ವಿವಿಧ ಪ್ರಮಾಣಪತ್ರ ಪಡೆಯಲು ಜನರ ಅಲೆದಾಟ..!

| Published : Feb 23 2025, 12:31 AM IST

ಸಾರಾಂಶ

ಕಳೆದ ಹನ್ನೆರಡು ದಿನಗಳಿಂದ ತಾಲೂಕು, ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಗ್ರಾಮಾಡಳಿತಾಧಿಕಾರಿಗಳು ತಮ್ಮ ಸಮಸ್ಯೆ ಮತ್ತು ಬೇಡಿಕೆ ಈಡೇರಿಕೆಗಾಗಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದ ಹಿನ್ನೆಲೆಯಲ್ಲಿ ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು ತಮ್ಮ ಜಾತಿ, ಆದಾಯ, ಒಬಿಸಿ, ವಾಸಸ್ಥಳ ಪ್ರಮಾಣ ಪತ್ರ ಸೇರಿದಂತೆ ಇತರೆ ದಾಖಲಾತಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಎಲ್.ವಿ.ನವೀನ್‌ಕುಮಾರ್

ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ

ಕಳೆದ ಹನ್ನೆರಡು ದಿನಗಳಿಂದ ತಾಲೂಕು, ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಗ್ರಾಮಾಡಳಿತಾಧಿಕಾರಿಗಳು ತಮ್ಮ ಸಮಸ್ಯೆ ಮತ್ತು ಬೇಡಿಕೆ ಈಡೇರಿಕೆಗಾಗಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದ ಹಿನ್ನೆಲೆಯಲ್ಲಿ ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು ತಮ್ಮ ಜಾತಿ, ಆದಾಯ, ಒಬಿಸಿ, ವಾಸಸ್ಥಳ ಪ್ರಮಾಣ ಪತ್ರ ಸೇರಿದಂತೆ ಇತರೆ ದಾಖಲಾತಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮಾಡಳಿತಾಧಿಕಾರಿಗಳ ಬೇಡಿಕೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ವಿದ್ಯಾರ್ಥಿಗಳು, ನೌಕರಿ ಬಯಸುವವರು ಹಾಗೂ ಸಾರ್ವಜನಿಕರು ಪ್ರಮಾಣ ಪತ್ರಗಳನ್ನು ಮಾಡಿಸಿಕೊಳ್ಳಲು ಸಾಧ್ಯವಾಗದೆ ನಿತ್ಯ ತೊಂದರೆ ಅನುಭವಿಸುವಂತಾಗಿದೆ.

ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಮುಂದಿನ ಇಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ಉನ್ನತ ಶಿಕ್ಷಣ ಪಡೆಯಲು ಆನ್‌ಲೈನ್ ಮೂಲಕ ಸಿಇಟಿ, ನೀಟ್, ಜೆಇಇ ಹಾಗೂ ಕಾಮೆಡ್‌ ಕೆ ಗಳಿಗೆ ಅರ್ಜಿಗಳನ್ನು ಭರ್ತಿ ಮಾಡಲು ಅವಕಾಶ ನೀಡಲಾಗಿದೆ.

ಆದರೆ, ಬಹುತೇಕ ಅರ್ಜಿಗಳಿಗೂ ಓಬಿಸಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕೇಳಿರುವ ಕಾರಣ ವಿದ್ಯಾರ್ಥಿಗಳು ಪ್ರಮಾಣ ಪತ್ರಗಳನ್ನು ಮಾಡಿಸಿಕೊಂಡು ಅರ್ಜಿ ಹಾಕಲು ಸಾಧ್ಯವಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ ಮುಂದಿನ ವಿದ್ಯಾಭ್ಯಾಸದ ಪರಿಸ್ಥಿತಿ ಹೇಗೆ? ಎಂಬ ಚಿಂತೆಯಲ್ಲಿದ್ದಾರೆ.

ಆದರ್ಶ ವಿದ್ಯಾಲಯ ಶಾಲೆಯಲ್ಲಿ 6ನೇ ತರಗತಿಗೆ ವ್ಯಾಸಂಗ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಫೆ.28ರವರೆಗೆ ಅರ್ಜಿ ಆಹ್ವಾನಿಸಲಾಗಿದೆ. 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತಾಲೂಕು ಹಾಗೂ 6ನೇ ತರಗತಿಗೆ ಪ್ರವೇಶ ಬಯಸುವ ಆದರ್ಶ ವಿದ್ಯಾಲಯ ಶಾಲೆ ಬೇರೆ ತಾಲೂಕಲ್ಲಿ ಕಡ್ಡಾಯವಾಗಿ ವಾಸ ಸ್ಥಳ ಪ್ರಮಾಣ ಪತ್ರ ಅಗತ್ಯವಿದೆ. ಹೀಗಾಗಿ ಪುಟ್ಟ ಮಕ್ಕಳು ಹಾಗೂ ಅವರ ಪೋಷಕರು ಸಹ ತೊಂದರೆ ಅನುಭವಿಸುವಂತಾಗಿದೆ.

ಜೊತೆಗೆ ಕೇಂದ್ರ ಸರ್ಕಾರ ಸೌಮ್ಯದ ರೈಲ್ವೆ ಹಾಗೂ ಅಂಚೆ ಇಲಾಖೆಗಳಲ್ಲಿ ಹುದ್ದೆಗಾಗಿ ಅರ್ಜಿ ಆಹ್ವಾನಿಸಿವೆ. ಅರ್ಜಿ ಸಲ್ಲಿಸಲು ಜಾತಿ, ಆದಾಯ ಹಾಗೂ ಓಬಿಸಿ ಪ್ರಮಾಣ ಪತ್ರ ಕಡ್ಡಾಯ ಮಾಡಿದೆ. ಈಗಾಗಲೆ ಐಟಿಐ ವಿದ್ಯಾಭ್ಯಾಸ ಮುಗಿಸಿ ನಂತರ ರೈಲ್ವೆ ಇಲಾಖೆಯಲ್ಲೂ ಒಂದು ವರ್ಷದ ಅನುಭವ ಪಡೆದ ಪತ್ರದೊಂದಿಗೆ ಕಾಯ್ದು ಕುಳಿತಿರುವವರ ಪರಿಸ್ಥಿತಿ ಹೇಳತೀರದಾಗಿದೆ.

ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಸರ್ಕಾರ ಕೊಡುತ್ತಿಲ್ಲ, ಗ್ರಾಮ ಆಡಳಿತ ಅಧಿಕಾರಿಗಳು ಬಿಡುತ್ತಿಲ್ಲ. ಆದರೆ ತೊಂದರೆ ಅನುಭವಿಸುತ್ತಿರುವುದು ಮಾತ್ರ ಸಾಮಾನ್ಯ ಜನರು, ರೈತರು ವಿದ್ಯಾರ್ಥಿಗಳು. ಸರ್ಕಾರ ಶೀಘ್ರ ಸಮಸ್ಯೆಗಳನ್ನು ಈ ಬಗೆ ಹರಿಸುವಂತೆ ಸಾರ್ವಜನಿಕರ ಆಗ್ರಹಿಸಿದ್ದಾರೆ.

ವೃದ್ಯಾಪ್ಯ, ಅಂಗವಿಕಲ, ವಿಧವಾ ವೇತನ, ಕೃಷಿ ಸಂಬಂಧ ಪ್ರಮಾಣ ಪತ್ರಗಳು, ಬ್ಯಾಂಕ್‌ಗಳಲ್ಲಿ ಸೌಲ ಸೌಲಭ್ಯ ಪಡೆಯಲು ಕಂದಾಯ ರಸೀದಿ, ಪೌತಿ ಖಾತೆ ಸೇರಿದಂತೆ ಇತರೆ ಖಾತೆ ವಗೈರಿಗಳಿಗೆ ಗ್ರಾಮ ಆಡಳಿತ ಅಧಿಕಾರಿಗಳಿಂದ ವರದಿ ಬೇಕಾಗಿದೆ. ಇದರಿಂದ ಸಾರ್ವಜನಿಕರು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ರಾಜ್ಯ ಸರ್ಕಾರ ಸಮಸ್ಯೆ ಬಗೆ ಹರಿಸಬೇಕು.

- ಕಿರಂಗೂರು ಪಾಪು, ರೈತ ಹೋರಾಟಗಾರ

ವಿದ್ಯಾರ್ಥಿಗಳು, ನೌಕರಿ ಬಯಸುವವರು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಕಂದಾಯ ನಿರೀಕ್ಷಕರ ಲಾಗಿನ್ ಮೂಲಕ ಓಬಿಸಿ, ಜಾತಿ, ವಾಸಸ್ಥಳ ಪ್ರಮಾಣ ಪತ್ರ ಸೇರಿದಂತೆ ಇತರೆ ಪ್ರಮಾಣ ಪತ್ರಗಳನ್ನು ಮಾಡಿಸಿಕೊಡಲಾಗಿದೆ. ವಿದ್ಯಾಭ್ಯಾಸದ ಸಲುವಾಗಿ ಪ್ರಮಾಣ ಪತ್ರ ಕೇಳಿ ಬರುವ ಎಷ್ಟೋ ವಿದ್ಯಾರ್ಥಿಗಳಿಗೆ ಕೇವಲ ಒಂದು ದಿನದಲ್ಲಿ ಪ್ರಮಾಣ ಪತ್ರ ನೀಡಿರುವ ಉದಾಹರಣಿಗಳಿವೆ. ಯಾವ ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿ ನೋಡಿಕೊಂಡಿದ್ದೇವೆ. ನೌಕರರ ಸಮಸ್ಯೆ ಬಗೆ ಹರಿದಿರುವುದಾಗಿ ತಿಳಿದು ಬಂದಿದೆ. ಸೋಮವಾರದಿಂದ ಎಂದಿನಂತೆ ಎಲ್ಲಾ ಕಾರ್ಯಗಳು ಸುಲಲಿತವಾಗಿ ನಡೆಯಲಿವೆ.

-ಪರಶುರಾಮ್ ಸತ್ತಿಗೇರಿ, ತಹಸೀಲ್ದಾರ್

ಗ್ರಾಮ ಆಡಳಿತ ಅಧಿಕಾರಿಗಳ ಬಹುತೇಕ ಶೇ.80ರಷ್ಟು ಬೇಡಿಕೆಗಳನ್ನು ಈಡೇರಿಸಿಕೊಡುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯದ್ಯಕ್ಷ ಷಡಾಕ್ಷರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಪ್ಪಿದೆ. ಸೋಮವಾರದಿಂದ ಎಂದಿನಂತೆ ಕರ್ತವ್ಯ ನಿರ್ವಹಿಸಲಿದ್ದೇವೆ. ಜೊತೆಗೆ ಫೆ.27ರಂದು ರಾಜ್ಯಾಧ್ಯಕ್ಷರು ಸಂಘದ ಪದಾಧಿಕಾರಿಗಳ ಸಭೆ ಕರೆದಿದ್ದಾರೆ. ಈ ಬಗ್ಗೆ ಮುಂದಿನ ತೀರ್ಮಾನವನ್ನ ಚರ್ಚಿಸಿ, ತಿಳಿಸಲಾಗುವುದು.

-ರಮೇಶ್ , ತಾಲೂಕು, ಗ್ರಾಮ ಆಡಳಿತಾಧಿಕಾರಿಗಳ ಅಧ್ಯಕ್ಷ