ಎಂದಿನಂತೆ ಸಾಗಿದ ಭಟ್ಕಳ ಹಳೇ ಮೀನು ಮಾರ್ಕೆಟ್ ವ್ಯಾಪಾರ

| Published : Sep 13 2025, 02:05 AM IST

ಸಾರಾಂಶ

ಪುರಸಭೆಯ ಈ ನಿರ್ಧಾರಕ್ಕೆ ಹಳೇ ಮೀನು ಮಾರುಕಟ್ಟೆಯ ಮೀನು ಮಾರಾಟಗಾರರು, ಅಂಗಡಿಕಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಭಟ್ಕಳ: ಪಟ್ಟಣದ ವಾರದ ಸಂತೆ ಮಾರುಕಟ್ಟೆ ಸನಿಹದಲ್ಲಿ ಹೊಸ ಮೀನು ಮಾರುಕಟ್ಟೆ ಸೆ.1ರಿಂದ ಆರಂಭಗೊಂಡಿದ್ದರೂ ಹಳೇ ಬಸ್ ನಿಲ್ದಾಣದ ಸನಿಹದ ಹಳೇ ಮೀನು ಮಾರುಕಟ್ಟೆಯ ವ್ಯಾಪಾರ ವಹಿವಾಟಿನಲ್ಲಿ ಯಾವುದೇ ರೀತಿಯಲ್ಲಿ ಹೊಡೆತ ಬೀಳದೇ ಎಂದಿನಂತೆ ಮೀನು ವ್ಯಾಪಾರ ನಡೆಯುತ್ತಿದೆ.

ಪುರಸಭೆಯವರು ಸೆ.1ರಿಂದ ಸಂತೆ ಮಾರುಕಟ್ಟೆ ಸನಿಹದ ಹೊಸ ಮೀನು ಮಾರುಕಟ್ಟೆಗೆ ಹಳೇ ಬಸ್ ನಿಲ್ದಾಣದ ಸನಿಹದ ಹಳೇ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುವವರು ಸ್ಥಳಾಂತರವಾಗಬೇಕು ಎಂದು ಹೇಳಿದ್ದರು. ಪುರಸಭೆಯ ಈ ನಿರ್ಧಾರಕ್ಕೆ ಹಳೇ ಮೀನು ಮಾರುಕಟ್ಟೆಯ ಮೀನು ಮಾರಾಟಗಾರರು, ಅಂಗಡಿಕಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಖುದ್ದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹಳೇ ಮೀನು ಮಾರುಕಟ್ಟೆಗೆ ಭೇಟಿ ನೀಡಿ ಮೀನು ಮಾರುಕಟ್ಟೆ ಹೊಸ ಮೀನು ಮಾರುಕಟ್ಟೆಗೆ ಸ್ಥಳಾಂತರ ಮಾಡುವುದಿಲ್ಲ ಎಂದಿದ್ದರಲ್ಲದೇ ಹಳೇ ಮೀನು ಮಾರುಕಟ್ಟೆಗೆ ಮೂಲಭೂತ ಸೌಕರ್ಯ ಒದಗಿಸುವ ಭರವಸೆ ನೀಡಿ ಮೀನು ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಹೇಳಿದ್ದರು. ಯಾವುದೇ ಕಾರಣಕ್ಕೂ ನೀವು ಭಯಪಡುವುದು ಬೇಡ ನಿಮ್ಮ ಜತೆ ನಾನಿದ್ದೇನೆಂದು ಮೀನು ಮಾರಾಟ ಮಹಿಳೆಯರಿಗೆ ಧೈರ್ಯ ತುಂಬಿದ್ದರು. ಸೆ.1ರಂದು ಸಂತೆ ಮಾರುಕಟ್ಟೆ ಸನಿಹದ ಹೊಸ ಮೀನುಮಾರುಕಟ್ಟೆ ಆರಂಭಗೊಂಡಿತ್ತು. ಹೊಸ ಮೀನು ಮಾರುಕಟ್ಟೆಯಲ್ಲಿ ಮೀನು ವ್ಯಾಪಾರ ಆರಂಭವಾಗಿದ್ದರೂ ಕಳೆದ ಹಲವು ವರ್ಷಗಳಿಂದ ಇರುವ ಹಳೇ ಮೀನುಮಾರುಕಟ್ಟೆಯಲ್ಲಿ ಎಂದಿನಂತೆ ಮೀನುಮಾರಾಟವೂ ಮುಂದುವರಿದಿದೆ.

ಹೊಸ ಮೀನು ಮಾರುಕಟ್ಟೆಯಿಂದಾಗಿ ಹಳೇ ಬಸ್ ನಿಲ್ದಾಣದ ಹಳೇ ಮೀನು ಮಾರುಕಟ್ಟೆಯಲ್ಲಿನ ವ್ಯಾಪಾರ ವಹಿವಾಟು ಕಡಿಮೆ ಆಗಲಿದೆ ಎನ್ನುವ ಮಾತು ವ್ಯಕ್ತವಾಗಿತ್ತು. ಆದರೆ ಹೊಸ ಮೀನು ಮಾರುಕಟ್ಟೆಯ ಆರಂಭದಿಂದ ಹಳೇ ಮೀನು ಮಾರುಕಟ್ಟೆಯಲ್ಲಿನ ವ್ಯಾಪಾರ ವಹಿವಾಟಿಗೆ ಯಾವುದೇ ರೀತಿಯ ಹೊಡೆಯ ಬಿದ್ದಿಲ್ಲ ಎಂದು ಮೀನು ಮಾರಾಟಗಾರರು ಹೇಳಿದ್ದು, ಮೀನು ಮಾರುಕಟ್ಟೆಯಲ್ಲಿ ದಿನಂಪ್ರತಿ ಹೇಗೆ ಗ್ರಾಹಕರು ಬರುತ್ತಿದ್ದರೋ ಅದೇ ರೀತಿ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಮೀನುಗಾರ ಮಹಿಳೆಯರು ಹಳೇ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುತ್ತಿದ್ದು, ಈ ಮಾರುಕಟ್ಟೆಯನ್ನು ಸ್ಥಳಾಂತರ ಮಾಡದೇ ಇಲ್ಲಿಯೇ ಮುಂದುವರಿಸಿ ಹಳೇ ಮೀನು ಮಾರುಕಟ್ಟೆಗೆ ಮೂಲಭೂತ ಸೌಕರ್ಯ ಒದಗಿಸುವ ಕೆಲಸ ಆಗುವುದರ ಜೊತೆಗೆ ದಿನಂಪ್ರತಿ ಸ್ವಚ್ಛತೆಗೆ ಕ್ರಮ ಆಗಬೇಕು. ಮೀನು ಮಾರಾಟಕ್ಕೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಸೇರಿದಂತೆ ಕಟ್ಟಡ ದುರಸ್ತಿ ಮಾಡಿಕೊಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ಒಂದೊಮ್ಮೆ ಪುರಸಭೆಯವರು ಸಂತೆ ಮಾರುಕಟ್ಟೆ ಸನಿಹದಲ್ಲಿ ಆರಂಭಿಸಿರುವ ಹೊಸ ಮೀನುಮಾರಕಟ್ಟೆಗೆ ಹೆದ್ದಾರಿ ಮತ್ತಿತರ ರಸ್ತೆ ಬದಿಯಲ್ಲಿ ಕುಳಿತುಕೊಳ್ಳುವ ಮೀನು ಮಾರಾಟಗಾರರನ್ನು ಸ್ಥಳಾಂತರಿಸುವ ಕೆಲಸ ಮಾಡಿದರೆ ಅಲ್ಲಿಯೂ ಕೂಡ ಮೀನು ವ್ಯಾಪಾರ ವೃದ್ಧಿಯಾಗಲು ಅನುಕೂಲವಾಗಲಿದೆ.ಪಟ್ಟಣಕ್ಕೆ ಜನಸಂಖ್ಯೆಗನುಗುಣವಾಗಿ ಎರಡು ಮೀನು ಮಾರುಕಟ್ಟೆ ಅಗತ್ಯವಿದ್ದು, ಜನರಿಗೆ ಎಲ್ಲಿ ಅನುಕೂಲವೋ ಅಲ್ಲಿ ಮೀನು ಖರೀಧಿಸಲು ಅನುಕೂಲವಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಭಟ್ಕಳದ ಹಳೇ ಬಸ್ ನಿಲ್ದಾಣದ ಹಳೇ ಮೀನು ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ಮೀನು ಮಾರಾಟ ಯಶಸ್ವಿಯಾಗಿ ನಡೆಯುತ್ತಿದೆ. ಇದನ್ನು ಪುರಸಭೆ ಯಾವುದೇ ಕಾಠಣಕ್ಕೂ ಸ್ಥಳಾಂತರಿಸದೇ ಈ ಮಾರುಕಟ್ಟೆಯನ್ನು ಸುಸಜ್ಜಿತಗೊಳಿಸಿ ಅಗತ್ಯ ಮೂಲಭೂತ ವ್ಯವಸ್ಥೆ ಒದಗಿಸಿ ಪ್ರತಿನಿತ್ಯ ಸ್ವಚ್ಛತೆಗೆ ಆದ್ಯತೆ ನೀಡಿ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ಭಟ್ಕಳ ಪುರಸಭೆ ಮಾಜಿ ಸದಸ್ಯ ಕೃಷ್ಣ ನಾಯ್ಕ ಆಸರಕೇರಿ.