ಸಾರಾಂಶ
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೂ ಎಲ್ಲಾ ಸೌಲಭ್ಯ ದೊರಕುವಂತೆ ಮಾಡುವುದೇ ನನ್ನ ಗುರಿಯಾಗಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ತಾಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊರ್ಲಹಳ್ಳಿ, ಸುಬ್ಬರಾಯನಹಳ್ಳಿ, ಸುದ್ದಹಳ್ಳಿ ಮತ್ತು ದಿನ್ನೂರು ಗ್ರಾಮಗಳಲ್ಲಿ 4 ಕೋಟಿ 15 ಲಕ್ಷ ರು.ಗಳ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಯಾವುದೇ ಗ್ರಾಮದಲ್ಲಿ ಕೇವಲ 50 ,100 ಮತಗಳಿವೆ ಎಂದು ಆ ಗ್ರಾಮದವರನ್ನು ಕಡೆಗಣಿಸಬಾರದು ಎಂದು ನಿರ್ಣಯಿಸಿದ ನಾನು, ಆ ಗ್ರಾಮಸ್ಥರು ಸಹ ನಗರದ ಮುಖ್ಯ ರಸ್ತೆಗೆ ಶೀಘ್ರ ಮತ್ತು ಅನಾಯಾಸವಾಗಿ ಸಂಪರ್ಕ ಸಾಧಿಸಬೇಕು. ಅದೇ ರೀತಿ ತಮ್ಮ ಹೊಲ, ತೋಟ,ಗದ್ದೆಗಳಿಗೆ ತೆರಳಲು ಸಹ ಉತ್ತಮ ರಸ್ತೆ, ಸೇತುವೆಗಳು ಮುಖ್ಯವಾಗುತ್ತವೆ. ಅದಕ್ಕಾಗಿಯೇ ಕೋಟ್ಯಂತರ ವೆಚ್ಚದಲ್ಲಿ ರಸ್ತೆ- ಸೇತುವೆಗಳನ್ನು ಕಟ್ಟ ಕಡೆಯ ಗ್ರಾಮಗಳಿಗೂ ನಿರ್ಮಿಸಲು ನಿರ್ಧರಿಸಿ ಅನುದಾನ ತಂದು ಕಾಮಗಾರಿ ಪ್ರಾರಂಭಿಸಿದ್ದೇನೆ ಎಂದರು.
ಇದೇ ಕೋಟ್ಯಂತರ ಹಣವನ್ನು ನಗರದಲ್ಲಿ ಯಾವುದಾದರೂ ಕಟ್ಟಡಗಳಿಗೆ ಹಾಕಿ ನನ್ನ ಹೆಸರನ್ನು ದೊಡ್ಡ ದೊಡ್ಡ ಅಕ್ಷರಗಳಲ್ಲಿ ಹಾಕಿಸಿಕೊಂಡಿದ್ದರೆ ಯಾರು ಪ್ರಶ್ನಿಸುತ್ತಿರಲಿಲ್ಲಾ. ಆದರೆ ಮಹಾತ್ಮ ಗಾಂಧಿ ಅವರ ಕನಸಾದ ಗ್ರಾಮೀಣಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದು ನನ್ನ ಉದ್ದೇಶವಾಗಿದೆ ಎಂದು ಹೇಳಿದರು.
ಕೊರ್ಲಹಳ್ಳಿ ಗ್ರಾಮದ ಬಳಿ ಉತ್ತರ ಪಿನಾಕಿನಿ ನದಿಗೆ ಸೇತುವೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗೆ 80 ಲಕ್ಷ ರು. ಸುಬ್ಬರಾಯನಹಳ್ಳಿ, ಘಟ್ಟಿಗಾನಹಳ್ಳಿ ಮತ್ತು ದೊಡ್ಡರಾಯಪನಹಳ್ಳಿ ಸಂಪರ್ಕ ರಸ್ತೆ ಮತ್ತು ಸೇತುವೆ ಕಾಮಗಾರಿಗೆ 2 ಕೋಟಿ 75 ಲಕ್ಷ ರು, ಸುದ್ದಹಳ್ಳಿ ಗ್ರಾಮದ ಸೇತುವೆ ಅಭಿವೃದ್ಧಿ ಕಾಮಗಾರಿಗೆ 20 ಲಕ್ಷ ರು., ದಿನ್ನೂರು ಗ್ರಾಮದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ 80 ಲಕ್ಷ ರು.ಗಳನ್ನು ನೀಡಿದ್ದೇನೆ. ಈ ಕಾಮಗಾರಿಗಳು ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿವೆ ಎಂದರು.
ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ಚನ್ನಾಗಿ ಬರೆದು ಉತ್ತಮ ಫಲಿತಾಂಶ ತರಲಿ ಎಂದು ಶುಭ ಹಾರೈಸಿದರಲ್ಲದೇ, ನನ್ನ ವಿಧಾನ ಸಭಾ ಕ್ಷೇತ್ರದ ಎಲ್ಲಾ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ನನ್ನ ಪರಿಶ್ರಮ ಅಕಾಡೆಮಿಯಿಂದ ಉಚಿತವಾಗಿ ನೀಟ್ ಮತ್ತು ಸಿಇಟಿ ತರಬೇತಿಯನ್ನು ನುರಿತ ಅಧ್ಯಾಪಕರಿಂದ ಚಿಕ್ಕಬಳ್ಳಾಪುರದಲ್ಲೇ ನೀಡುತ್ತಿದ್ದೇನೆ. ಈ ನೀಟ್ ಮತ್ತು ಸಿಇಟಿ ತರಬೇತಿಗೆ 50 ರಿಂದ 60 ಸಾವಿರ ರು. ಫೀಸ್ ನೀಡಬೇಕು. ಆದರೆ ನಾನು ಎಲ್ಲರಿಗೂ ಉಚಿತವಾಗಿ ನೀಡುತ್ತಿದ್ದೇನೆ. ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಗ್ಯಾರಂಟಿಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಯಲುವಹಳ್ಳಿ ರಮೇಶ್, ಜಿಪಂ ಮಾಜಿ ಸದಸ್ಯರಾದ ಕೆ.ಸಿ.ರಾಜಾಕಾಂತ್, ಮುನೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜಯರಾಮ್, ಗ್ರಾಪಂ ಮಾಜಿ ಅಧ್ಯಕ್ಷ ನಾರಾಯಣಪ್ಪ, ಮುಖಂಡರಾದ ಅವುಲರೆಡ್ಡಿ, ಅರವಿಂದ್, ಜೆಸಿಬಿ ಮಂಜುನಾಥ್, ಮುರಳಿ, ಭಾಗ್ಯಮ್ಮ, ಸುಧಾ ವೆಂಕಟೇಶ್, ರಾಜಣ್ಣ, ನಂದಿ ರಮೇಶ್, ರಾಮಕೃಷ್ಣಪ್ಪ,ಅಧಿಕಾರಿಗಳು, ಮತ್ತಿತರರು ಇದ್ದರು.