ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಭೈರವೈಕ್ಯ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಹಿಮಾಲಯ ಸದೃಶ್ಯ ಶಕ್ತಿಯಾಗಿದ್ದರು. ಅವರನ್ನು ಮೊದಲ ದಿನ ಸ್ಪರ್ಶಿಸಿದ, ದರ್ಶಿಸಿದ ಭಾವ ಹೇಗಿತ್ತೋ ಜೀವಿತದ ಕೊನೆಯ ವೇಳೆಗೆ ಆ ಭಾವನೆ ನೂರ್ಮಡಿಯಾಗಿತ್ತೆಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಬಣ್ಣಿಸಿದರು.ಚುಂಚಶ್ರೀಗಳ ಪಟ್ಟಾಭಿಷೇಕೋತ್ಸವ
ನಗರ ಹೊರವಲಯದ ಸೂಲಾಲಪ್ಪ ದಿನ್ನೆಯ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಮಹಾ ಕುಂಭಾಭಿಷೇಕ, ವಿವಿಧ ಉತ್ಸವಚರಣೆಗಳ ಪ್ರಯುಕ್ತ ಆಯೋಜಿಸಲಾಗಿದ್ದ ಭಕ್ತ ಸಂಗಮ, ಪರಮಪೂಜ್ಯ ಜಗದ್ಗುರು ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿರವರ 80ನೇ ಜಯಂತ್ಯುತ್ಸವ, ಮತ್ತು ಪರಮಪೂಜ್ಯ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ 12ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ಮತ್ತು ರಜತ ತುಲಾಭಾರ ಸಮಾರಂಭದಲ್ಲಿ ಆರ್ಶೀವಚನ ನೀಡಿ ಮಾತನಾಡಿದರು.ಸಂತ ಶ್ರೇಷ್ಠ, ಮಾತೃ ಹೃದಯಿ ಬಾಲಗಂಗಾಧರನಾಥ ಸ್ವಾಮೀಜಿ ಅವರ ದೂರದರ್ಶಿತ್ವ ಮತ್ತು ಜ್ಞಾನದ ಫಲವಾಗಿ ಆದಿಚುಂಚನಗಿರಿ ಮಠದಿಂದ ಸಾವಿರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಸಾಧ್ಯವಾಗಿದೆ’ ಆದಿಚುಂಚನಗಿರಿ ಮಠ ಕೇವಲ ಒಂದು ವರ್ಗಕ್ಕೆ ಸೇರದೆ ಜಾತ್ಯಾತೀತ ಮಠವಾಗಿ ಕಾರ್ಯನಿರತವಾಗಿದೆ ಎಂದರು.
ಸಾಮಾನ್ಯರಂತೆ ಬದುಕಿದ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರು ಯಾವತ್ತೂ ಸಹ ತಾವೊಬ್ಬ ದಾರ್ಶನಿಕ ಎಂದು ಹೇಳಿಕೊಳ್ಳಲಿಲ್ಲ. ಸಾಮಾನ್ಯರಲ್ಲಿ ಅತಿ ಸಾಮಾನ್ಯರಾಗಿ ಬದುಕಿದರು. ಅವರ ಜೀವನ, ಆಚಾರ ವಿಚಾರಗಳು ಎಂದೆಂದಿಗೂ ಪ್ರಸ್ತುತ. ಮನುಷ್ಯನ ದೇಹ ಮಾತ್ರವಲ್ಲದೆ ಮನಸ್ಸು ಶುದ್ಧಿಯಾಗಬೇಕೆಂದು ಶ್ರೀಗಳು ಪ್ರತಿಪಾದಿಸುತ್ತಿದ್ದರು ಎಂದರು.
2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ನಾಥ ಪರಂಪರೆಗೆ ತನ್ನದೇಯಾದ ಮಹತ್ವವಿದೆ. ಜಾತ್ಯತೀತವಾಗಿ ಶ್ರೀಮಠವನ್ನು ಪ್ರೀತಿಸುವ ಭಕ್ತರಿದ್ದಾರೆ. ಶ್ರೀ ಮಠದ 71ನೇ ಪೀಠಾಧ್ಯಕ್ಷರಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಅವರಿಂದ ಕ್ರಾಂತಿಕಾರಕ ಬದಲಾವಣೆಗಳಾಗಿವೆ ಎಂದರು.ಮಠವನ್ನು ಬೆಳೆಸಿದ ಶ್ರೀಗಳು
ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಮಾತನಾಡಿ, ಆದಿಚುಂಚನಗಿರಿ ಮಠದ ಎಪ್ಪತ್ತೊಂದನೆಯ ಪೀಠಾಧ್ಯಕ್ಷರಾಗಿ ಜಗದ್ಗುರು ಡಾ. ಬಾಲಗಂಗಾಧರನಾಥ ಸ್ವಾಮೀಜಿ ಶ್ರೀಮಠಕ್ಕೆ ಪದಾರ್ಪಣೆ ಮಾಡಿದರೋ, ಅವರ ಹಸ್ತಗುಣ ಅದೇನು ಮೋಡಿ ಮಾಡಿತೋ ಕೆಲವೇ ವರ್ಷಗಳಲ್ಲಿ ಚುಂಚನಗಿರಿ ಕ್ಷೇತ್ರ ಅಧ್ಯಾತ್ಮ, ಅನ್ನ, ಆಶ್ರಯ, ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ ಕಂಡಿತು ಎಂದು ಹೇಳಿದರು.ಈ ಭೌತಿಕ ಪ್ರಗತಿ ಮತ್ತು ಧಾರ್ಮಿಕ ಶಕ್ತಿ ಸಂಚಯದ ಹಿಂದೆ ಮಹಾಗುರುಗಳ ಅಪಾರ ಶ್ರಮ, ತ್ಯಾಗ, ಸಂಘಟನಾ ಸಾಮರ್ಥ್ಯ, ತಪಸ್ಸು ಕೆಲಸ ಮಾಡಿದೆ. ನೋಡನೋಡುತ್ತಲೇ ನೂರಾರು ಶಾಲಾಕಾಲೇಜುಗಳು, ವೈದ್ಯಕೀಯ ಮಹಾವಿದ್ಯಾಲಯ, ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ನರ್ಸಿಂಗ್-ಡಿಪ್ಲೊಮಾ- ಶಿಕ್ಷಣ ಮಹಾವಿದ್ಯಾಲಯಗಳು ಎದ್ದು ನಿಂತವು. ಅವರ ತಪೋಬಲದ ಫಲವಾಗಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ದೇಶವಿದೇಶಗಳಲ್ಲಿ ಶಿಷ್ಯರು, ಭಕ್ತರು, ಶ್ರದ್ಧಾಳುಗಳನ್ನು ಹೊಂದಿದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಮಹಾ ಕುಂಭಾಭಿಷೇಕವನ್ನು ಡಾ. ನಿರ್ಮಲಾನಂದ ನಾಥ ಸ್ವಾಮೀಜಿ ನೇತೃತ್ವದಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ , ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಎಲ್ಲಾ ಶಾಖೆಯ ಸ್ವಾಮೀಜಿಗಳು, ಶಾಸಕರಾದ ಕೆ.ಎಚ್.ಪುಟ್ಟಸ್ವಾಮಿಗೌಡ , ಕೆ.ವೈ.ನಂಜೇಗೌಡ, ಬಿ.ಎನ್.ರವಿಕುಮಾರ್, ವೆಂಕಟಶಿವಾರೆಡ್ಡಿ, ಅನಿಲ್ ಕುಮಾರ್, ಮಾಜಿ ಶಾಸಕ ವೈ.ಎ.ನಾರಾಯಣಸ್ವಾಮಿ, ಕೆ.ವಿ.ನಾಗರಾಜ್, ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಹಾಗೂ ಭಕ್ತ ಸಮೂಹ ಇದ್ದರು.