ಸರ್ಕಾರಿ ಶಾಲೆಯಲ್ಲಿ ಭಾರತ ಸೇವಾದಳದ ಶಾಖೆ ಉದ್ಘಾಟನೆ

| Published : Feb 19 2024, 01:32 AM IST

ಸರ್ಕಾರಿ ಶಾಲೆಯಲ್ಲಿ ಭಾರತ ಸೇವಾದಳದ ಶಾಖೆ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಿಪುರದಮೋಳೆ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸೇವಾದಳದ ವತಿಯಿಂದ ಕಲ್ಪವೃಕ್ಷ ಹೆಸರಿನಲ್ಲಿ ಶಾಖೆ ಉದ್ಘಾಟಿಸಲಾಯಿತು. ಭಾರತ ಸೇವಾದಳದ ಜಿಲ್ಲಾಧ್ಯಕ್ಷ ವೆಂಕಟನಾಗಪ್ಪಶೆಟ್ಟಿ ಶಾಖೆ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚನ್ನಿಪುರದಮೋಳೆ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸೇವಾದಳದ ವತಿಯಿಂದ ಕಲ್ಪವೃಕ್ಷ ಹೆಸರಿನಲ್ಲಿ ಶಾಖೆ ಉದ್ಘಾಟಿಸಲಾಯಿತು. ಭಾರತ ಸೇವಾದಳದ ಜಿಲ್ಲಾಧ್ಯಕ್ಷ ವೆಂಕಟನಾಗಪ್ಪಶೆಟ್ಟಿ ಶಾಖೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇಂದು ಸೇವೆಗಾಗಿ ಬಾಳು ಶೀರ್ಷಿಕೆಯಡಿಯಲ್ಲಿ ಸೇವಾದಳದ ಶಾಖೆಯನ್ನು ಉದ್ಘಾಟಿಸಲಾಗಿದೆ.

ಮಕ್ಕಳು ಸೇವಾದಳಗಳಾಗಿ ಹೊರಹೊಮ್ಮಿ, ಮುಂದಿನ ದಿನಗಳಲ್ಲಿ ಸೇವಾದಳದದಲ್ಲಿ ಭಾಗಿಯಾಗಿ ಇದರ ಧ್ಯೇಯೋದ್ದೇಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶುಭಾಶಯ ಕೋರುವ ಮೂಲಕ ತಮ್ಮ ಆಶಾಭಾವನೆ ವ್ಯಕ್ತಪಡಿಸಿದರು. ಮಕ್ಕಳು ಓದಿನ ಬಗ್ಗೆ ಹೆಚ್ಚು ಕಾಳಜಿ ವಹಿಸಿ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದ ಅವರು, ಸೇವಾದಳದಲ್ಲಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸುವ ಭರವಸೆ ನೀಡಿದರು.

ಮುಂದಿನ ದಿನಗಳಲ್ಲಿ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಭಾರತ ಸೇವಾದಳದ ಶಾಖೆಗಳನ್ನು ಪ್ರಾರಂಭಿಸಲಾಗುವುದು. ಇದರಿಂದ ಮಕ್ಕಳಿಗೆ ಸಾಕಷ್ಟು ಸಹಕಾರಿಯಾಗಲಿದೆ ಎಂದರು. ಬಿಇಒ ಉತ್ತಮ ಅಧಿಕಾರಿಗಳಾಗಿದ್ದು, ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಇಂತಹ ಅಧಿಕಾರಿಗಳು ಇದ್ದಾಗ ಮಾತ್ರ ಈ ರೀತಿ ಸಂಸ್ಥೆಗಳು ಬೆಳೆಯಲು ಸಾಧ್ಯ ಎಂದರು. ನಗರಸಭೆ ಸದಸ್ಯೆ ಭಾಗ್ಯಮ್ಮ ಧ್ವಜಾರೋಹಣ ನೆರವೇರಿಸಿದರು. ಮಕ್ಕಳು ನಾಡಗೀತೆ, ರಾಷ್ಟ್ರಗೀತೆ ಹಾಡಿದರು. ಇದೇ ಸಂದರ್ಭದಲ್ಲಿ ಮಕ್ಕಳಿಂದ ಸಂವಿಧಾನ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಐಎನ್‌ಎ ರಾಮರಾವ್ ಅವರ ಪುಣ್ಮಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಬಿಇಒ ಸೋಮಣ್ಣೇಗೌಡ ಮಾಲಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಸೋಮಣ್ಣೇಗೌಡ, ಸರಳ ಹಾಗೂ ಅರ್ಥಪೂರ್ಣ ಕಾರ್ಯಕ್ರಮ ರೂಪಿಸಲಾಗಿದೆ. ಇದು ಉತ್ತಮ ವೇದಿಕೆ ಎಂದರು. ಈ ಶಾಲೆ ಮೊದಲಿನಿಂದಲೂ ಗುರುತಿಸಿಕೊಂಡಿದ್ದ ಶಾಲೆ ಸ್ವಲ್ಪ ಸಮಯದಿಂದ ಕುಂಟಿತಗೊಂಡಿತ್ತು. ಮತ್ತೆ ಈಗ ಕಾರ್ಯಪ್ರವೃತ್ತರಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಕೆಲವು ಮೂಲ ಸೌಕರ್ಯಗಳ ಕೊರತೆ ಇದೆ. ಹಂತ ಹಂತವಾಗಿ ಭೌತಿಕವಾಗಿ ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸೋಣ ಎಂದು ತಿಳಿಸಿದರು. ಎಇಇ ನಟರಾಜು ಮಾತನಾಡಿ, ನಾನು ಈ ಶಾಲೆಯ ವಿದ್ಯಾರ್ಥಿ. ನಾವು ಓದುವ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಶಿಕ್ಷಕರ ಕೊರತೆ ಇತ್ತು. ಅಂತಹ ಸಂದರ್ಭಗಳಲ್ಲೂ ಕಷ್ಟ ಪಟ್ಟು ಓದುವ ಮೂಲಕ ಉನ್ನತವಾದ ಸ್ಥಾನವನ್ನು ಅಲಂಕರಿಸಿದ್ದೇನೆ. ಹಾಗೆಯೇ ನೀವು ಕೂಡಾ ಉತ್ತಮವಾಗಿ ಓದಿ ಸಮಾಜಕ್ಕೆ ಸಹಾಯ ಮಾಡುವ ಮೂಲಕ ಮಾದರಿ ವ್ಯಕ್ತಿಗಳಾಗಬೇಕು ಎಂದರು. ಭಾರತ ಸೇವಾದಳದ ಕೋಶಾಧ್ಯಕ್ಷ ವಿ. ಶ್ರೀನಿವಾಸ ಪ್ರಸಾದ್ ಮಾತನಾಡಿ, ವಿಧ್ಯಾರ್ಥಿಗಳು ಶಾಲಾ ಮಟ್ಟದಲ್ಲಿ ಮುಖ್ಯವಾಗಿ ಶಿಸ್ತು, ಸಂಯಮ, ಏಕಾಗ್ರತೆಯನ್ನು ಬೆಳೆಸಿಕೊಳ್ಳಬೇಕು.

ಇದು ನಿಮ್ಮ ಉಜ್ವಲ ಭವಿಷ್ಯ ರೂಪಿಸಲು ಸಹಕಾರಿಯಗಲಿದೆ ಎಂದರು. ಈ ಶಾಲೆಯಲ್ಲಿ ಸೇವಾದಳದ ಶಾಖೆ ಪ್ರಾರಂಭಿಸಲಾಗಿದೆ. ನಗರದಾದ್ಯಂತ ಇರುವ ಎಲ್ಲಾ ಶಾಲೆಗಳಲ್ಲೂ ಒಂದೊಂದು ಶಾಖೆಯನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸಲಾಗುವುದು ಎಂದರು.

ದಾನಿಗಳಿಗೆ ಸನ್ಮಾನ:

ಶಾಲೆಗೆ ಸ್ಮಾರ್ಟ್ ಟಿವಿ ಹಾಗೂ ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸಿದ ಯೂತ್ ಫಾರ್ ಸೇವಾ ಟ್ರಸ್ಟ್‌ನ ಚಾಮರಾಜನಗರ ಜಿಲ್ಲಾ ಕೋ-ಆರ್ಡಿನೇಟರ್ ವಿಷ್ಣು ಹಾಗೂ ಶಾಲಾ ಮಕ್ಕಳಿಗೆ ಬ್ಯಾಂಡ್‌ಸೆಟ್ ಕೊಡುಗೆ ನೀಡಿದ ನಗರಸಭೆ ಎಇಇ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ನಟರಾಜು ಹಾಗೂ ಮಕ್ಕಳಿಗೆ ಟೈ ಹಾಗೂ ಬೆಲ್ಟ್‌ಗಳನ್ನು ನೀಡಿದ ಸಮಾಜ ಸೇವಕರಾದ ಡಾ. ಪರಮೇಶ್ವರಪ್ಪ, ಸುರೇಶ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಭಾರತ ಸೇವಾದಳದ ಜಿಲ್ಲಾ ಸಂಘಟಕ ಅರುಣ್, ಜಿಲ್ಲಾ ಕಾರ್ಯದರ್ಶಿ ಮಹದೇವ್, ತಾಲೂಕು ಅಧಿನಾಯಕ ನಾಗಣ್ಣ, ಗ್ರಾಮದ ಯಜಮಾನರಾದ ಜಯಶಂಕರ್, ದೈಹಿಕ ಪರಿವೀಕ್ಷಕ ಬಸವರಾಜು, ಯೂತ್ ಫಾರ್ ಸೇವಾ ಟ್ರಸ್ಟ್‌ನ ಸದಸ್ಯ ಮನೋಜ್, ಮುಖ್ಯ ಶಿಕ್ಷಕ ಬಸವಣ್ಣ, ರಾಜ್ಯ ಗ್ರೇಡ್-೨ ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಜೋಸೆಫ್, ಶಿಕ್ಷಕರಾದ ಕಮಲಮ್ಮ, ಜ್ಯೋತಿ, ಪದ್ಮಾ, ಪ್ರಿಯದರ್ಶಿನಿ ಮತ್ತಿತರರಿದ್ದರು.