ಸಾರಾಂಶ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಮೆಟ್ರೋ ಬರುತ್ತಿದೆ. ಇದನ್ನು ದೇವನಹಳ್ಳಿವರೆಗೂ ವಿಸ್ತರಿಸಬೇಕೆಂದು ಮುಖ್ಯಮಂತ್ರಿಗಳೊಂದಿಗೆ ಪ್ರಸ್ತಾಪಿಸಿದ್ದು, ಬಜೆಟ್‌ನಲ್ಲಿ ಸೇರಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು
ದೇವನಹಳ್ಳಿ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಮೆಟ್ರೋ ಬರುತ್ತಿದೆ. ಇದನ್ನು ದೇವನಹಳ್ಳಿವರೆಗೂ ವಿಸ್ತರಿಸಬೇಕೆಂದು ಮುಖ್ಯಮಂತ್ರಿಗಳೊಂದಿಗೆ ಪ್ರಸ್ತಾಪಿಸಿದ್ದು, ಬಜೆಟ್‌ನಲ್ಲಿ ಸೇರಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಇಲ್ಲಿನ ಅರುಂಧತಿ ಸೇವಾ ಸಂಸ್ಥೆಯ 12ನೇ ವಾರ್ಷಿಕೋತ್ಸವ ಹಾಗೂ ಪ್ರತಿ ವರ್ಷದಂತೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅರುಂಧತಿ ಸೇವಾ ಸಂಸ್ಥೆಯವರು ಎಲ್ಲ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಅಭಿನಂದನೀಯ. ಸಂಸ್ಥೆಯ ಸಾಮಾಜಿಕ ಸೇವಾ ಕಾರ್ಯಗಳಿಗಾಗಿ ಅಗತ್ಯ ನಿವೇಶನ ಸರ್ಕಾರದಿಂದ ಮಾಡಿಕೊಡಲು ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಹೇಳಿದರು.
ಮಾಜಿ ಶಾಸಕ ಪಿಳ್ಳಮುನಿಶಾಮಪ್ಪನವರ ಮನವಿ ಮೇರೆಗೆ ಡಾ.ಅಂಬೇಡ್ಕರ್ ಭವನ, ವಾಲ್ಮೀಕಿ ಭವನ ಹಾಗೂ ಬಾಬು ಜಗಜೀವನ ರಾಮ್ ಭವನಗಳ ಕಾಮಗಾರಿ ಪೂರ್ಣಗೊಳ್ಳಲು ಅಗತ್ಯ ಅನುದಾನ ಬಿಡುಗಡೆ ಮಾಡಿಸಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ಅರುಂಧತಿ ಸೇವಾ ಸಂಸ್ಥೆಯ ಸದಸ್ಯರನ್ನು ಅಭಿನಂದಿಸಿ, ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಅಪೂರ್ಣಗೊಂಡ ಕಾಮಗಾರಿಗಳನ್ನು ಕೆ.ಎಚ್.ಮುನಿಯಪ್ಪ ಅವರು ಪೂರ್ಣಗೊಳಿಸಬೇಕೆಂದು ಮನವಿ ಮಾಡಿದರು.
ಸಮಾರಂಭದಲ್ಲಿ ಚಿಕ್ಕಬಳ್ಳಾಪುರ ಜಂಡೆ ಬಾಲು ತಂಡದಿಂದ ಜಾನಪದ ಗೀತೆಗಳ ಗಾಯನ ನಡೆಯಿತು.
ಹೊಸಕೋಟೆಯ ಸುಬ್ಬರಾಜು, ಸನ್ನಿಧಿ ಶ್ರೀನಿವಾಸ್, ಬಯಪ ಅಧ್ಯಕ್ಷ ಶಾಂತಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್, ಸಂಘದ ಅಧ್ಯಕ್ಷ ಜಾಲಿಗೆ ಮಿನಿರಾಜು, ಎಂ.ವೆಂಕಟೇಶ್ ಮಾಜಿ ಅಧ್ಯಕ್ಷ ಡಿ.ಎಂ.ವೇಣುಗೋಪಾಲ್ ಇತರರಿದ್ದರು.