ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಕೈಲಾಸವಾಸಿ ಪರಮೇಶ್ವರನ ಸ್ಮರಣೆಯ ಮಹಾಶಿವರಾತ್ರಿಯನ್ನು ಜಿಲ್ಲಾದ್ಯಂತ ಶುಕ್ರವಾರ ಅತ್ಯಂತ ಸಡಗರ–ಸಂಭ್ರಮ ಮತ್ತು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀಓಂಕಾರೇಶ್ವರ ದೇವಾಲಯ, ಭಾಗಮಂಡಲದ ಶ್ರೀಭಗಂಡೇಶ್ವರ ದೇವಾಲಯ, ಅಗಸ್ತ್ಯೇಶ್ವರ ಕ್ಷೇತ್ರ ಸೇರಿದಂತೆ ವಿವಿಧ ಶಿವಾಲಯಗಳಲ್ಲಿ ಶಿವಾರಾಧನೆ ಶ್ರದ್ದಾಭಕ್ತಿಯಿಂದ ನಡೆಯಿತು. ಹೋಮ ಹವನಾದಿ, ಅಭಿಷೇಕ, ಮಂತ್ರ ಪಠಣ, ಅಲಂಕಾರ ಪೂಜೆ, ಮಹಾಪೂಜೆ ಸೇರಿದಂತೆ ವಿಶೇಷ ಧಾರ್ಮಿಕ ಕೈಂಕರ್ಯಗಳೊಂದಿಗೆ ಪರಶಿವನನ್ನು ಪೂಜಿಸಲಾಯಿತು.ಭಕ್ತರು ಉಪವಾಸ ವ್ರತದೊಂದಿಗೆ ಶಿವ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ವಿವಿಧ ದೇವಾಲಯಗಳಲ್ಲಿ ರಾತ್ರಿಯಿಡೀ ಜಾಗರಣೆ, ಭಜನೆ ಹಾಗೂ ಶಿವನಾಮ ಸ್ಮರಣೆ, ಭಕ್ತಿ ಪ್ರಧಾನ ಕಾರ್ಯಕ್ರಮಗಳು ನಡೆಯಿತು.ಗೌರಿ ಶಂಕರ ದೇವಾಲಯದಲ್ಲಿ ವಿಶೇಷ ಪೂಜೆ :ಮಡಿಕೇರಿ ಸಮೀಪದ ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ಸಾವಿರಾರು ಮಹಾ ಶಿವರಾತ್ರಿ ಆಚರಣೆ ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಶಿವರಾತ್ರಿ ಹಿನ್ನೆಲೆ ದೇವಾಲಯದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪುಜಾ ಕೈಂಕರ್ಯಗಳು ನೆರವೇರಿತು.ಗ್ರಾಮದ 8 ದಿಕ್ಕುಗಳಿಂದ ಈಶ್ವರ ಆರಾಧನೆಯ ವಿಶೇಷ ಸೇವೆಯಾಗಿ ಆಕರ್ಷಣಿಯವಾಗಿ ಹೊರೆ ಕಾಣಿಕೆ ಮೆರವಣಿಗೆ ನಡೆಯಿತು. ದಿಕ್ಕುಗಳಿಂದ ಮಹಿಳೆಯರು ಗ್ರಾಮದ 8 ಬರಿಗಾಲಿನಲ್ಲಿ ಹೊರೆಕಾಣಿಕೆಯ ಬುಟ್ಟಿಯನ್ನು ತಲೆಯ ಮೇಲೆ ಹೊತ್ತು ಅಕ್ಕಿ, ದೀಪದ ಎಣ್ಣೆ, ಅಡುಣೆ ಎಣ್ಣೆ, ವಿವಿಧ ಬಗೆಯ ತರಕಾರಿ, ಹೂವು, ಹಣ್ಣುಗಳು ಸೇರಿದಂತೆ ವಿವಿಧ ಸಾಮಾಗ್ರಿಗಳನ್ನು ಈಶ್ವರನಿಗೆ ಅರ್ಪಿಸಿದ್ದು ವಿಶೇಷವಾಗಿತ್ತು. ಚಂಡೆಮೇಳದೊಂದಿಗೆ ನಡೆಯುವ ಈ ಮೆರವಣಿಗೆಯಲ್ಲಿ ಗ್ರಾಮದ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.ದೇವಾಲಯಲ್ಲಿ ಬೆಳಗ್ಗಿನಿಂದಲೇ ಗಣಪತಿ ಹೋಮ, ಈಶ್ವರನಿಗೆ ರುದ್ರಾಭಿಷೇಕ, ಮಹಾ ಮೃತ್ಯುಂಜಯ ಹೋಮ ನಡೆಯಿತು. ದೇವಾಲಯದ ಅರ್ಚಕರಾದ ಕೃಷ್ಣ ಭಟ್ ಮತ್ತು ಮಡಿಕೇರಿಯ ರಾಧಾಕೃಷ್ಣ ಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ಮಧ್ಯಾಹ್ನ ಮಹಾಪೂಜೆಯ ನಂತರ ನೆರೆದಿದ್ದ ಸಹಸ್ರಾರು ಭಕ್ತರಿಗೆ ಅನ್ನದಾನ ನೆರವೇರಿತು.