ಶಿರಸಿ, ಬನವಾಸಿಯಲ್ಲಿ ಭಾರತ್ ಅಕ್ಕಿ ಮಾರಾಟ

| Published : Feb 13 2024, 12:48 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷೆಯ ಭಾರತ್ ಅಕ್ಕಿ ಸೋಮವಾರದಿಂದ ಶಿರಸಿಯಲ್ಲೂ ಮಾರಾಟಕ್ಕೆ ಲಭ್ಯವಾಗಿದ್ದು, ಜನರು ಮುಗಿಬಿದ್ದು ಅಕ್ಕಿ ಖರೀದಿಸಿದರು.‌

ಶಿರಸಿ:

ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷೆಯ ಭಾರತ್ ಅಕ್ಕಿ ಸೋಮವಾರದಿಂದ ಶಿರಸಿಯಲ್ಲೂ ಮಾರಾಟಕ್ಕೆ ಲಭ್ಯವಾಗಿದ್ದು, ಜನರು ಮುಗಿಬಿದ್ದು ಅಕ್ಕಿ ಖರೀದಿಸಿದರು.‌

ಕೇಂದ್ರ ಸರ್ಕಾರ ಭಾರತ್ ಅಕ್ಕಿ ಹೆಸರಿನಲ್ಲಿ ತನ್ನದೇ ಬ್ರಾಂಡ್ ಮೂಲಕ ಅಕ್ಕಿಯನ್ನು ಮಾರಾಟಕ್ಕೆ ಮುಂದಾಗಿದೆ. ಜಿಲ್ಲೆಯ ವಿವಿಧೆಡೆ ಈಗಾಗಲೇ ಅಕ್ಕಿ ಮಾರಾಟ ಮಾಡಲಾಗಿದ್ದು, ಶಿರಸಿಯಲ್ಲೂ ಈಗ ಮಾರಾಟ ಆರಂಭವಾಗಿದೆ. ಮುಂದಿನ ದಿನದಲ್ಲಿ ನಗರದ ವಿವಿಧ ಭಾಗದಲ್ಲಿ ಅಕ್ಕಿ ಮಾರಾಟ ನಡೆಯಲಿದೆ.‌

ಒಂದು ಕೆಜಿಗೆ ₹ ೨೯ರಂತೆ ಅಕ್ಕಿ ಮಾರಾಟ ನಡೆಸಲಾಗುತ್ತಿದೆ. ನಗರದ ದೇವಿಕೆರೆಯಲ್ಲಿ ಸೋಮವಾರ ಮೊದಲ ಬಾರಿಗೆ ಮಾರಾಟ ಮಾಡಲಾಯಿತು. ಜನರು ಟೋಕನ್ ಪಡೆದು ಅಕ್ಕಿ ಖರೀದಿಸಿದರು. ಬಿಜೆಪಿಯ ಪ್ರಮುಖರು ಅಕ್ಕಿ ಪಡೆದು ಸರ್ಕಾರದ ಕ್ರಮವನ್ನು ಶ್ಲಾಘಿಸಿದರು. ಜನರೂ ಸಹ ಉತ್ತಮ ಗುಣಮಟ್ಟದ ಅಕ್ಕಿ ಕಡಿಮೆ ದರದಲ್ಲಿ ಲಭ್ಯವಾಗಿದ್ದನ್ನು ಸಂಭ್ರಮಿಸಿದರು.ಇನ್ನು ಭಾರತ್ ಬ್ರ್ಯಾಂಡ್ ಅಕ್ಕಿಯನ್ನು ತಾಲೂಕಿನ ಬನವಾಸಿಯಲ್ಲೂ ಕದಂಬ ವೃತ್ತದಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡಲಾಯಿತು. ಒಂದು ಕೆಜಿ ಅಕ್ಕಿಯನ್ನು ಕೇವಲ ₹ 29ರಂತೆ 10 ಕೆಜಿ ಅಕ್ಕಿ ಇರುವ ಬ್ಯಾಗ್ ಅನ್ನು ₹ 290ರಂತೆ ಸಾರ್ವಜನಿಕರಿಗೆ ನೀಡಲಾಯಿತು. ಕಡಿಮೆ ಬೆಲೆಗೆ ಅಕ್ಕಿ ನೀಡುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಪಟ್ಟಣ ಹಾಗೂ ಹಳ್ಳಿ ಜನರು ಅಕ್ಕಿ ಕೊಳ್ಳಲು ಮುಗಿಬಿದ್ದರು. ಬೈಕ್, ಆಟೋ, ಕಾರುಗಳಲ್ಲಿ ಜನರು 5-6 ಮೂಟೆ ತುಂಬಿಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿತ್ತು. 5 ಟನ್ ಗಳಷ್ಟು ಅಕ್ಕಿ ಕೇವಲ ಎರಡ್ಮೂರು ಗಂಟೆಗಳಲ್ಲೇ ಖಾಲಿಯಾಗಿದ್ದು, ಹಲವಾರು ಜನ ಅಕ್ಕಿ ಕೊಳ್ಳಲಾಗದೆ ಬೇಸರದಿಂದ ಬರೀ ಕೈಯಲ್ಲಿ ಹಿಂತಿರುಗುವಂತಾಯಿತು.

ಮಂಗಳವಾರ ಬೆಳಗ್ಗೆ 11 ಗಂಟೆಗೆ ಶಿವಾಜಿ ಸರ್ಕಲ್ ಹಾಗೂ ವಿಕಾಸಾಶ್ರಮ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಅಕ್ಕಿ ಖರೀದಿಸಬೇಕು ಎಂದು ಸಂಸದರ ಕಚೇರಿಯವರು ವಿನಂತಿಸಿದ್ದಾರೆ.