ಸಾರಾಂಶ
ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದಲ್ಲಿ ಗ್ರಾಮೀಣ ಜನರಿಗೆ ಸಾಲ ನೀಡಿದ್ದ ಮೈಕ್ರೋ ಫೈನಾನ್ಸ್ ಕಿರುಕುಳ ಎಲ್ಲೆ ಮೀರಿದೆ
ರಾಣಿಬೆನ್ನೂರು : ಮೈಕ್ರೋ ಫೈನಾನ್ಸ್ ಸಿಬ್ಬಂದಿ ಅವಾಚ್ಯವಾಗಿ ಮಾತನಾಡಿದ್ದಕ್ಕೆ ತರಾಟೆಗೆ ತೆಗೆದುಕೊಂಡು ತಳ್ಳಾಡಿದ್ದ ಮಹಿಳೆಯರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಲ್ಲದೆ, ₹1000 ದಂಡ ವಸೂಲಿ ಮಾಡಿದ ಘಟನೆ ರಾಣೆಬೆನ್ನೂರು ತಾಲೂಕಿನ ಗುಡ್ಡದ ಬೇವಿನಹಳ್ಳಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸಾಲ ವಸೂಲಿಗಾಗಿ ಗ್ರಾಮಕ್ಕೆ ತೆರಳಿದಾಗ ಸಾಲ ಪಡೆದ ಮಹಿಳೆಯರಿಗೆ ಅವಾಚ್ಯವಾಗಿ ಮಾತನಾಡಿದ್ದಾರೆ. ಇದರಿಂದ ಕೆರಳಿದ ಮಹಿಳೆಯರು ಸಿಬ್ಬಂದಿಯನ್ನು ತಳ್ಳಾಡಿ ಅವರ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದರು. ಆಗ ಮೈಕ್ರೋ ಫೈನಾನ್ಸ್ ಸಿಬ್ಬಂದಿ ತಮ್ಮನ್ನು ತಳ್ಳಾಡಿದ ಗ್ರಾಮದ ನಾಗಮ್ಮ ಹಾಗೂ ರಹಿಮಾ ವಿರುದ್ಧ ಹಲಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಪೊಲೀಸರು ಆರೋಪಿತ ಮಹಿಳೆಯರಿಂದ ₹1000 ದಂಡ ಕಟ್ಟಿಸಿಕೊಂಡಿದ್ದಾರೆ.
₹35 ಸಾವಿರಕ್ಕೆ ಮೀಟರ್ ಬಡ್ಡಿಗಾಗಿ ಬಾರುಕೋಲಿನಿಂದ ಥಳಿತ: ಸಾವು
ಯಾದಗಿರಿ : ಮೈಕ್ರೋ ಫೈನಾನ್ಸ್ ಅವರ ಬಡ್ಡಿ, ಮೀಟರ್ ಬಡ್ಡಿ ಕಿರುಕುಳದಿಂದ ರಾಜ್ಯದಲ್ಲಿ ಜನರ ಆತ್ಮಹತ್ಯೆ ಸರಮಾಲೆ ಮುಂದುವರಿದಿದೆ. ಈ ಮಧ್ಯೆಯೇ ಕೊಟ್ಟ ಸಾಲಕ್ಕೆ ಮೀಟರ್ ಬಡ್ಡಿ ಕೊಡಲಿಲ್ಲವೆಂದು ಬಾರುಕೋಲಿನಿಂದ ಯುವಕನನ್ನು ಮನಸೋ ಇಚ್ಛೆ ಥಳಿಸಿದ್ದು, ಆ ಯುವಕ ಮೃತಪಟ್ಟ ದುರ್ಘಟನೆ ಯಾದಗಿರಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಮೀಟರ್ ಬಡ್ಡಿ ಕೊಡಲಿಲ್ಲ ಎಂದು ಯಾದಗಿರಿ ನಗರದ ಖಾಸೀಂ ಹಲ್ಲೆಗೊಳಗಾಗಿ ಮೃತಪಟ್ಟ ಯುವಕ. ಯುವಕನಿಗೆ ದುಡ್ಡು ಕೊಟ್ಟಿದ್ದ ಎನ್ನಲಾದ ಯಾಸೀನ್ ಎಂಬಾತ ಹಲ್ಲೆ ನಡೆಸಿದ ಆರೋಪಿ.
ಜ.19 ರಂದು ಯಾಸೀನ್ ₹35 ಸಾವಿರ ಹಣವನ್ನು ಬಡ್ಡಿ ಸಮೇತ ಮರುಪಾವತಿಸುವಂತೆ ಕೇಳಿದ್ದಾನೆ, ಸ್ವಲ್ಪ ಸಮಯ ಕೊಡಿ ಎಂದು ಖಾಸೀಂ ಮನವಿ ಮಾಡಿಕೊಂಡರೂ, ಸಾಲ ಮರುಪಾವತಿ ತಡವಾಗಿದೆ ಎಂದು ಆಕ್ರೋಶಗೊಂಡ ಖಾಸೀಂ ಮೇಲೆ ಹಲ್ಲೆ ನಡೆಸಿದ ಪರಿಣಾಮ ತೀವ್ರ ಗಾಯಗೊಂಡ ಖಾಸೀಂನನ್ನು ಕಲಬುರಗಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದಾನೆ. ಯಾಸೀನ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದೆ.
ಸಿಡಿದೆದ್ದ ಮಹಿಳೆಯರು: ತಾಳಿ ಹಿಡಿದು ಧರಣಿ
ಬೆಂಗಳೂರು : ಮೈಕ್ರೋ ಫೈನಾನ್ಸ್ ಕಿರುಕುಳದ ವಿರುದ್ಧ ರಾಜ್ಯದ ಹಲವೆಡೆ ಆಕ್ರೋಶ ಭುಗಿಲೆದ್ದಿದ್ದು, ಬೆಳಗಾವಿಯಲ್ಲಿ ಮಹಿಳೆಯರು ಶುಕ್ರವಾರ ತಾಳಿ ಹಿಡಿದು ಪ್ರತಿಭಟನೆ ನಡೆಸಿದರು. ಚಾಮರಾಜನಗರದಲ್ಲಿ ಕರ್ನಾಟಕ ಸೇನಾಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ, ರಾಯಚೂರು, ಕಲಬುರಗಿಯಲ್ಲೂ ಫೈನಾನ್ಸ್ ಕಿರುಕುಳದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಖಾನಾಪುರ ತಾಲೂಕಿನ ತೊಲಗಿ ಹಾಗೂ ಸುತ್ತಮುತ್ತಲ ಗ್ರಾಮದ ಮಹಿಳೆಯರು ಶುಕ್ರವಾರ ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಿ, ಫೈನಾನ್ಸ್ ನವರ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿದರು. ದೂರು ನೀಡಲು ಕೌಂಟರ್ ತೆರೆಯುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಕೈಯಲ್ಲಿ ತಾಳಿ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರಿನ ಟಿಪ್ಪು ಗಾರ್ಡನ್ ನಲ್ಲಿ ಪ್ರತಿಭಟನೆ ನಡೆಸಿದ ಸಂತ್ರಸ್ತರು, ಫೈನಾನ್ಸ್ ಕಿರುಕುಳ ತಡೆಗೆ ಆಗ್ರಹಿಸಿ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು. ಇದೇ ವೇಳೆ, ಕಲಬುರಗಿಯಲ್ಲೂ ಪ್ರತಿಭಟನೆ ನಡೆಯಿತು.
ಚಾಮರಾಜನಗರದಲ್ಲಿ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ಸೇನಾಪಡೆ ಕಾರ್ಯಕರ್ತರು ಮೈಕ್ರೋ ಫೈನಾನ್ಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನಾಯಿಕೊಡೆಯಂತೆ ಹುಟ್ಟಿಕೊಂಡಿದ್ದು, ಜನರ ಹಣವನ್ನು ಸುಲಿಗೆ ಮಾಡುತ್ತಿವೆ. ಜನರಿಗೆ ಅಮಿಷವೊಡ್ಡಿ ಸಾಲ ನೀಡಿ, ಸಾಲ ಮರುಪಾವತಿ ವಿಳಂಬ ಮಾಡಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಕಿರುಕುಳ ನೀಡುತ್ತಿವೆ ಎಂದು ಕಿಡಿಕಾರಿದರು.
ಬಾಣಂತಿ, ಹಸುಗೂಸನ್ನು ಹೊರ ಹಾಕಿ, ಪಾತ್ರೆ ಎಸೆದು ಮನೆ ಜಪ್ತಿ
ಬೆಳಗಾವಿ: ಸಾಲ ವಸೂಲಾತಿಗೆ ಬಂದ ಖಾಸಗಿ ಫೈನಾನ್ಸ್ ಸಿಬ್ಬಂದಿ 1 ತಿಂಗಳ ಬಾಣಂತಿ ಹಾಗೂ ಹಸುಗೂಸನ್ನು ಲೆಕ್ಕಿಸದೇ ಮನೆಯಿಂದ ಎಲ್ಲರನ್ನೂ ಹೊರಗೆ ಹಾಕಿ ಮನೆ ಜಪ್ತಿ ಮಾಡಿದ ಅಮಾನವೀಯ ಘಟನೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ತಾರಿಹಾಳ ಗ್ರಾಮದಲ್ಲಿ ನಡೆದಿದೆ. ಪೊಲೀಸ್ ಭದ್ರತೆಯಲ್ಲಿ ಆಗಮಿಸಿದ ಫೈನಾನ್ಸ್ ಸಿಬ್ಬಂದಿ, ಮನೆಯಲ್ಲಿದ್ದ ಎಲ್ಲ ಸದಸ್ಯರನ್ನು ಹೊರಹಾಕಿದರು. ಅಲ್ಲದೆ, ಮನೆಯಲ್ಲಿದ್ದ ಪಾತ್ರೆ, ಬಟ್ಟೆ ಸೇರಿ ಮತ್ತಿತರ ಸಾಮಗ್ರಿಗಳನ್ನು ಬೀದಿಗೆ ಎಸೆದು ಮನೆಗೆ ಬೀಗ ಹಾಕಿದರು. ಮನೆ ಗೋಡೆ ಮುಂದೆ ಇದು ಹರಾಜಿಗಿದೆ ಎಂದು ಬರೆಸಿದರು.
ತಾರಿಹಾಳ ಗ್ರಾಮದ ಗಣಪತಿ ರಾಮಚಂದ್ರ ಲೋಹಾರ ಎಂಬುವರ ಮನೆಯನ್ನು ಜಪ್ತಿ ಮಾಡಲಾಗಿದೆ. ಗಣಪತಿ ಅವರು 5 ವರ್ಷಗಳ ಹಿಂದೆ ಮನೆ ಕಟ್ಟಿಸಲು ಖಾಸಗಿ (ಆಪ್ಟಸ್ ವ್ಯಾಲ್ಯೂ ಹೌಸಿಂಗ್ ಫೈನಾನ್ಸ್) ಫೈನಾನ್ಸ್‌ನಿಂದ ₹5 ಲಕ್ಷ ಸಾಲ ಪಡೆದಿದ್ದರು. 3 ವರ್ಷ ಸರಿಯಾಗಿ ಕಂತನ್ನು ಕಟ್ಟಿದ್ದರು. ಆದರೆ, ವೃದ್ಧ ತಾಯಿಗೆ ಅನಾರೋಗ್ಯ ಮತ್ತು ಮಗಳ ಹೆರಿಗೆಯಾದ ಹಿನ್ನೆಲೆಯಲ್ಲಿ ಕಳೆದ 6 ತಿಂಗಳಿಂದ ಸಾಲದ ಕಂತು ಮರುಪಾವತಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಫೈನಾನ್ಸ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶದಂತೆ ಫೈನಾನ್ಸ್ ಸಿಬ್ಬಂದಿ, ಪೊಲೀಸರು ಹಾಗೂ ವಕೀಲರ ಸಮ್ಮುಖದಲ್ಲೇ ಮನೆ ಖಾಲಿ ಮಾಡಿಸಿದರು.
ತಾಯಿ ಕಿಡ್ನಿ ಮಾರಿಸಿದ್ದವನಿಂದ ಈಗ ಮಗಳ ಕಿಡ್ನಿಗೆ ಬ್ಲ್ಯಾಕ್ಮೇಲ್
ಮಾಗಡಿ: ಹಣಕಾಸಿನ ಸಮಸ್ಯೆಯಿಂದ ಕಿಡ್ನಿ ಮಾರಿದ್ದ ಮಹಿಳೆಗೆ ನಿನ್ನ ಮಗಳ ಕಿಡ್ನಿ ನೀಡು ಇಲ್ಲವೇ, ಕಿಡ್ನಿ ಮಾರಿದ ಹಣವನ್ನು ನೀಡು ಎಂದು ವ್ಯಕ್ತಿಯೋರ್ವ ಮಹಿಳೆಗೆ ಬೆದರಿಕೆ ಹಾಕಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ನಡೆದಿದೆ. ತಿರುಮಲೆ ನಿವಾಸಿ ಗೀತಾ ಪತಿ ನರಸಿಂಹಯ್ಯ 11 ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 3 ವರ್ಷಗಳ ಹಿಂದೆ ಹಣದ ಅವಶ್ಯಕತೆಗಾಗಿ ₹2.50 ಲಕ್ಷಕ್ಕೆ ಕಿಡ್ನಿ ಮಾರಿದ್ದರು. ಈಗ ಕಿಡ್ನಿ ಮಾರಾಟ ಮಾಡಲು ಸಹಾಯ ಮಾಡಿದ್ದ ಮಂಜುನಾಥ್, ನಿನ್ನ ಮಗಳಿಂದ ಕಿಡ್ನಿ ಕೊಡಿಸು, ಇಲ್ಲವಾದರೆ ನಿನಗೆ ನೀಡಿದ್ದ ₹2.50 ಲಕ್ಷ ಹಣ ಹಿಂದಿರುಗಿಸುವಂತೆ ಕಿರುಕುಳ ನೀಡುತ್ತಿದ್ದಾರೆ. ಹಣ ನೀಡದಿದ್ದರೆ ಕಿಡ್ನಿ ಮಾರಿರುವ ಬಗ್ಗೆ ಎಲ್ಲರಿಗೂ ತಿಳಿಸಿ ನಿನ್ನ ಮಾನ ಹರಾಜು ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಗೀತಾ ದೂರಿದ್ದಾರೆ.
ನೆಂಟರಿಗೆ ಸಾಲ ತೆಗೆದುಕೊಟ್ಟ ಮಹಿಳೆ ಈಗ ಊರು ಬಿಟ್ಟಳು!
ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಮುಂದುವರೆದಿದ್ದು, ಮತ್ತೊಬ್ಬರಿಗೆ ಸಾಲ ತೆಗೆದುಕೊಟ್ಟು, ಮಹಿಳೆಯೊಬ್ಬಳು ಸಂಕಷ್ಟಕ್ಕೆ ಸಿಲುಕಿ ಊರು ತೊರೆದಿರುವ ಘಟನೆ ನಡೆದಿದೆ.
ಹಾನಗಲ್ಲ ತಾಲೂಕಿನ ಕೊಪ್ಪರಸಿಕೊಪ್ಪದ ಸಾವಿತ್ರಮ್ಮ ವಡ್ಡರ ಸಂಕಷ್ಟಕ್ಕೆ ಸಿಲುಕಿದ್ದು, ಸ್ಪಂದನ ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಾಟಕ್ಕೆ ಮನೆ ಬಿಟ್ಟು ಹಾನಗಲ್ಲ ಪಟ್ಟಣದ ಬೇರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದಾಳೆ. ಕೊಪ್ಪರಸಿಕೊಪ್ಪದ ಸಾವಿತ್ರಮ್ಮ ವಡ್ಡರ ಅವರು ತಮ್ಮ ಸಂಬಂಧಿಯೊಬ್ಬರಿಗೆ ತಮ್ಮ ಹೆಸರಿನಲ್ಲಿ ಸಾಲ ತೆಗೆದು ಕೊಟ್ಟಿದ್ದರು. ಸಾಲದ ಕಂತು ಕಟ್ಟದ ಪರಿಣಾಮ ಮೈಕ್ರೋಫೈನಾನ್ಸ್ ಸಿಬ್ಬಂದಿ ಮನೆಗೆ ಬಂದು ಹಣ ಕಟ್ಟುವಂತೆ ಪೀಡಿಸುತ್ತಿದ್ದರು. ಇದರಿಂದ ಬೇಸತ್ತ ಸಾವಿತ್ರಮ್ಮ ವಡ್ಡರ ಮನೆ ಬಿಟ್ಟು ಹಾನಗಲ್ಲಿನ ಸುಶೀಲಮ್ಮ ಪಾಟೀಲ್ ಮನೆಯಲ್ಲಿ ಆಶ್ರಯ ಪಡೆದಿದ್ದರು. ಮನೆ ಬಿಟ್ಟು ಬಂದು ಬೇರೆಯೊಂದು ಜಾಗದಲ್ಲಿರುವ ಮಾಹಿತಿ ತಿಳಿದು ಹಣ ಕಟ್ಟುವಂತೆ ಫೈನಾನ್ಸ್ ಸಿಬ್ಬಂದಿ ಮತ್ತೆ ಕಾಟ ಕೊಡಲು ಮುಂದಾಗಿದ್ದು, ಸ್ಥಳೀಯರಿಗೆ ಈ ವಿಷಯ ಗೊತ್ತಾಗಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.
ಕುಟುಂಬ ತೊರೆದು ಸಲೂನನ್ನೂ ಮಾರಿ ಊರು ತೊರೆದ ಕ್ಷೌರಿಕ!
ಶಿವಮೊಗ್ಗ: ಫೈನಾನ್ಸ್ ಸಿಬ್ಬಂದಿಯ ಕಿರುಕುಳ ತಾಳಲಾರದೇ ಯುವಕನೊಬ್ಬ ಕುಟುಂಬವನ್ನೇ ತೊರೆದು ಊರು ಬಿಟ್ಟದ್ದಾನೆ. ದಿನದ ಬಡ್ಡಿ, ವಾರದ ಬಡ್ಡಿ, ತಿಂಗಳ ಬಡ್ಡಿ, ಚಕ್ರಬಡ್ಡಿ ಕಟ್ಟಲಾಗದೆ ಯುವಕ ಕಂಗಲಾಗಿದ್ದ. ಹೀಗಾಗಿ ತನ್ನ ದುಡಿಮೆಗಾಗಿ ಮಾಡಿಕೊಂಡಿದ್ದ ಹೇರ್ ಕಟಿಂಗ್ ಸಲೂನ್ ಕೂಡ ಮಾರಾಟ ಮಾಡಿದ್ದ. ಮಗ ಮಾರಾಟ ಮಾಡಿದ ಸಲೂನ್‌ನಲ್ಲಿ ಅಪ್ಪ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಿದೆ.
ತಂದೆ ಮಗ ಇಬ್ಬರು ಸೇರಿ ಎನ್.ಟಿ.ರಸ್ತೆಯಲ್ಲಿ 2 ವರ್ಷದ ಹಿಂದೆ ಮಾಸ್ಟರ್ ಕಟ್ ಸಲೂನ್ ಹೆಸರಿನ ಹೇರ್ ಕಟಿಂಗ್ ಅಂಗಡಿ ತೆರೆದಿದ್ದರು. ಅಂಗಡಿ ಮಾಡಲು ಸ್ವಲ್ಪ ಸಾಲ ಮಾಡಿಕೊಂಡಿದ್ದ ಮಗ ಶ್ರೀನಿವಾಸ್ ನಂತರ ಆ ಸಾಲ ತೀರಿಸಲು ಫೈನಾನ್ಸ್‌ಗಳ ಬಳಿ ಸಾಲ ಮಾಡಿದ್ದ. ಬಳಿಕ ಪ್ರತಿ ದಿನ ದುಡಿದರೂ ಬಡ್ಡಿ ಕಟ್ಟಲಾಗದೆ ಬಡ್ಡಿ ಮಾಫಿಯಾದ ಕಿರುಕುಳಕ್ಕೆ ಒಳಗಾಗಿದ್ದ. ಇತ್ತೀಚೆಗೆ ಫೈನಾನ್ಸ್ ಸಿಬ್ಬಂದಿ ಸಾಲ ಕಟ್ಟುವಂತೆ ಒತ್ತಡ ಹಾಕುತ್ತಿದ್ದರು. ಫೈನಾನ್ಸ್ ಅವರ ಕಿರುಕುಳಕ್ಕೆ ಬೆದರಿ 6 ತಿಂಗಳ ಹಿಂದೆ ತನ್ನ ಅಂಗಡಿಯನ್ನು ಬೇರೆಯವರಿಗೆ ಮಾರಾಟ ಮಾಡಿ ಪತ್ನಿ, ಮಕ್ಕಳು, ವಯೋವೃದ್ಧ ತಂದೆ - ತಾಯಿಯನ್ನು ತೊರೆದು ಊರು ಬಿಟ್ಟಿದ್ದಾನೆ.
ಮಗನ ಉಳಿಸಲು ಸಾಲ ಮಾಡಿದ್ದ ತಾಯಿ ಕೊರಳಿಗೆ ಅರಿಶಿಣ ಕೊಂಬು
ರಾಣೆಬೆನ್ನೂರು: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಂಗಲ್ಯ ಪೋಸ್ಟ್ ಮಾಡಿದ್ದ ರಾಣೆಬೆನ್ನೂರಿನ ಶೈಲಾ ಎಂಬುವರು ಕೊರಳಲ್ಲಿ ತಾಳಿ ಬದಲು ಅರಿಶಿಣ ಕೊಂಬು ಕಟ್ಟಿಕೊಂಡಿದ್ದಾರೆ.
ಅಪಘಾತದಲ್ಲಿ ಗಾಯಗೊಂಡು ಕೋಮಾಕ್ಕೆ ಹೋಗಿದ್ದ ಮಗನ ಬದುಕಿಸಿಕೊಳ್ಳಲು ಶೈಲಾ ಅವರು ಲಕ್ಷಗಟ್ಟಲೇ ಸಾಲ ಮಾಡಿದ್ದರು. ಸಾಲಕ್ಕೆ ಬಡ್ಡಿ ತೀರಿಸಲು ಮಾಂಗಲ್ಯ ಮಾರಿದ್ದರು. ಸಾಲ ಕಟ್ಟಲು ಅವಕಾಶ ನೀಡುವಂತೆ ಕಣ್ಣೀರು ಸುರಿಸಿ ಅಂಗಲಾಚಿದರೂ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಅದಕ್ಕೆ ಕ್ಯಾರೇ ಎಂದಿಲ್ಲ.
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮನೆಯ ಯಜಮಾನರು ಮನೆ ಬಿಟ್ಟು ಹೋಗಿದ್ದಾರೆ. ಹೀಗಾಗಿ ಆಕೆ ಅಂಗವಿಕಲ ಪುತ್ರನ ಜತೆ ಜೀವನ ಸಾಗಿಸುತ್ತಿದ್ದು, ಮೈಕ್ರೋ ಫೈನಾನ್ಸ್ ದಬ್ಬಾಳಿಕೆಗೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.