲ್‌ಸಿ
ಫಲಿತಾಂಶ ಸುಧಾರಣೆ: ಪ್ರದೀಪ್ ಈಶ್ವರ್
ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 10ನೇ ತರಗತಿ ಫಲಿತಾಂಶ ಸುಧಾರಣೆಗೆ ವಿಶೇಷ ಕ್ರಮ ವಹಿಸಿದ್ದೇನೆ. ಪರೀಕ್ಷೆ ಬರೆಯುತ್ತಿರುವ 2,200 ಮಕ್ಕಳಿಗೆ 2 ಭಾಗಗಳಲ್ಲಿ ಒಟ್ಟು 96 ಪರೀಕ್ಷೆ ತೆಗೆದುಕೊಳ್ಳಲಾಗಿದೆ. ಪಬ್ಲಿಕ್ ಎಕ್ಸಾಂ ಮಾದರಿಯಲ್ಲಿ ನಡೆಸಿರುವ ಪರೀಕ್ಷೆಗೆ ಆಗಿರುವ ಸಂಪೂರ್ಣ ವೆಚ್ಚವನ್ನು ನಾನೇ ಭರಿಸಿದ್ದೇನೆ. ನಾವು ಸಿದ್ದಪಡಿಸಿದ ಪರೀಕ್ಷಾ ಪತ್ರಿಕೆಗಳನ್ನು ಬಿಇಒ ಕಚೇರಿ ಮೂಲಕ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಪರೀಕ್ಷೆಯ ಬಳಿಕ ಉತ್ತರ ಪತ್ರಿಕೆಗಳನ್ನು ವಾಪಸ್ ಬಿಇಒ ಕಚೇರಿಗೆ ತರಿಸಕೊಳ್ಳಲಾಗುತ್ತದೆ. ಆ ಪತ್ರಿಕೆಗಳನ್ನು ಅಂತರಶಾಲಾ ಮಟ್ಟದಲ್ಲಿ ಮೌಲ್ಯಮಾಪನ ಮಾಡಿಸಲಾಗುತ್ತದೆ. ಈ ರೀತಿಯ ವಿಶೇಷ ಕ್ರಮಗಳಿಂದ ಈ ವರ್ಷದಲ್ಲಿ ತಾಲೂಕಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಳೆದ ವರ್ಷಕ್ಕಿಂತ ಉತ್ತಮವಾಗಿರುತ್ತದೆ ಎಂದು ಪ್ರದೀಪ್ ಈಶ್ವರ್ ತಿಳಿಸಿದರು.
ನನ್ನ ಬಳಿ ಹಣ ಹೆಚ್ಚಾಗಿದೆ ಎಂದು ವಿರೋಧ ಪಕ್ಷದವರು ಆರೋಪ ಮಾಡಿದ್ದಾರೆ. ಆದರೆ, ದಾನ ಜಾಸ್ತಿಯಾದಾಗ ಮಾಡುವುದಲ್ಲ. ಇನ್ನೊಬ್ಬರಿಗೆ ಬೇಕಾದಾಗ ಮಾಡುವುದು. ಸರ್ಕಾರಿ ಸೇವೆಯ ಜೊತೆಗೆ ನನ್ನ ಹಣದಲ್ಲಿ ಜನರಿಗೆ ಸೇವೆ ನೀಡುತ್ತಿದ್ದೇನೆ.
- ಪ್ರದೀಪ್ ಈಶ್ವರ್, ಶಾಸಕ, ಚಿಕ್ಕಬಳ್ಳಾಪುರ