ಶ್ರೀರಾಮುಲು - ಜನಾರ್ದನ ರೆಡ್ಡಿ ಟೂ.ಟೂ.. ಬಂದಾಯ್ತು ಆಪ್ತರಾಗಿದ್ದಾಗ ಹಾಕಿಸಿದ್ದ ಮನೆಯ ಗೇಟು!

| N/A | Published : Jan 25 2025, 10:55 AM IST

B Sriramulu

ಸಾರಾಂಶ

ಬಿಜೆಪಿ ಶಾಸಕ ಜನಾರ್ದನ ರೆಡ್ಡಿಯಿಂದ ವ್ಯಾವಹಾರಿಕ ಹಾಗೂ ರಾಜಕೀಯವಾಗಿ ಮುನಿಸಿಕೊಂಡಿರುವ ಮಾಜಿ ಸಚಿವ ಬಿ.ಶ್ರೀರಾಮುಲು ಅವರು, ರೆಡ್ಡಿ ಮತ್ತು ತಮ್ಮ ಮನೆಗೆ ಸಂಪರ್ಕವಿದ್ದ ಗೇಟನ್ನು ಬಂದ್ ಮಾಡಿದ್ದಾರೆ.

  ಬಳ್ಳಾರಿ : ಬಿಜೆಪಿ ಶಾಸಕ ಜನಾರ್ದನ ರೆಡ್ಡಿಯಿಂದ ವ್ಯಾವಹಾರಿಕ ಹಾಗೂ ರಾಜಕೀಯವಾಗಿ ಮುನಿಸಿಕೊಂಡಿರುವ ಮಾಜಿ ಸಚಿವ ಬಿ.ಶ್ರೀರಾಮುಲು ಅವರು, ರೆಡ್ಡಿ ಮತ್ತು ತಮ್ಮ ಮನೆಗೆ ಸಂಪರ್ಕವಿದ್ದ ಗೇಟನ್ನು ಬಂದ್ ಮಾಡಿದ್ದಾರೆ.

ಶ್ರೀರಾಮುಲು ಆಪ್ತರು ಹೇಳುವಂತೆ, ರೆಡ್ಡಿ ಮನೆಗೆ ತೆರಳಲು ಇರಿಸಿಕೊಂಡಿದ್ದ ಗೇಟ್‌ನ್ನು ಇತ್ತೀಚೆಗೆ ಮುಚ್ಚಲಾಗಿದೆ. ಜನಾರ್ದನ ರೆಡ್ಡಿಯಿಂದ ದೂರ ಇರಲು ಶ್ರೀರಾಮುಲು ಈ ನಿಲುವು ತೆಗೆದುಕೊಂಡಿದ್ದಾರೆ. ವಾಸ್ತು ಸರಿಯಿಲ್ಲ ಎಂಬ ಕಾರಣಕ್ಕಾಗಿ ಸಿಮೆಂಟ್ ಹಾಗೂ ಗಾರೆಗಳನ್ನು ಬಳಸಿ ಗೇಟ್‌ನ್ನು ಬಂದ್ ಮಾಡಿಕೊಂಡಿರುವುದಾಗಿ ಶ್ರೀರಾಮುಲು ಹೇಳುತ್ತಿದ್ದಾರೆ. ಆದರೆ, ರೆಡ್ಡಿ ಹಾಗೂ ಶ್ರೀರಾಮುಲು ನಡುವಿನ ಆಂತರಿಕ ಸಂಘರ್ಷದಿಂದಾಗಿಯೇ ಗೇಟ್ ಮುಚ್ಚಲಾಗಿದೆ ಎಂದು ಶ್ರೀರಾಮುಲು ಆಪ್ತರು ಹೇಳುತ್ತಾರೆ.

ಭೇಟಿಯಾಗಲು ಗೇಟ್ ಬಳಕೆ:

ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ರಾಜಕೀಯ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ನಗರ ಹೊರವಲಯದ ಸಿರುಗುಪ್ಪ ರಸ್ತೆಯ ಹವಂಭಾವಿ ಪ್ರದೇಶದಲ್ಲಿ ಅಕ್ಕಪಕ್ಕದಲ್ಲಿಯೇ ಬಂಗಲೆ ನಿರ್ಮಿಸಿಕೊಂಡಿದ್ದರು. ಎರಡು ಮನೆಗಳ ನಡುವೆ ಸುಮಾರು 50 ಮೀಟರ್ ಅಂತರವಿತ್ತು. ಇಬ್ಬರು ಪರಸ್ಪರ ಭೇಟಿ ಮಾಡಲು ಎರಡು ಮನೆಗಳ ಗೋಡೆಯ ನಡುವಿನ ತಡೆಗೋಡೆಗೆ ಪುಟ್ಟದೊಂದು ಗೇಟ್ ಮಾಡಿಕೊಂಡಿದ್ದರು. ಈ ಗೇಟ್‌ನಲ್ಲಿ ಏಕಕಾಲಕ್ಕೆ ಒಬ್ಬರು ಮಾತ್ರ ಓಡಾಡಬಹುದಿತ್ತು. ಜನಾರ್ದನ ರೆಡ್ಡಿ ಜೊತೆಗಿನ ಸ್ನೇಹ ಮುರಿದು ಬಿದ್ದ ಬಳಿಕ ಈ ಗೇಟ್ ಹೆಚ್ಚಾಗಿ ಬಳಕೆಯಾಗುತ್ತಿರಲಿಲ್ಲ. ಇತ್ತೀಚೆಗಷ್ಟೇ ಈ ಗೇಟ್‌ನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ಇಬ್ಬರು ಕುಚುಕು ಗೆಳೆಯರ ನಡುವಿನ ವೈಮನಸ್ಸು ಬಹುವರ್ಷಗಳ ಸ್ನೇಹ ಮುರಿದು ಬೀಳಲು ಕಾರಣವಾಯಿತು. ಗೇಟ್ ಬಂದ್ ಆಗಿರುವುದು ಇಬ್ಬರ ಸ್ನೇಹವೂ ಬಂದ್ ಆದ ಕುರುಹು ಎಂದು ವಿಶ್ಲೇಷಿಸುವ ಇಲ್ಲಿನ ರಾಜಕೀಯ ನಾಯಕರು, ಮುಂದೊಂದು ದಿನ ಮತ್ತೆ ಸ್ನೇಹ ಅರಳಿ ಗೇಟ್ ಓಪನ್ ಆದರೂ ಅಚ್ಚರಿಯಿಲ್ಲ ಎನ್ನುತ್ತಾರೆ.