ಎಪಿಎಂಸಿಗೆ ಸೇರಿದ 18 ಗುಂಟೆ ಜಾಗ ಕಬಳಿಸಲು ಭಟ್ಟಭದ್ರರ ಸಂಚು: ಸಾರ್ವಜನಿಕರ ಆರೋಪ

| Published : Feb 23 2025, 12:31 AM IST

ಎಪಿಎಂಸಿಗೆ ಸೇರಿದ 18 ಗುಂಟೆ ಜಾಗ ಕಬಳಿಸಲು ಭಟ್ಟಭದ್ರರ ಸಂಚು: ಸಾರ್ವಜನಿಕರ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಆರ್.ಪೇಟೆ ಪಟ್ಟಣದ ಹೃದಯಭಾಗ ಮೈಸೂರು- ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯ ಪಕ್ಕದ ತಾಲೂಕು ಎಪಿಎಂಸಿ ಮಾರುಕಟ್ಟೆಗೆ ಸೇರಿದ 22 ಎಕರೆ ವಿಸ್ತೀರ್ಣ ಹೊಂದಿದೆ. ಈ ನಡುವೆ ಎಪಿಎಂಸಿಗೆ ಸೇರಿದ ಸರ್ವೇ ನಂ 265/2 ಜಾಗದಲ್ಲಿ 18 ಗುಂಟೆ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ನಾಗಮಂಗಲ ಮೂಲದ ಪ್ರಭಾವಿ ರಾಜಕಾರಣಿ ಲಕ್ಷ್ಮೀನಾರಾಯಣ ಎನ್ನುವವರು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸೇರಿದ ಎರಡು ಕೋಟಿ ರು. ಬೆಲೆ ಬಾಳುವ 18 ಗುಂಟೆ ಜಾಗವನ್ನು ಪಟ್ಟಭದ್ರ ಹಿತಾಸಕ್ತಿಗಳು ಕಬಳಿಸಲು ಸಂಚು ನಡೆಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪಟ್ಟಣದ ಹೃದಯಭಾಗ ಮೈಸೂರು- ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯ ಪಕ್ಕದ ತಾಲೂಕು ಎಪಿಎಂಸಿ ಮಾರುಕಟ್ಟೆಗೆ ಸೇರಿದ 22 ಎಕರೆ ವಿಸ್ತೀರ್ಣ ಹೊಂದಿದೆ. ಈ ನಡುವೆ ಎಪಿಎಂಸಿಗೆ ಸೇರಿದ ಸರ್ವೇ ನಂ 265/2 ಜಾಗದಲ್ಲಿ 18 ಗುಂಟೆ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ನಾಗಮಂಗಲ ಮೂಲದ ಪ್ರಭಾವಿ ರಾಜಕಾರಣಿ ಲಕ್ಷ್ಮೀನಾರಾಯಣ ಎನ್ನುವವರು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಎಪಿಎಂಸಿ ತನ್ನ ಆಸ್ತಿ ಸಂರಕ್ಷಣೆಗಾಗಿ ದೂರು ನೀಡಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಈ ನಡುವೆ ಲಕ್ಷ್ಮೀನಾರಾಯಣ ಎನ್ನುವವರು ದಬ್ಬಾಳಿಕೆ ಮೂಲಕ ಕಾಂಪೌಂಡ್ ಒಡೆದು 18 ಗುಂಟೆ ಸರ್ಕಾರಿ ಭೂಮಿ ವಶಪಡಿಸಿಕೊಳ್ಳಲು ಮುಂದಾದ ಹಿನ್ನೆಲೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ಸತೀಶ್ ಪಟ್ಟಣದ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರ ಸೂಚನೆ ಮೇರೆಗೆ ತಾಲೂಕು ಸರ್ವೇ ಇಲಾಖೆ ಸ್ಥಳದ ಸರ್ವೇ ಕಾರ್ಯ ನಡೆಸಲು ಎಪಿಎಂಸಿ ಕಾರ್ಯದರ್ಶಿಗೆ ನೋಟಿಸ್ ನೀಡಿತ್ತು. ಸರ್ವೇ ಇಲಾಖೆ ನೋಟಿಸ್‌ಗೆ ಫೆ.17ರಂದು ಎಪಿಎಂಸಿ ಕಾರ್ಯದರ್ಶಿಗಳು ಪ್ರಕರಣ ನ್ಯಾಯದಲ್ಲಿರುವುದುನ್ನು ತಿಳಿಸಿ ತನ್ನ ತಕರಾರು ಸಲ್ಲಿಸಿದ್ದರು.

ಎಪಿಎಂಸಿ ತಕರಾರು ಸಲ್ಲಿಸಿದ್ದರೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ಕಂದಾಯ ಇಲಾಖೆ ಅಧಿಕಾರಿಗಳ ತಂಡ ಶುಕ್ರವಾರ ಭೂ ಸರ್ವೇಗೆ ಮುಂದಾಗಿದ್ದಾರೆ. ಇದಕ್ಕೆ ಸ್ಥಳದಲ್ಲಿದ್ದ ವರ್ತಕರು ಮತ್ತು ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸರ್ವೇ ಕಾರ್ಯಕ್ಕೆ ಪ್ರತಿರೋಧ ಒಡ್ಡಿದರು.

ಸರ್ಕಾರಿ ಭೂಮಿಯನ್ನು ಕಾಪಾಡಬೇಕಾದ ಕಂದಾಯ ಇಲಾಖೆ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳು ರಾಜಕೀಯ ಒತ್ತಡ ಹಾಗೂ ಪ್ರಭಾವಕ್ಕೆ ಮಣಿದು ಎಪಿಎಂಸಿ ಕಾರ್ಯದರ್ಶಿಯ ಮೇಲೆ ಒತ್ತಡ ಹಾಕಿ ಎರಡು ಕೋಟಿ ರುಪಾಯಿ ಬೆಲೆ ಬಾಳುವ ಸುಮಾರು ಅರ್ಧ ಎಕರೆ ಸರ್ಕಾರಿ ಭೂಮಿಯನ್ನು ಕಾಂಪೌಂಡ್ ತೆರವುಗೊಳಿಸಿ ಪ್ರಭಾವಿ ರಾಜಕಾರಣಿಗೆ ಸ್ವಾಧೀನಕ್ಕೆ ನೀಡಲು ಮುಂದಾಗಿರುವ ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳು ಮುಂದಾಗಿರುವುದನ್ನು ಸಾರ್ವಜನಿಕರು ತೀವ್ರವಾಗಿ ಖಂಡಿಸಿದರು.

ಪ್ರಕರಣ ನ್ಯಾಯಾಲಯದಲ್ಲಿರುವ ದಾಖಲೆಗಳನ್ನು ಎಪಿಎಂಸಿ ಕಾರ್ಯದರ್ಶಿ ಸತೀಶ್ ಸರ್ವೇ ತಂಡದ ಮುಂದಿಟ್ಟರು. ಪ್ರಕರಣ ನ್ಯಾಯಾಲಯದಲ್ಲಿರುವುದನ್ನು ಗಮನಿಸಿದ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಸರ್ವೇ ಕಾರ್ಯವನ್ನು ಸ್ಥಗಿತಗೊಳಿಸಿತು.

ಎಪಿಎಂಸಿ ಕಾರ್ಯದರ್ಶಿ ಸತೀಶ್ ಮಾತನಾಡಿ, ಎಪಿಎಂಸಿ ಸ್ವಾಧೀನದ 22 ಎಕರೆ ಭೂಮಿಯನ್ನು ನಮಗೆ ಗುರುತಿಸಿ ಹದ್ದು ಬಸ್ತು ಮಾಡಿಸಿಕೊಟ್ಟು ಖಾಸಗಿಯವರ ಜಾಗವು ನಮ್ಮ ಜಾಗದೊಳಗಿದ್ದರೆ ಪಡೆದುಕೊಳ್ಳಲಿ. ಅಕ್ರಮವಾಗಿ ರಾಜಕೀಯವಾಗಿ ಒತ್ತಡ ಹಾಕಿಸಿದರೆ ನಾವು ಜಗ್ಗುವವರಲ್ಲ ಎಂದರು.

ಒಂದೇ ಒಂದು ಅಡಿ ಸರ್ಕಾರಿ ಭೂಮಿ ಅತಿಕ್ರಮಣವಾಗಲು ಬಿಡಲ್ಲ. ಸರ್ಕಾರಿ ಆಸ್ತಿಯ ಉಳಿವಿಗಾಗಿ ಯಾವುದೇ ರೀತಿಯ ಕಾನೂನು ಬದ್ಧವಾದ ಹೋರಾಟ ನಡೆಸಲು ನಾನು ಬದ್ಧನ್ನಾಗಿದ್ದೇನೆ ಎಂದು ಸ್ಪಷ್ಟ ಪಡಿಸಿದರು.

ಎಪಿಎಂಸಿ ಕಚೇರಿಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಭೂದಾಖಲೆಗಳ ಸಹಾಯಕ ನಿರ್ದೇಶಕ ಸಿದ್ದಯ್ಯ, ರಾಜಶ್ವ ನೀರಿಕ್ಷಕ ಜ್ಞಾನೇಶ್, ಕಂದಾಯಾಧಿಕಾರಿ ಜಗಧೀಶ್, ಆಸರೆ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಹೆಚ್.ಬಿ. ಮಂಜುನಾಥ್, ಪುರಸಭೆ ಮಾಜಿ ಸದಸ್ಯ ಕೆ.ಆರ್. ನೀಲಕಂಠ, ಗ್ರಾಪಂ ಸದಸ್ಯ ಆರ್. ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.