ಶಿವಗಿರಿಯ ಶಿವನ ಮೂರ್ತಿಗೆ ಪೂಜೆ ಸಲ್ಲಿಸಲು ಬಂದ ಭಕ್ತಸಾಗರ

| Published : Mar 09 2024, 01:38 AM IST

ಸಾರಾಂಶ

ಮಹಾಶಿವರಾತ್ರಿ ಹಿನ್ನೆಲೆ ವಿಜಯಪುರ ನಗರದ ಹೊರವಲಯದ ಶಿವಗಿರಿಯ ಬೃಹತ್ ಶಿವನಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲು ಭಕ್ತಸಾಗರವೇ ಹರಿದುಬಂತು. ಭಕ್ತಾದಿಗಳು ಶಿವನ ಕೃಪೆಗೆ ಪಾತ್ರರಾಗಲು ಉಪವಾಸ, ಜಪ-ತಪ ಕೈಗೊಂಡರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಹಾ ಶಿವರಾತ್ರಿ ಹಿನ್ನೆಲೆ ನಗರದ ಹೊರವಲಯದ ಶಿವಗಿರಿಯ ಬೃಹತ್ ಶಿವನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲು ಭಕ್ತಸಾಗರವೇ ಹರಿದುಬಂತು. ಭಕ್ತಾದಿಗಳು ಶಿವನ ಕೃಪೆಗೆ ಪಾತ್ರರಾಗಲು ಉಪವಾಸ, ಜಪ-ತಪ ಕೈಗೊಂಡರು.

ನಗರದ ಉಕ್ಕಲಿ ರಸ್ತೆಯಲ್ಲಿರುವ ಶಿವಗಿರಿಯಲ್ಲಿ ಚಲನಚಿತ್ರ ನಿರ್ಮಾಪಕ ಬಸಂತ ಕುಮಾರ ಪಾಟೀಲ ಅವರು 85 ಅಡಿ ಉದ್ದದ ಶಿವನ ಮೂರ್ತಿಯ ದರ್ಶನ ಪಡೆಯಲು ಶಿವರಾತ್ರಿ ಹಿನ್ನೆಲೆ ವಿಜಯಪುರದ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಇಲ್ಲಿ ಬೆಳಗ್ಗೆ 4 ಗಂಟೆಯಿಂದಲೇ ವಿಶೇಷ ಪೂಜೆ ನೇರವೇರಿಸಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ವಿಶ್ವವಿಖ್ಯಾತ ಗೋಲಗುಮ್ಮಟ ವೀಕ್ಷಿಸಲು ಬರುವ ಪ್ರವಾಸಿಗರು ಶಿವಗಿರಿಗೂ ಆಗಮಿಸಿ ದೇಶದ ಎರಡನೇ ಅತಿದೊಡ್ಡ ಶಿವಮೂರ್ತಿಯ ದರ್ಶನ ಪಡೆದುಕೊಂಡಿದ್ದು ವಿಶೇಷವಾಗಿತ್ತು.

ನಗರದೆಲ್ಲೆಡೆ ಶಿವರಾತ್ರಿಯ ಭಕ್ತಿ ಸಂಭ್ರಮ ಮನೆ ಮಾಡಿತ್ತು. ಅನೇಕ ಶಿವಭಕ್ತರು ಶಿವನ ನಾಮಸ್ಮರಣೆ ಮಾಡುತ್ತಾ ಜಪ ಮಾಡಿದರೆ, ಇನ್ನೂ ಕೆಲವು ಭಕ್ತರು ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂಬ ಮಂತ್ರವನ್ನು ನೋಟ್‌ಪುಸ್ತಕದಲ್ಲಿ ಬರೆಯುತ್ತಾ ಶಿವನ ಸ್ಮರಣೆಯಲ್ಲಿ ನಿರತರಾಗಿದ್ದರು.

ಶಿವಭಕ್ತರ ಅನುಕೂಲಕ್ಕಾಗಿ ಸಾರಿಗೆ ಇಲಾಖೆ ಶಿವಗಿರಿಗೆ ವಿಶೇಷ್ ಬಸ್ ಸೇವೆ ಒದಗಿಸಿತ್ತು. ಜತೆಗೆ ಟಂಟಂ, ಕ್ರೂಸರ್, ಬೈಕ್‌ಗಳಲ್ಲಿ ಬೆಳಗ್ಗೆಯಿಂದಲೇ ಭಕ್ತಾದಿಗಳು ಆಗಮಿಸುತ್ತಿರುವ ದೃಶ್ಯ ಕಂಡು ಬಂತು. ಶಿವರಾತ್ರಿ ಪ್ರಯುಕ್ತ ಲಕ್ಷಾಂತರ ಭಕ್ತರು ಶಿವಗಿರಿಗೆ ಭೇಟಿ ನೀಡಿದ್ದರು. ಪ್ರತಿಯೊಂದು ಶಿವಾಲಯಗಳ ಅಕ್ಕಪಕ್ಕ ತೆಂಗಿನಕಾಯಿ, ಬಾಳೆಹಣ್ಣು, ದ್ರಾಕ್ಷಿ ಮುಂತಾದ ಹಣ್ಣುಗಳು, ಕರ್ಪೂರ ಮಾರಾಟ ಭರ್ಜರಿಯಾಗಿ ನಡೆದಿತ್ತು. ಶಿವಗಿರಿ, ಸುಂದರೇಶ್ವರ ದೇವಾಲಯ ಸೇರಿದಂತೆ ಹಲವಾರು ಶಿವ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಶಿಖಾರಖಾನೆ ಬಡಾವಣೆಯಲ್ಲಿ ಶ್ರೀಚಕ್ರ ಹೊಂದಿರುವ ಶಿವಲಿಂಗ ಇರುವ ಶ್ರೀ ಸುಂದರೇಶ್ವರ ದೇವಾಲಯದಲ್ಲಿ ಭಕ್ತರ ದೊಡ್ಡ ಸಂಖ್ಯೆ ಕಂಡು ಬಂತು. ಅಪರೂಪದ ಶಿವಲಿಂಗ ಹೊಂದಿರುವ ಈ ದೇವಾಲಯಕ್ಕೆ ಭಕ್ತಾದಿಗಳು ಬಿರು ಬಿಸಿಲಿನಲ್ಲಿ ದೊಡ್ಡಮಟ್ಟದ ಸರತಿ ಇದ್ದರೂ ಕಾದು, ಭಕ್ತಿಭಾವದಿಂದ ಸುಂದರೇಶ್ವರನ ದರ್ಶನಾಶೀರ್ವಾದ ಪಡೆದು ಪುನೀತರಾದರು.