ಬಿರ್ಸಾ ಮುಂಡಾರನ್ನು ಹೆಮ್ಮೆಯಿಂದ ನೆನೆಯಬೇಕು

| Published : Nov 16 2025, 01:15 AM IST

ಸಾರಾಂಶ

ಬ್ರಿಟಿಷರು ಗ್ರಾಮ ನಾಶಪಡಿಸುವುದಾಗಿ ತಿಳಿಸಿದಾಗ ಶರಣಾಗುತ್ತಾರೆ, ನಂತರ ಅವರನ್ನು ಗಲ್ಲಿಗೇರಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಮ್ಮ ಬದುಕಿನ ಮೇಲೆ ಬ್ರಿಟಿಷರ ಮೇಲುಸ್ತುವಾರಿ ಒಪ್ಪುವುದಿಲ್ಲ ಎಂದು ಹೋರಾಡಿ, ಮತಾಂತರವನ್ನು ಪ್ರಶ್ನಿಸಿ ಸನಾತನ ಧರ್ಮದ ಬಗ್ಗೆ ಜನರಿಗೆ ತಿಳಿಸಿದ ಬಿರ್ಸಾ ಮುಂಡಾ ಅವರನ್ನು ಹೆಮ್ಮೆಯಿಂದ ನೆನೆಯಬೇಕು ಎಂದು ಶಾಸಕ ಜನಾರ್ದನ ರೆಡ್ಡಿ ತಿಳಿಸಿದರು.ನಗರದ ಮಾನಸಗಂಗೋತ್ರಿಯ ಸೆನೆಟ್‌ ಭವನದಲ್ಲಿ ಬಿಜೆಪಿಯ ನಗರ ಮತ್ತು ಜಿಲ್ಲಾ ಘಟಕವು ಶನಿವಾರ ಆಯೋಜಿಸಿದ್ದ ಭಗವಾನ್‌ ಬಿರ್ಸಾ ಮುಂಡಾ ಅವರ 150ನೇ ಜನ್ಮ ದಿನೋತ್ಸವವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಬಾಗಲಕೋಟೆಯ ಮುಧೋಳದ ಹಲಗಲಿಯಲ್ಲಿ ವಾಲ್ಮೀಕಿ ಜನಾಂಗಕ್ಕೆ ಸೇರಿದ ನಾಲ್ವರು ಆಯುಧಗಳನ್ನು ಒಪ್ಪಿಸುವುದಿಲ್ಲ ಎಂದು ತಿಳಿಸಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಬ್ರಿಟಿಷರು ಗ್ರಾಮ ನಾಶಪಡಿಸುವುದಾಗಿ ತಿಳಿಸಿದಾಗ ಶರಣಾಗುತ್ತಾರೆ, ನಂತರ ಅವರನ್ನು ಗಲ್ಲಿಗೇರಿಸಲಾಗುತ್ತದೆ. ಶೌರ್ಯ ಮೆರೆದ ಹಲಗಲಿ ಬೇಡರ ಬಗ್ಗೆಯೂ ಕೇಂದ್ರ ಉತ್ತಮ ಯೋಜನೆ ರೂಪಿಸಬೇಕು ಎಂದು ಅವರು ಹೇಳಿದರು.ವಾಲ್ಮೀಕಿ ರಾಮಾಯಣದಲ್ಲಿ ಬರುವ ಸುಂದರಕಾಂಡದ ಘಟನೆಗಳು‌ ನಡೆದಿರುವ ಕಿಷ್ಕಿಂದ ಅರಣ್ಯಕ್ಕೆ ವಾಲ್ಮೀಕಿ ಅಭಯಾರಣ್ಯ ಎಂದು ನಾಮಕರಣ ಮಾಡಲು ಬೇಡಿಕೆ ಇಟ್ಟಿದ್ದು, ಸರ್ಕಾರವು ಸದ್ಯದಲ್ಲೇ ಈ ಬಗ್ಗೆ ಕ್ರಮ ವಹಿಸುವ ಭರವಸೆ ಇದೆ ಎಂದರು.ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಭಗವಾನ್‌ ಬಿರ್ಸಾ ಮುಂಡಾ ಅವರ ಹೋರಾಟವು ಅಧಿಕಾರಕ್ಕಷ್ಟೇ ಸೀಮಿತವಾಗದೆ, ಬ್ರಿಟಿಷರು ಭಾರತೀಯ ಸಂಸ್ಕೃತಿಯನ್ನು ಬದಲಾಯಿಸುವ ವಿರುದ್ಧದ ಆಕ್ರೋಶವಾಗಿ ಹೊರಹೊಮ್ಮಿತು. ಸ್ವಾತಂತ್ರ್ಯ ಹೋರಾಟಕ್ಕೆ ಒಂದೇ ವರ್ಗವಷ್ಟೇ ಶ್ರಮಿಸದೆ, ಅನೇಕ ಸಮುದಾಯಗಳು ಹೋರಾಡಿವೆ. ಅವನ್ನು ನಮ್ಮ ಪಠ್ಯ ತಿಳಿಸದೆ ಘೋರ ಅನ್ಯಾಯ ಮಾಡಿದೆ ಎಂದು ತಿಳಿಸಿದರು.ಸಾಮಾಜಿಕ ಕಾರ್ಯಕರ್ತ ವಾದಿರಾಜ್‌ ಮಾತನಾಡಿ, ವಾಜಪೇಯಿ ಪ್ರಧಾನಿಯಾಗಿದ್ದ ಕಾಲದಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮಾಡಿದರು. ರಾಜ್ಯದಲ್ಲಿ ಬೊಮ್ಮಾಯಿ ಆಡಳಿತಾವಧಿಯಲ್ಲಿ ಈ ಕೆಲಸವಾಯಿತು. ಹೀಗಾಗಿ ಪರಿಶಿಷ್ಟ ಪಂಗಡಕ್ಕೆ ಅಸ್ಮಿತೆ ತಂದುಕೊಟ್ಟಿರುವುದು ಬಿಜೆಪಿ ಎಂಬುದರಲ್ಲಿ ಸಂದೇಹವಿಲ್ಲ. ಬಿಜೆಪಿಯು ಬುಡಕಟ್ಟು ಜನರ ವಿಚಾರ, ಸಂಸ್ಕೃತಿಯ ಪರವಾಗಿ ಕೆಲಸ ಮಾಡಿದ್ದು, ಅದನ್ನು ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಕೆ.ಎನ್. ಸುಬ್ಬಣ್ಣ, ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಮಾಜಿ ‌ಮೇಯರ್‌ ಗಳಾದ ಶಿವಕುಮಾರ್, ಸಂದೇಶ್ ಸ್ವಾಮಿ, ರಾಜ್ಯ ವಕ್ತಾರ ಎಂ.ಜಿ. ಮಹೇಶ್‌, ಮುಖಂಡರಾದ ಮಂಗಳಾ ಸೋಮಶೇಖರ್, ಅಪ್ಪಣ್ಣ, ಸಿದ್ದರಾಜು, ಬಾಲರಾಜ್, ಫಣೀಶ್, ಬಸವರಾಜ, ಕೃಷ್ಣಪ್ಪ, ಮಿರ್ಲೆ ಶ್ರೀನಿವಾಸಗೌಡ, ಶಿವಶಂಕರ್, ಗೋಪಾಲಕೃಷ್ಣ, ಕೇಬಲ್ ಮಹೇಶ್‌, ಬಿ.ಎಂ. ರಘು, ಮಹೇಶ್, ಮುದ್ದುಕೃಷ್ಣ ಮೊದಲಾದವರು ಇದ್ದರು.