ಸಾರಾಂಶ
ಇತ್ತೀಚೆಗೆ ಹಿಟ್ ಆ್ಯಂಡ್ ರನ್ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಲಘಟ್ಟಪುರ ಪೊಲೀಸ್ ಠಾಣೆ ಪಿಎಸ್‌ಐ ಮೆಹಬೂಬ್ ಗುಡ್ಡಹಳ್ಳಿ (40) ಚಿಕಿತ್ಸೆ ಫಲಿಸದೆ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಬೆಂಗಳೂರು : ಇತ್ತೀಚೆಗೆ ಹಿಟ್ ಆ್ಯಂಡ್ ರನ್ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಲಘಟ್ಟಪುರ ಪೊಲೀಸ್ ಠಾಣೆ ಪಿಎಸ್‌ಐ ಮೆಹಬೂಬ್ ಗುಡ್ಡಹಳ್ಳಿ (40) ಚಿಕಿತ್ಸೆ ಫಲಿಸದೆ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ವಿಜಯಪುರ ಮೂಲದ ಮೆಹಬೂಬ್ ಗುಡ್ಡಹಳ್ಳಿ ಅವರು ಕಳೆದ 1 ವರ್ಷದಿಂದ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಇವರ ಸಹೋದರ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಘಟನೆ ವಿವರ:
ಪಿಎಸ್‌ಐ ಮೆಹಬೂಬ್ ಅವರು ಎನ್‌ಡಿಪಿಎಸ್ ಪ್ರಕರಣ ಸಂಬಂಧ ಆನೇಕಲ್ ವ್ಯಾಪ್ತಿಯಲ್ಲಿ ಆರೋಪಿಗಳಾದ ಸಯೀದ್ ವಾಸಿಮ್ ಮತ್ತು ಸಯೀದ್ ಅಮೀರ್‌ನನ್ನು ವಶಕ್ಕೆ ಪಡೆದು ಜೂ.24ರಂದು ತಡರಾತ್ರಿ ಹೋಂಡಾ ಸಿಟಿ ಕಾರಿನಲ್ಲಿ ನಗರಕ್ಕೆ ಕರೆತರುತ್ತಿದ್ದರು. ರಾತ್ರಿ ಸುಮಾರು 2.30ಕ್ಕೆ ಸೂರ್ಯನಗರ ಸಮೀಪದ ಹೆಬ್ಬಗೋಡಿ ವ್ಯಾಪ್ತಿಯಲ್ಲಿ ಬರುವಾಗ ಕಾರು ಕೆಟ್ಟು ನಿಂತಿದೆ. ಈ ವೇಳೆ ಕೆಳಗೆ ಇಳಿದು ಕಾರನ್ನು ಪರಿಶೀಲಿಸುವಾಗ ಹಿಂದಿನಿಂದ ವೇಗವಾಗಿ ಬಂದ ಅಪರಿಚಿತ ಟ್ರಕ್ ಏಕಾಏಕಿ ಮೆಹಬೂಬ್‌ಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಅಪಘಾತದ ಬಳಿಕ ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದರು. ಈ ಹಿಟ್ ಆ್ಯಂಡ್ ರನ್ ಅಪಘಾತ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.