ಸಾರಾಂಶ
ಪ್ರಸರ್ವಣ 2025-ರಾಷ್ಟ್ರೀಯ ಆಯುರ್ವೇದ ಸಮ್ಮೇಳನ ಉದ್ಘಾಟನೆಕನ್ನಡಪ್ರಭ ವಾರ್ತೆ ಕೊಪ್ಪಳ
ಪ್ರತಿಯೊಂದು ರೋಗಕ್ಕೂ ಸಹ ಆಯುರ್ವೇದದಲ್ಲಿ ಅತ್ಯುತ್ತಮ ಚಿಕಿತ್ಸೆ ಇದ್ದು, ಆಯುರ್ವೇದ ವೈದ್ಯರು ಅರಿತು ಚಿಕಿತ್ಸೆ ನೀಡಬೇಕು ಎಂದು ಎಸ್‌ಡಿಎಂ ಆಯುರ್ವೇದ ಮಹಾವಿದ್ಯಾಲಯಗಳ ನಿರ್ದೇಶಕ ಡಾ. ಪ್ರಸನ್ನ ಎನ್. ರಾವ್ ಹೇಳಿದರು.ನಗರದ ಶಿವಶಾಂತ ಮಂಗಲಭವನದಲ್ಲಿ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ರಚನಾ ಶಾರೀರ, ಕ್ರಿಯಾ ಶಾರೀರ, ಕಾಯಚಿಕಿತ್ಸಾ, ಪಂಚಕರ್ಮ ಹಾಗೂ ಶಲ್ಯ ತಂತ್ರ ವಿಭಾಗದಿಂದ ಪ್ರಸರ್ವಣ 2025 ಎಂಬ ಶೀರ್ಷಿಕೆಯಲ್ಲಿ ರಾಷ್ಟ್ರೀಯ ಆಯುರ್ವೇದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ರೋಗಗಳಿಗೆ ಮನೆಮದ್ದಿನಿಂದ ಹಿಡಿದು ಶಸ್ತ್ರ ಚಿಕಿತ್ಸೆಯ ವರೆಗೂ ಆಯುರ್ವೇದ ಚಿಕಿತ್ಸೆಗಳ ಮಹತ್ವವನ್ನು ತಮ್ಮ ದೀರ್ಘ ಅನುಭವಗಳೊಂದಿಗೆ ಹಂಚಿಕೊಂಡರು.
ಆಯುರ್ವೇದದಲ್ಲಿ ‘ಬಸ್ತಿ’ ಅಂದರೆ ಮೂತ್ರವಹ, ಸ್ರೋತಸ್ ಒಂದು ಪ್ರಾಣಾಯತನವಾಗಿದ್ದು, ವೈದ್ಯರು ಆಯುರ್ವೇದ ಮೂಲಕ ಉತ್ತಮ ಚಿಕಿತ್ಸೆ ನೀಡಬಹುದೆಂದರು.ಗುಜರಾತಿನ ಎಂ.ಎ.ಎ. ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಎನ್. ಗುಪ್ತಾ ಮಾತನಾಡಿ, ಆಯುರ್ವೇದವನ್ನು ವೈಜ್ಞಾನಿಕವಾಗಿ ನೋಡುವ ಜತೆಗೆ ವೈದಿಕವಾಗಿಯೂ ತಿಳಿದುಕೊಂಡು ವೈದ್ಯಕೀಯ ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಡಾ. ಶೈಲಜಾ ಮಾತನಾಡಿ, ಚಿಕ್ಕಮಕ್ಕಳಲ್ಲಿ ಆಗುವ ಮೂತ್ರರೋಗಗಳ ಬಗ್ಗೆ ವಿಶ್ಲೇಷಿಸಿದರು.ಸಮ್ಮೇಳನದ ವೈಜ್ಞಾನಿಕ ಗೋಷ್ಠಿಯಲ್ಲಿ ರಾಷ್ಟ್ರೀಯ ಆಯುರ್ವೇದ ಸಂಸ್ಥಾನ, ಜೈಪುರದ ಡಾ. ಸ್ವಪ್ನಾ ಬಿ. ವಿವಿಧ ಮೂತ್ರರೋಗ ಶಸ್ತ್ರ ಚಿಕಿತ್ಸೆ ಸಂಬಂಧಿತ ರೋಗಗಳ ಬಗ್ಗೆ ತಿಳಿಸಿದರು.
ತಿಲಕ ಆಯುರ್ವೇದ ಮಹಾವಿದ್ಯಾಲಯ, ಪುಣೆಯ ಡಾ. ತರನ್ನುಮ್ ಪಟೇಲ್ ಮೂತ್ರ, ಸ್ರೋತೋವಹ ಕ್ರಿಯೆಗಳ ಮೇಲೆ ವಿಶೇಷ ಉಪನ್ಯಾಸ ನೀಡಿದರು.ಮಹಾವಿದ್ಯಾಲಯದ ಕಾರ್ಯಾಧ್ಯಕ್ಷ ಸಂಜಯ ಕೊತಬಾಳ ಹಾಗೂ ಶಾರದಮ್ಮ ಕೊತಬಾಳ ಬಿಬಿಎಂ ಕಾಲೇಜಿನ ನಿರ್ದೇಶಕ ಮಹೇಶ ಮುದುಗಲ್ ಇದ್ದರು. ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಹಾಂತೇಶ ಸಾಲಿಮಠ ಅಧ್ಯಕ್ಷತೆ ವಹಿಸಿದ್ದರು.
ಸಂಘಟಕ ಡಾ. ಕೆ.ಬಿ. ಹಿರೇಮಠ ಸ್ವಾಗತಿಸಿ, ಡಾ. ರಾಜಶೇಖರ ಶೆಟ್ಟರ್ ವಂದಿಸಿದರು. ಉಪಪ್ರಾಂಶುಪಾಲ ಡಾ. ಸುರೇಶ ಹಕ್ಕಂಡಿ ಉಪಸ್ಥಿತರಿದ್ದರು. ಈ ರಾಷ್ಟ್ರೀಯ ಸಮ್ಮೇಳನದಲ್ಲಿ ರಾಜ್ಯದ 400 ಹಾಗೂ ಹೊರ ರಾಜ್ಯದ 15 ಪ್ರತಿನಿಧಿಗಳು ಭಾಗವಹಿಸಿದ್ದರು.