108 ಆ್ಯಂಬುಲೆನ್ಸ್‌ಗೆ 7 ವರ್ಷವಾದರೂ ಹೊಸ ಟೆಂಡರ್‌ ಇಲ್ಲ : ರಾಜ್ಯಾದ್ಯಂತ ಸೇವೆಯಲ್ಲಿ ಪದೇ ಪದೇ ವ್ಯತ್ಯಯ

| Published : Jul 21 2024, 11:58 AM IST

108 Ambulance

ಸಾರಾಂಶ

ರಾಜ್ಯದಲ್ಲಿ ಡೆಂಘೀ ರುದ್ರನರ್ತನ ಹಿನ್ನೆಲೆಯಲ್ಲಿ ‘ಆರೋಗ್ಯ ತುರ್ತು ಪರಿಸ್ಥಿತಿ’ ಘೋಷಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ಆದರೆ, 108 ಆ್ಯಂಬುಲೆನ್ಸ್‌ ಸೇವೆ ಒದಗಿಸುವ ಟೆಂಡರ್‌ ರದ್ದಾಗಿ ಏಳು ವರ್ಷ ಕಳೆದರೂ ಈವರೆಗೂ ಹೊಸಬರಿಗೆ ಟೆಂಡರ್‌ ನೀಡಲೂ ಆರೋಗ್ಯ ಇಲಾಖೆಗೆ ಸಾಧ್ಯವಾಗಿಲ್ಲ

ಶ್ರೀಕಾಂತ್‌ ಎನ್. ಗೌಡಸಂದ್ರ

 ಬೆಂಗಳೂರು :  ರಾಜ್ಯದಲ್ಲಿ ಡೆಂಘೀ ರುದ್ರನರ್ತನ ಹಿನ್ನೆಲೆಯಲ್ಲಿ ‘ಆರೋಗ್ಯ ತುರ್ತು ಪರಿಸ್ಥಿತಿ’ ಘೋಷಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ಆದರೆ, 108 ಆ್ಯಂಬುಲೆನ್ಸ್‌ ಸೇವೆ ಒದಗಿಸುವ ಟೆಂಡರ್‌ ರದ್ದಾಗಿ ಏಳು ವರ್ಷ ಕಳೆದರೂ ಈವರೆಗೂ ಹೊಸಬರಿಗೆ ಟೆಂಡರ್‌ ನೀಡಲೂ ಆರೋಗ್ಯ ಇಲಾಖೆಗೆ ಸಾಧ್ಯವಾಗಿಲ್ಲ. ಇದು ತುರ್ತು ಆರೋಗ್ಯ ಸೇವೆಗಳ ಬಗೆಗಿನ ವಿಳಂಬ ಧೋರಣೆಯ ದ್ಯೋತಕ ಎಂಬ ಆರೋಪ ಕೇಳಿ ಬಂದಿದೆ.

ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಆ್ಯಂಬುಲೆನ್ಸ್‌ ಸೇವೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ 2023ರ ಜು.22ರಂದು ತಾಂತ್ರಿಕ ಸಲಹಾ ಸಮಿತಿ ನೇಮಿಸಲಾಗಿತ್ತು. ಈ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿ ತಿಂಗಳುಗಳೇ ಕಳೆದರೂ ಈವರೆಗೂ ಹೊಸ ಷರತ್ತುಗಳ ಅಡಿಯಲ್ಲಿ ಟೆಂಡರ್‌ ಕರೆಯಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಒಪ್ಪಿಗೆ ನೀಡಿಲ್ಲ. ಹೀಗಾಗಿ ಆ್ಯಂಬುಲೆನ್ಸ್‌ ಸೇವೆಗೆ ಹಿಡಿದಿರುವ ಗ್ರಹಣ ಮುಂದುವರೆದಿದೆ.

ರಾಜ್ಯದಲ್ಲಿ ತುರ್ತು ಅನಾರೋಗ್ಯ ಸಂದರ್ಭಗಳಲ್ಲಿ ಆರೋಗ್ಯ ಕವಚ ಆ್ಯಂಬುಲೆನ್ಸ್‌ ಸೇವೆ ಒದಗಿಸಲು 2007ರಲ್ಲಿ ಟೆಂಡರ್‌ ಪಡೆದಿದ್ದ ಜಿವಿಕೆಯ ಸಂಸ್ಥೆಯ ಗುತ್ತಿಗೆಯನ್ನು ಅಸಮರ್ಪಕ ಸೇವೆ ಹಾಗೂ ನಿಯಮ ಉಲ್ಲಂಘನೆ ಕಾರಣ ನೀಡಿ ರಾಜ್ಯ ಸರ್ಕಾರ 2017ರಲ್ಲಿ ರದ್ದುಪಡಿಸಿತ್ತು.

ಜಿವಿಕೆ-ಇಎಂಆರ್‌ಇ ಸಂಸ್ಥೆಯು ವಿಳಂಬ ಸೇವೆ, ಜಿಐಎಸ್‌ ಅಳವಡಿಕೆ ಮಾಡದಿರುವುದು, ಸಿಬ್ಬಂದಿಯ ನಿರ್ವಹಣೆ ವೈಫಲ್ಯ ಸೇರಿದಂತೆ ಟೆಂಡರ್‌ ಷರತ್ತುಗಳನ್ನು ಉಲ್ಲಂಘಿಸಿದೆ ಎಂಬ ಕಾರಣಕ್ಕೆ ಟೆಂಡರ್‌ ರದ್ದುಪಡಿಸಲಾಗಿತ್ತು.

ಬಳಿಕ ಮೂರು ಬಾರಿ ಟೆಂಡರ್‌ ಕರೆದಿದ್ದರೂ ಯಾರೊಬ್ಬರೂ ಭಾಗವಹಿಸಿರಲಿಲ್ಲ. ಹೀಗಾಗಿ 2019ರಲ್ಲಿ ಜಿವಿಕೆ ಹಾಗೂ ತುರ್ತು ಗ್ರೀನ್‌ ಹೆಲ್ತ್‌ ಜತೆ ಒಡಂಬಡಿಕೆ ಆಧಾರದ ಮೇಲೆ ಆ್ಯಂಬುಲೆನ್ಸ್‌ ಸೇವೆ ನೀಡಲಾಗುತ್ತಿದೆ. ತನ್ಮೂಲಕ ಕಳೆದ ಏಳು ವರ್ಷದಿಂದ ಅಧಿಕೃತ ಟೆಂಡರ್‌ ಪಡೆದಿರುವ ಆ್ಯಂಬುಲೆನ್ಸ್‌ ಸೇವಾದಾರ ಸಂಸ್ಥೆ ಇಲ್ಲದಂತಾಗಿದೆ. ಜತೆಗೆ ಕಂಟ್ರೋಲ್‌ ರೂಂ ನಿರ್ವಹಣೆಗೂ ಟೆಂಡರ್‌ ನಡೆದಿಲ್ಲ. ಹೀಗಾಗಿ ರಾಜ್ಯಾದ್ಯಂತ ಆ್ಯಂಬುಲೆನ್ಸ್ ಸೇವೆಯಲ್ಲಿ ಸತತವಾಗಿ ವ್ಯತ್ಯಯ ಉಂಟಾಗುತ್ತಿದ್ದು, 108 ಗುತ್ತಿಗೆ ಸಿಬ್ಬಂದಿ ಪದೇ ಪದೇ ಮುಷ್ಕರಕ್ಕೆ ಮುಂದಾಗುತ್ತಿದ್ದಾರೆ.

ಶೇ.60ರಷ್ಟು ಪ್ರಕರಣದಲ್ಲಿ ತುರ್ತು ಸೇವೆ ಇಲ್ಲ:

108 ಆ್ಯಂಬುಲೆನ್ಸ್‌ ಸೇವೆ ಕುರಿತು 2014-19ರವರೆಗಿನ ಪ್ರಕರಣಗಳ ಬಗ್ಗೆ ಸಿಎಜಿ 2019ರಲ್ಲಿ ವರದಿ ಸಲ್ಲಿಸಿದ್ದು ಶೇ.60ರಷ್ಟು ಎಮರ್ಜೆನ್ಸಿ ಪ್ರಕರಣಗಳಲ್ಲಿ (ಹೃದಯ, ಸ್ಟ್ರೋಕ್‌, ಉಸಿರಾಟ) 108 ಆ್ಯಂಬುಲೆನ್ಸ್‌ ಸೇವೆ ನಿಗದಿತ ಸಮಯಕ್ಕೆ ದೊರೆತಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಅವಧಿಯಲ್ಲಿ ಕಂಟ್ರೋಲ್‌ ರೂಮ್‌ಗೆ 2.5 ಕೋಟಿ ಕರೆಗಳು ಬಂದಿದ್ದವು. 91.6 ಲಕ್ಷ ಟ್ರಯಾಜ್‌ ಮಾಡಲಾಗಿದ್ದು, 51 ಲಕ್ಷ ಎಮರ್ಜೆನ್ಸಿ ಪ್ರಕರಣಗಳಲ್ಲಿ 41.9 ಲಕ್ಷ ಆ್ಯಂಬುಲೆನ್ಸ್‌ ನಿಯೋಜಿಸಲಾಗಿತ್ತು. ಈ ಪೈಕಿ ಶೇ.60 ಪ್ರಕರಣಗಳಲ್ಲಿ ನಿಗದಿತ ಸಮಯದಲ್ಲಿ ಸ್ಪಂದನೆ ದೊರೆತಿಲ್ಲ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಟೆಂಡರ್‌ ರದ್ದುಪಡಿಸಿ ಬೇರೆ ಕಂಪೆನಿಗೆ ಟೆಂಡರ್‌ ನೀಡಲು ನಿರ್ಧರಿಸಲಾಗಿತ್ತು.

ಆದರೆ ಕೋ ಬಂದಿದ್ದರಿಂದ ಒಡಂಬಡಿಕೆ ಆಧಾರದ ಮೇಲೆ 746 ಆ್ಯಂಬುಲೆನ್ಸ್‌ (181 ಅಡ್ವಾನ್ಸ್‌ ಲೈಫ್‌ ಸಪೋರ್ಟ್‌ ಸಹಿತ) ಹಾಗೂ 30 ಬೈಕ್‌ ಆ್ಯಂಬುಲೆನ್ಸ್‌ ನಿರ್ವಹಿಸಲು ಅವಕಾಶ ನೀಡಲಾಗಿತ್ತು. ಆದರೆ ಒಡಂಬಡಿಕೆ ಮಾಡಿಕೊಂಡಿರುವ ಸಂಸ್ಥೆಗೆ ಸರ್ಕಾರ ಕಾಲಕಾಲಕ್ಕೆ ವೇತನ ನೀಡುತ್ತಿದ್ದರೂ ಅವರು ಸಿಬ್ಬಂದಿಗೆ ನೀಡುತ್ತಿಲ್ಲ. ಹೀಗಾಗಿ ಪದೇ ಪದೇ ಮುಷ್ಕರ ನಡೆಸಲಾಗುತ್ತಿದೆ.

ಜತೆಗೆ ಸರ್ಕಾರಿ ಆಸ್ಪತ್ರೆ ಬದಲಿಗೆ ಖಾಸಗಿ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಹೋಗುವುದು. ರೋಗಿಯ ಬಳಿ ಹಣ ಪಡೆಯುವುದು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಖುದ್ದು ಡಿಸಿಎಂ ಡಿ.ಕೆ. ಶಿವಕುಮಾರ್‌ ದೂರು ನೀಡಿದ್ದರು. ಹೀಗಿದ್ದರೂ ಈವರೆಗೆ ಸಮಸ್ಯೆಗೆ ಪರಿಹಾರ ಕಂಡುಕೊಂಡಿಲ್ಲ.

15 ದಿನದಲ್ಲಿ ಟೆಂಡರ್‌ ಕರೆಯಲು ಸಿದ್ಧತೆ: ಆರೋಗ್ಯ ಇಲಾಖೆ

ಈ ಬಗ್ಗೆ ‘ಕನ್ನಡಪ್ರಭ’ ಜತೆ ಮಾತನಾಡಿದ ಆ್ಯಂಬುಲೆನ್ಸ್‌ ಉಸ್ತುವಾರಿ ಹೊತ್ತಿರುವ ಹಿರಿಯ ಅಧಿಕಾರಿಯೊಬ್ಬರು, 2017ರಿಂದ ಟೆಂಡರ್‌ ಕರೆಯದಿರುವುದು ಸತ್ಯ. ಪ್ರಸ್ತುತ ಈ ಕುರಿತು ನ್ಯಾಯಾಲಯದಲ್ಲೂ ಯಾವ ಪ್ರಕರಣವೂ ಬಾಕಿ ಇಲ್ಲ. ತಾಂತ್ರಿಕ ಸಲಹಾ ಸಮಿತಿಯು ಈಗಾಗಲೇ ವರದಿ ನೀಡಿದ್ದು, ಇದರ ಆಧಾರದ ಮೇಲೆ ಹದಿನೈದು ದಿನದಲ್ಲಿ ಹೊಸದಾಗಿ ಟೆಂಡರ್‌ ಕರೆಯಲು ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ತಾಂತ್ರಿಕ ಸಮಿತಿ ವರದಿ ಮಂಡನೆ:

108 ಆರೋಗ್ಯ ಕವಚ ಹಾಗೂ 104 ಆರೋಗ್ಯ ಸಹಾಯವಾಣಿ ಯೋಜನೆಗಳ ಉನ್ನತೀಕರಣ ಹಾಗೂ ಮಾರ್ಗದರ್ಶನಕ್ಕೆ ರಚಿಸಿದ್ದ ಡಾ.ಜಿ. ಗುರುರಾತ್‌ ಅಧ್ಯಕ್ಷತೆಯ ತಾಂತ್ರಿಕ ಸಮಿತಿ ವರದಿ ಸಲ್ಲಿಸಿದೆ.

ಟೆಂಡರ್ ಪ್ರಕ್ರಿಯೆ ಖರೀದಿಯಲ್ಲಿನ ವಿಧಾನ, ಟೆಂಡರ್ ಪ್ಲೋಟಿಂಗ್‌ನಲ್ಲಿನ ನ್ಯೂನತೆ, ಆಕ್ಷೇಪಣೆಗಳು, ತಾಂತ್ರಿಕ ದೋಷ, ಪರಿಶೀಲಿಸಿ ಉತ್ತಮ ಸೇವೆ ನೀಡಲು ವಿಧಿಸಬೇಕಿರುವ ಷರತ್ತುಗಳ ಬಗ್ಗೆ ಸಮಿತಿ ವರದಿ ನೀಡಿದೆ. ಜತೆಗೆ ಉತ್ತಮ ಆರೋಗ್ಯ ಸೇವೆಗೆ ಯಾವ ರೀತಿಯ ಸೌಲಭ್ಯ? ಏನೆಲ್ಲ ತಂತ್ರಜ್ಞಾನ ಇರಬೇಕು? ಯಾವೆಲ್ಲ ಮಾರ್ಗಸೂಚಿ ಸೌಲಭ್ಯ ಅಳವಡಿಸಿಕೊಂಡಿರಬೇಕು ಎಂದು ತಿಳಿಸಿದೆ.