ಸಾರಾಂಶ
ಹೂವಿನಹಡಗಲಿ: ನಾಡಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಜಾತ್ರೆಯು ಗೊರವರ ಸರಪಳಿ ಪವಾಡ, ಕಂಚಿವೀರರ ಭಗಣಿಗೂಟ ಪವಾಡಗಳೊಂದಿಗೆ ಸಂಭ್ರಮದಿಂದ ತೆರೆ ಕಂಡಿತು.
ಕಂಚಿವೀರರನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್ ಸಮ್ಮುಖದಲ್ಲಿ ಗಂಗಿಮಾಳಮ್ಮ ದೇವಸ್ಥಾನದ ಸರಪಳಿ ಪವಾಡ ಕಟ್ಟೆ ಮುಂದೆ ಶನಿವಾರ ಸಂಜೆ ಕ೦ಚಿವೀರರು ಪವಾಡಗಳ ಆಯುಧಗಳನ್ನು ಪೂಜಿಸಿದರು.ಭಗಣಿ ಗೂಟಗಳು, ಚರ್ಮದ ಮಿಣಿಗಳು, ಮುಳ್ಳು, ಖಡ್ಗ, ಸರಪಳಿಗಳು ಸೇರಿದಂತೆ ಆಯುಧಗಳನ್ನು ಪೂಜಿಸಿ, ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್ ಅವರಿಂದ ಕಂಚಿವೀರರು ಭಂಡಾರ ಆಶೀರ್ವಾದ ಪಡೆದರು. ಬಳಿಕ ಪವಾಡಗಳನ್ನು ಪ್ರದರ್ಶಿಸಿದರು.
ಕಟ್ಟಿಗೆಯಿಂದ ಮಾಡಿದ ಭಗಣಿ ಗೂಟವೆಂಬ ಆಯುಧವನ್ನು ಕಂಚಿವೀರರು ಬಲಗಾಲಿನ ಕೆಳಗೆ ಏಳು ಕೋಟಿ, ಏಳು ಕೋಟಿ ಏಳು ಕೋಟಿಗೋ ಎಂದು ಮೈಲಾರಲಿಂಗನ ನಾಮಸ್ಮರಣೆ ಮಾಡುತ್ತಾ ಬಡಿದುಕೊಂಡರು. ನಂತರ ಕಾಲಿನಲ್ಲಿ ರಂಧ್ರ ಕೊರೆದುಕೊ೦ಡು ಚರ್ಮದ ಮಿಣಿ, ಮುಳ್ಳು ದಾಟಿಸಿದರು. ಕಂಚಿವೀರರು ಮೈಲಾರಲಿಂಗ ದೇವರ ಕುರಿತು ಕೈಯಲ್ಲಿ ಖಡ್ಗಗಳನ್ನು, ಹಿಡಿದು ದೇವರ ಮಹಿಮೆ ಹೊಗಳುವ ಒಡಪುಗಳನ್ನು ಹೇಳಿದರು.ಕಂಚಿವೀರರು, ಗೊರವರು ಕಬ್ಬಿಣದ ಸರಪಳಿ ಪವಾಡ, ಕಟ್ಟಿಗೆ ಸರಪಳಿಯನ್ನು ಕಟ್ಟಿ ದೇವರ ನಾಮ ಸ್ಮರಿಸುತ್ತಾ ಸರಪಳಿ ಹರಿಯುತ್ತಾರೆ. ಕಂಚಿವೀರರು, ಗೊರವರು ಸರಪಳಿಗಳನ್ನು ಕಿತ್ತು ಹಾಕುವಾಗ ನೆರೆದಿದ್ದ ಭಕ್ತರು ಮತ್ತು ಗೊರವರ ಢಮರುಗದ ಶಬ್ದ ಪವಾಡ ಮಾಡುವವರಿಗೆ ಹುಮ್ಮಸ್ಸು ತಂದವು.
ವ್ರತ ಮಾಡುವ ಕಂಚಿವೀರರು:ಮೈಲಾರ ಗ್ರಾಮದ ಕ೦ಚಿವೀರರು ವಂಶಪರಂಪಾರ್ಯವಾಗಿ ಪವಾಡಗಳನ್ನು ನಡೆಸಿಕೊ೦ಡು ಬ೦ದಿದ್ದಾರೆ. ಪವಾಡ ಮಾಡುವ ಮುನ್ನಾ ದಿನ ಕಂಚಿವೀರರು ಒಂದು ದಿನದ ಉಪವಾಸ ವ್ರತದಲ್ಲಿರುತ್ತಾರೆ. ವ್ರತಕ್ಕೆ ಭಂಗ ಬಾರದಂತೆ ಅವರ ಮನೆಯಲ್ಲಿ ಮಹಿಳೆಯರು ಇಲ್ಲದಂತೆ ನೋಡಿಕೊಳ್ಳುತ್ತಾರೆ. ಕಾರಣ ಪವಾಡಗಳಿಗೆ ತೊಂದರೆ ಆಗದಂತೆ ಮಡಿ-ಉಡಿಯಿಂದ ಪವಾಡಗಳನ್ನು ಮಾಡುತ್ತೇವೆ ಎನ್ನುತ್ತಾರೆ ಕಂಚಿವೀರರು.
ಯುವಕರು ಪವಾಡ ಮಾಡಲಿ:ಕಂಚಿವೀರರು, ಗೊರವರು ಈ ಪವಾಡಗಳನ್ನು ಮಾಡಿದಾಗ ಮಾತ್ರ ಅವರಿಗೆ ಮದುವೆ ಮಾಡಿಕೊಳ್ಳಲು ಅವಕಾಶವಿದೆ. ಯುವಕರು ಕೂಡ ಪವಾಡ ಮಾಡಬೇಕು ಎನ್ನುತ್ತಾರೆ ವೆಂಕಪ್ಪಯ್ಯ ಒಡೆಯರ್.
ಮೈಲಾರಲಿಂಗೇಶ್ವರ ಕಾರ್ಣಿಕ ಪುಣ್ಯಸ್ಥಳ ಡೆಂಕಣ ಮರಡಿಯಲ್ಲಿ (ಮಣಿಕಾಚೂಲ ಪರ್ವತ) ಅಡಗಿ ಕುಳಿತಿದ್ದ ಮಣಿಕಾಸುರ ಮಲ್ಲಾಸುರ ರಾಕ್ಷಸರನ್ನು ಸಂಹರಿಸಿದ ನಂತರ ದೇವಸ್ಥಾನದ ಬಾಬುದಾರರಾದ ಕಂಚಿವೀರರು ಇಂದಿಗೂ ಭಗಣಿಗೂಟ, ಸರಪಳಿ ಪವಾಡಗಳು ನೆರೆದಿದ್ದ ಭಕ್ತರನ್ನು ರೋಮಾಂಚನಗೊಳಿಸಿದವು.ಹಿಂದಿನ ಕಾಲದಲ್ಲಿ ಶಿರಚ್ಛೇದ ನಡೆಯುತ್ತಿತ್ತು:
ಡೆಂಕಣ ಮರಡಿಯಲ್ಲಿ ರಾಕ್ಷಸರ ಸಂಹಾರದ ನೆನಪಿಗಾಗಿ ಹಿಂದಿನ ಕಾಲದಲ್ಲಿ ಶಿರಚ್ಛೇದ ನಡೆಯುತ್ತಿತ್ತು. ಅಹಿಂಸಾ ಪರಮೋ ಧರ್ಮ ಬಂದ ನಂತರ ಈ ಪದ್ಧತಿ ನಿಲ್ಲಿಸಲಾಗಿದೆ. ಆದಿ ಕರ್ನಾಟಕ ಜನಾಂಗದ ಕಂಚಿವೀರರೆಂದು ಕರೆಯುವ ಇವರು ಭಗಣಿಗೂಟ ಪವಾಡ ಮಾಡುತ್ತಾರೆ. ಗೊರವರು ಸರಪಳಿ ಪವಾಡ ಮಾಡುವುದು ಸಂಪ್ರದಾಯವಾಗಿದೆ ಎನ್ನುತ್ತಾರೆ ದೇವಸ್ಥಾನ ವಂಶ ಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್.